ಸಾರಾಂಶ
ಬೆಂಗಳೂರು : ನಗರದ ಉದ್ಯಾನವನಗಳಲ್ಲಿ ಬಿದ್ದ ಮಳೆ ನೀರು ವ್ಯರ್ಥವಾಗದಂತೆ ಸಂಗ್ರಹಿಸಲು ಮತ್ತು ಇಂಗಿಸಲು ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ಒಂದು ವರ್ಷದಲ್ಲಿ 1,652 ಇಂಗು ಗುಂಡಿ ನಿರ್ಮಿಸಲು ಬಿಬಿಎಂಪಿ ಮುಂದಾಗಿದೆ.
ಯುನೈಟೆಡ್ ವೇ ಆಫ್ ಬೆಂಗಳೂರು ಸಂಸ್ಥೆಯು ಸಿಎಸ್‌ಆರ್ ನಿಧಿಯಡಿ ಉದ್ಯಾನವನಗಳಲ್ಲಿ ಇಂಗು ಗುಂಡಿ ನಿರ್ಮಿಸಲು ಪಾಲಿಕೆಯ ತೋಟಗಾರಿಕೆ ವಿಭಾಗಕ್ಕೆ ಮಾಡಿಕೊಂಡಿದ್ದ ಮನವಿ ಪರಿಶೀಲಿಸಿ ಪಾಲಿಕೆ ಒಪ್ಪಿಗೆ ನೀಡಿದೆ. ಬಿಬಿಎಂಪಿಯ ದಕ್ಷಿಣ ವಲಯದ 43 ಉದ್ಯಾನವನ, ಯಲಹಂಕದ 24, ಪಶ್ಚಿಮ ವಲಯದ 63, ಆರ್ ಆರ್‌ನಗರ ವಲಯದ 98 ಹಾಗೂ ಪೂರ್ವ ವಲಯದ 104 ಉದ್ಯಾನವನದಲ್ಲಿ 1652 ಇಂಗು ಗುಂಡಿ ನಿರ್ಮಿಸಲಾಗುತ್ತದೆ.
ವಿವಿಧ ಷರತ್ತು: ನಿರ್ಮಾಣಕ್ಕೆ ಮುಂದೆ ಬಂದಿರುವ ಖಾಸಗಿ ಸಂಸ್ಥೆಗೆ ಕೆಲವು ಷರತ್ತುಗಳನ್ನು ಬಿಬಿಎಂಪಿ ವಿಧಿಸಿದೆ. 2024ರ ನವೆಂಬರ್‌ನಿಂದ 2025ರ ಸೆಪ್ಟಂಬರ್ ಅಂತ್ಯದೊಳಗೆ ಇಂಗು ಗುಂಡಿ ನಿರ್ಮಿಸಬೇಕು. ಇಂಗು ಗುಂಡಿ ನಿರ್ಮಿಸುವ ವೇಳೆ ಉದ್ಯಾನವನದ ಸಸ್ಯ ಪ್ರಬೇಧ ಮತ್ತು ಭೂ ದೃಶ್ಯಕ್ಕೆ ಹಾನಿ ಉಂಟಾಗಬಾರದು. ಉದ್ಯಾನವನದ ಪಾತ್‌ವೇ ಹಾಗೂ ಉದ್ಯಾನವನದ ಆಸ್ತಿಗೆ ಧಕ್ಕೆ ಉಂಟಾಗಬಾರದು. ಉಂಟಾದರೆ ಸಂಸ್ಥೆಯೇ ಸ್ವಂತ ವೆಚ್ಚದಲ್ಲಿ ಸರಿಪಡಿಸಬೇಕು. ಇಂಗು ಗುಂಡಿ ನಿರ್ಮಾಣದ ವೇಳೆ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಉಂಟಾಗಬಾರದು.
ಬಿಬಿಎಂಪಿ ಈಗಾಗಲೇ ನಿರ್ಮಿಸಿರುವ 634 ಇಂಗು ಗುಂಡಿ ಹಾಗೂ ಸಂಸ್ಥೆಯು ನಿರ್ಮಿಸುವ 1652 ಇಂಗು ಗುಂಡಿಗಳ ನಿರ್ವಹಣೆಯನ್ನು ಸಂಸ್ಥೆಯೇ ಮಾಡಬೇಕು. ಇಂಗು ಗುಂಡಿ ನಿರ್ಮಾಣದ ಸ್ಥಳ, ವಿನ್ಯಾಸ ಹಾಗೂ ಇನ್ನಿತರೆ ತಾಂತ್ರಿಕ ಸಲಹೆಗಳನ್ನು ವಲಯ ಮಟ್ಟದ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಿಂದ ಪಡೆದುಕೊಳ್ಳಬೇಕೆಂದು ತೋಟಗಾರಿಕೆ ವಿಭಾಗದ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್ ಆದೇಶದಲ್ಲಿ ತಿಳಿಸಿದ್ದಾರೆ.