ಬೆಂಗಳೂರು : ರಾಜಕಾಲುವೆ ಒತ್ತುವರಿ ದೃಢಪಟ್ಟಿದ್ದರೂ ತೆರವು ಕಾರ್ಯ ಕೈ ಬಿಟ್ಟ ಬಿಬಿಎಂಪಿ ?

| Published : Nov 10 2024, 01:31 AM IST / Updated: Nov 10 2024, 06:37 AM IST

ಸಾರಾಂಶ

ರಾಜಕಾಲುವೆ ಒತ್ತುವರಿ ದೃಢಪಟ್ಟಿದ್ದರೂ ಮಳೆ ನೀರಿನ ಹರಿವಿಗೆ ಯಾವುದೇ ತೊಂದರೆ ಉಂಟಾಗದಿರುವ ಕಾರಣ ನೀಡಿ ಹಲವು ಪ್ರಕರಣಗಳನ್ನು ತೆರವು ಕಾರ್ಯಾಚರಣೆಯಿಂದ ಕೈ ಬಿಡುವುದಕ್ಕೆ ಬಿಬಿಎಂಪಿ ನಿರ್ಧರಿಸಿದೆ.

ವಿಶ್ವನಾಥ ಮಲೇಬೆನ್ನೂರು

 ಬೆಂಗಳೂರು : ರಾಜಕಾಲುವೆ ಒತ್ತುವರಿ ದೃಢಪಟ್ಟಿದ್ದರೂ ಮಳೆ ನೀರಿನ ಹರಿವಿಗೆ ಯಾವುದೇ ತೊಂದರೆ ಉಂಟಾಗದಿರುವ ಕಾರಣ ನೀಡಿ ಹಲವು ಪ್ರಕರಣಗಳನ್ನು ತೆರವು ಕಾರ್ಯಾಚರಣೆಯಿಂದ ಕೈ ಬಿಡುವುದಕ್ಕೆ ಬಿಬಿಎಂಪಿ ನಿರ್ಧರಿಸಿದೆ.

ರಾಜಕಾಲುವೆ ಒತ್ತುವರಿ ಗುರುತಿಸಿದ ಪ್ರಕರಣಗಳ ಪೈಕಿ ಬಿಬಿಎಂಪಿಯ ಅಧಿಕಾರಿಗಳು ಕೆಲವು ಪ್ರಕರಣಗಳನ್ನು ತೆರವು ಕಾರ್ಯಾಚರಣೆಯಿಂದ ಮುಕ್ತಗೊಳಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಪೈಕಿ ಅತೀ ಹೆಚ್ಚು ಕಳೆದ ತಿಂಗಳು ಸುರಿದ ಮಳೆಯಿಂದ 30ಕ್ಕೂ ಅಧಿಕ ಬಡಾವಣೆಗಳು ಅಕ್ಷರಶಃ ದ್ವೀಪಗಳಂತೆ ಮಾರ್ಪಟ್ಟು ರಸ್ತೆ ಸಂಪರ್ಕ ಕಳೆದುಕೊಂಡು ಯಲಹಂಕ ವಲಯದ ವ್ಯಾಪ್ತಿಗೆ ಸೇರಿವೆ ಎಂಬುದು ಗಮನಾರ್ಹ ಸಂಗತಿಯಾಗಿದೆ.

ಯಲಹಂಕ ವಲಯದಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಸುರಿದ ಮಳೆಯಿಂದ ಬರೋಬ್ಬರಿ ಒಂದು ಸಾವಿರಕ್ಕೂ ಅಧಿಕ ಮನೆಗಳಿಗೆ ರಾಜಕಾಲುವೆ ನೀರು ನುಗ್ಗಿ ಜನಜೀವನ ಸಂಪೂರ್ಣ ಅಸ್ಥವ್ಯಸ್ಥಗೊಂಡು ಎರಡ್ಮೂರು ದಿನ ಈ ಭಾಗದ ನಿವಾಸಿಗಳು ದೋಣಿಯಲ್ಲಿ ಓಡಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಆ ಪ್ರದೇಶದ ಸುಮಾರು 55 ರಾಜಕಾಲುವೆ ಒತ್ತುವರಿ ಪ್ರಕರಣಗಳನ್ನು ತೆರವು ಕಾರ್ಯಾಚರಣೆಯಿಂದ ಕೈ ಬಿಡುವುದಕ್ಕೆ ತೀರ್ಮಾನಿಸಿರುವುದು ಅಚ್ಚರಿಗೆ ಕಾರಣವಾಗಿದೆ.

90ಕ್ಕೂ ಅಧಿಕ ಪ್ರಕರಣ ಕೈ ಬಿಡಲು ಸಿದ್ಧತೆ:

ಯಲಹಂಕ ವಲಯದ 55 ಪ್ರಕರಣ ಒಳಗೊಂಡಂತೆ ಪೂರ್ವ ವಲಯದಲ್ಲಿ 12, ಪಶ್ಚಿಮ ವಲಯದಲ್ಲಿ 10 ಹಾಗೂ ದಕ್ಷಿಣ ವಲಯದಲ್ಲಿ ಸುಮಾರು 20ಕ್ಕೂ ಅಧಿಕ ಪ್ರಕರಣಗಳಲ್ಲಿ ಮಳೆ ನೀರಿನ ಹರಿವಿಗೆ ಯಾವುದೇ ಅಡ್ಡಿ ಉಂಟಾಗುತ್ತಿಲ್ಲ. ಹಾಗಾಗಿ, ರಾಜಕಾಲುವೆ ಒತ್ತುವರಿ ತೆರವುಗೊಳಿಸುವ ಅವಶ್ಯಕತೆ ಇಲ್ಲ ಎಂದು ಆಯಾ ವಲಯ ಆಯುಕ್ತರು ವರದಿ ನೀಡಿದ್ದಾರೆ.

ಅಫಿಡೇವಿಟ್‌ ಸಲ್ಲಿಕೆಗೆ ಸೂಚಿಸಿ: ರಾಜಕಾಲುವೆ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಮುಖ್ಯ ಆಯುಕ್ತರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಈ ವೇಳೆ ರಾಜಕಾಲುವೆ ಒತ್ತುವರಿಗೆ ಸಂಬಂಧಿಸಿದಂತೆ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಾಗಿ, ರಾಜಕಾಲುವೆ ಒತ್ತುವರಿ ಆಗಿದ್ದರೂ, ಮಳೆ ನೀರಿನ ಹರಿವಿನಿಂದ ಯಾವುದೇ ತೊಂದರೆ ಉಂಟಾಗದ ಪ್ರಕರಣಗಳ ಕುರಿತು ಹೈ ಕೋರ್ಟ್‌ಗೆ ವರದಿ ಸಲ್ಲಿಸುವುದು ಅಗತ್ಯವಾಗಿದೆ. ಹಾಗಾಗಿ, ಹೈಕೋರ್ಟ್‌ಗೆ ಅಫಿಡೇವಿಟ್‌ ಸಲ್ಲಿಕೆಗೆ ವಲಯ ಆಯುಕ್ತರಿಗೆ ತುಷಾರ್‌ ಗಿರಿನಾಥ್‌ ನಿರ್ದೇಶಿಸಿದ್ದಾರೆ.

ಒಟ್ಟು 1,712 ತೆರವು ಬಾಕಿ: ನಗರದಲ್ಲಿ ಒಟ್ಟು 1712 ರಾಜಕಾಲುವೆ ಒತ್ತುವರಿ ತೆರವು ಮಾಡುವುದು ಬಾಕಿ ಇದೆ. ಈ ಪೈಕಿ 1,348 ಪ್ರಕರಣಗಳು ಸರ್ವೇ ಹಾಗೂ ವಿಚಾರಣೆ ಹಂತದಲ್ಲಿಯೇ ಉಳಿದುಕೊಂಡಿವೆ. 196 ಪ್ರಕರಣಗಳು ನ್ಯಾಯಾಲಯದಲ್ಲಿ ಇವೆ. ಈ ಪೈಕಿ 161 ಪ್ರಕರಣಗಳಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಉಳಿದ 36 ಪ್ರಕರಣಗಳು ಭೂ ಕಬಳಿಕೆಗೆ ಸಂಬಂಧಿಸಿದ ವಿಶೇಷ ನ್ಯಾಯಾಲಯದಲ್ಲಿ ಇವೆ.

ಈಗಾಗಲೇ ಸರ್ವೇ ಕಾರ್ಯ ಪೂರ್ಣಗೊಂಡು ವಿಚಾರಣೆ ಅಂತಿಮಗೊಂಡು, ರಾಜಕಾಲುವೆ ಒತ್ತುವರಿ ಆಗಿರುವುದು 167 ಪ್ರಕರಣಗಳಲ್ಲಿ ದೃಢಪಟ್ಟಿವೆ. ಈ ಕುರಿತು ಈಗಾಗಲೇ ತೆರವುಗೊಳಿಸುವುದಕ್ಕೆ ಆದೇಶ ನೀಡಲಾಗಿದೆ. ಆದರೆ, ಇನ್ನೂ ತೆರವು ಕಾರ್ಯ ಮಾಡಿಲ್ಲ.

ರಾಜಕಾಲುವೆ ಒತ್ತುವರಿ ವಿವರ

ವಲಯಒತ್ತುವರಿ ಸಂಖ್ಯೆ

ಪೂರ್ವ123

ಪಶ್ಚಿಮ46

ದಕ್ಷಿಣ46

ಕೋರಮಂಗಲ ಕಣಿವೆ104

ಯಲಹಂಕ359

ಮಹದೇವಪುರ492

ಬೊಮ್ಮನಹಳ್ಳಿ201

ಆರ್‌ಆರ್‌ನಗರ104

ದಾಸರಹಳ್ಳಿ207

ಒಟ್ಟು1,712