ಭೀಕರ ಬರ ಎದುರಿಸಲು ಗುಳೆ ದಾರಿ ಹಿಡಿದ ಅನ್ನದಾತರು
KannadaprabhaNewsNetwork | Published : Oct 09 2023, 12:45 AM IST
ಭೀಕರ ಬರ ಎದುರಿಸಲು ಗುಳೆ ದಾರಿ ಹಿಡಿದ ಅನ್ನದಾತರು
ಸಾರಾಂಶ
ಜಿಲ್ಲೆಯಲ್ಲಿ ಈ ಬಾರಿ ಭೀಕರ ಕ್ಷಾಮ ಆವರಿಸಿದೆ. ಸ್ವತಃ ಕೇಂದ್ರ ಬರ ಅಧ್ಯಯನ ತಂಡದ ಸದಸ್ಯರೇ ಜಿಲ್ಲೆಯಲ್ಲಿ ಆವರಿಸಿರುವ ಬರವನ್ನು ಕಂಡು ದಂಗಾಗಿದ್ದಾರೆ.
ಕೃಷ್ಣ ಎನ್. ಲಮಾಣಿ ಕನ್ನಡಪ್ರಭ ವಾರ್ತೆ ಹೊಸಪೇಟೆ ಭೀಕರ ಬರಗಾಲಕ್ಕೆ ವಿಜಯನಗರ ಜಿಲ್ಲೆಯ ಅನ್ನದಾತರು ತತ್ತರಿಸಿದ್ದು, ಈ ಸಂಕಷ್ಟದಿಂದ ಪಾರಾಗಲು ಗುಳೆ ಮಾರ್ಗ ಕಂಡುಕೊಂಡಿದ್ದಾರೆ. ರೈತರು ಜಮೀನುಗಳನ್ನು ಬಿಟ್ಟು ಮಹಾನಗರಗಳಿಗೆ ಗುಳೆ ಹೊರಟಿದ್ದು, ಹಳ್ಳಿ, ತಾಂಡಾಗಳು ಖಾಲಿಯಾಗುತ್ತಿವೆ. ಜಿಲ್ಲೆಯಲ್ಲಿ ಈ ಬಾರಿ ಭೀಕರ ಕ್ಷಾಮ ಆವರಿಸಿದೆ. ಸ್ವತಃ ಕೇಂದ್ರ ಬರ ಅಧ್ಯಯನ ತಂಡದ ಸದಸ್ಯರೇ ಜಿಲ್ಲೆಯಲ್ಲಿ ಆವರಿಸಿರುವ ಬರವನ್ನು ಕಂಡು ದಂಗಾಗಿದ್ದಾರೆ. ಜಿಲ್ಲೆಯ ಆರು ತಾಲೂಕುಗಳನ್ನು ರಾಜ್ಯ ಸರ್ಕಾರ ಬರಪೀಡಿತ ಎಂದು ಘೋಷಣೆ ಮಾಡಿದೆ. ಈ ಬಾರಿ ಮಳೆರಾಯ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಬಿತ್ತನೆ ಮಾಡಿದ ಬೆಳೆಗಳು ಕೂಡ ಬಾರದೇ ರೈತರು ಕಂಗಾಲಾಗಿದ್ದಾರೆ. ಬದುಕು ನಡೆಸಲು ಈಗ ರೈತರೇ ಗುಳೆ ಹೊರಟಿದ್ದಾರೆ. ಭೀಕರ ಕ್ಷಾಮ: ಜಿಲ್ಲೆಯಲ್ಲಿ ಅಂತರ್ಜಲಮಟ್ಟ ಕೂಡ ಕುಸಿಯುತ್ತಾ ಸಾಗಿದೆ. ಕೆರೆಗಳು ಬತ್ತಿರುವ ಹಿನ್ನೆಲೆಯಲ್ಲಿ ಬೋರ್‌ವೆಲ್‌ಗಳಲ್ಲೂ ನೀರು ಕಡಿಮೆಯಾಗುತ್ತಿದೆ. ಹಾಗಾಗಿ ಪಂಪ್‌ಸೆಟ್ ಬಳಸಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದ ರೈತರು ಈಗ ಕಂಗಾಲಾಗಿದ್ದಾರೆ. ಎತ್ತು, ದನಕರುಗಳು, ಕುರಿ, ಮೇಕೆಗಳಿಗೆ ಮೇವಿಲ್ಲದೇ ರೈತರು ಕಂಗಾಲಾಗಿದ್ದಾರೆ. ಈಗ ಇರುವ ದನಕರುಗಳನ್ನು ಮಾರಲು ಹೊರಟಿದ್ದಾರೆ. ಜಿಲ್ಲೆಯ ಕೆರೆಗಳು ಸದಾ ಭರ್ತಿಯಾಗಿರುತ್ತಿದ್ದವು. ಹಳ್ಳ, ಕೊಳ್ಳ, ಕೆರೆ ಕುಂಟೆಗಳಲ್ಲಿ ನೀರು ತುಂಬಿ ಸಮೃದ್ಧತೆ ನೆಲೆಸುತ್ತಿತ್ತು. ಈ ಬಾರಿ ಮಳೆರಾಯ ಬಾರದ್ದರಿಂದ; ಕೆರೆಗಳು ಬತ್ತುತ್ತಿವೆ. ನೀರಿಲ್ಲದ್ದರಿಂದ ಅಂತರ್ಜಲ ಪಾತಾಳಕ್ಕೆ ಕುಸಿದಿದೆ. ತರಕಾರಿ, ಹೂವು ಬೆಳೆದು ಜೀವನ ಸಾಗಿಸೋಣ ಎಂದರೂ ಬೋರ್‌ವೆಲ್‌ಗಳಲ್ಲಿ ನೆಟ್ಟಗೆ ನೀರು ಬರುತ್ತಿಲ್ಲ ಎಂದು ರಾರಾಳ ತಾಂಡಾದ ರೈತ ರಂಗಾರೆಡ್ಡಿ ನಾಯ್ಕ ಕನ್ನಡಪ್ರಭದ ಬಳಿ ತಮ್ಮ ಅಳಲು ತೋಡಿಕೊಂಡರು. ಗುಳೆಯೇ ಆಧಾರ: "ಕಳೆದ ವರ್ಷ ಮೆಕ್ಕೆಜೋಳ ಬೆಳೆದು ಲಾಭ ಕಂಡುಕೊಂಡಿದ್ದೇವು. ಹಾಗಾಗಿ ಈ ಬಾರಿ ಬೆಳೆ ವಿಮೆ ಕೂಡ ಮಾಡಿಸಿರಲಿಲ್ಲ. ಈಗ ನೋಡಿದರೆ ಮಳೆ ಕೈಕೊಟ್ಟಿದೆ. ಬೀಜ, ಗೊಬ್ಬರಕ್ಕೂ ಸಾಲ ಮಾಡಿಕೊಂಡಿದ್ದೇವೆ. ಮೆಕ್ಕೆಜೋಳ ಬೆಳೆದು ಫಸಲು ನಿಮ್ಮ ಬಳಿಯೇ ಮಾರಾಟ ಮಾಡುತ್ತೇವೆ ಎಂದು ದಲ್ಲಾಳಿ ಅಂಗಡಿಗಳಲ್ಲೂ ಸಾಲ ಮಾಡಿಕೊಂಡಿದ್ದೇವೆ. ಬೇರೆ ದಾರಿ ಕಾಣುತ್ತಿಲ್ಲ. ಹಾಗಾಗಿ ಗುಳೆ ಹೊರಡಲು ನಿರ್ಧಾರ ಮಾಡಿದ್ದೇವೆ " ಎಂದು ರೈತ ಕೇಶು ನಾಯ್ಕ ನೋವಿನಿಂದ ನುಡಿದರು. ಈ ಭಾಗದಲ್ಲಿ ಉತ್ತಮ ಮಳೆಯಾಗುತ್ತಿತ್ತು. ಹಾಗಾಗಿ ನಾವು ಮೆಕ್ಕೆಜೋಳ ಬೆಳೆದು ಸ್ವಲ್ಪ ಆದಾಯ ಕಂಡುಕೊಳ್ಳುತ್ತಿದ್ದೇವು, ಈಗ ಈ ಬೆಳೆಯೇ ಕಣ್ಣೆದುರು ಒಣಗಿದೆ. ಶೇಂಗಾ, ನವಣಿ ಹಾಕಿದರೂ ಕಾಳು ಕಟ್ಟಿಲ್ಲ. ಸೂರ್ಯಕಾಂತಿ ಅಂತೂ ಮೊದಲೇ ಕೈಕೊಟ್ಟಿದೆ. ಕೃಷಿ ಇಲಾಖೆಯಿಂದ ಸರ್ವೆ ಕೂಡ ಮಾಡಲಾಗಿದೆ. ಇನ್ನೂ ಪರಿಹಾರ ಬಂದಿಲ್ಲ. ನಾವು ಪರಿಹಾರ ನೋಡುತ್ತಾ ಕುಳಿತರೆ ಸಾಲಕ್ಕೆ ಬಡ್ಡಿಯೂ ಬೆಳೆಯುತ್ತದೆ. ದಿನಾ ಕೆಲ್ಸ ಮಾಡಿ, ಅಭ್ಯಾಸ ಇರುವ ನಮಗೆ ಕುಂತು ಉಣ್ಣಲು ಆಗುವುದಿಲ್ಲ. ಹಾಗಾಗಿ ಬೆಂಗಳೂರು ಇಲ್ಲವೇ ಮಂಗಳೂರು ಕಡೆಗೆ ಗುಳೆ ಹೋಗುತ್ತೇವೆ. ರಟ್ಟೆಯಲ್ಲೇ ಬಲ ಇರುವವರಿಗೆ ದುಡಿದು, ಸಾಲಗಾರರ ಸಾಲವನ್ನು ಮುಟ್ಟಿಸುತ್ತೇವೆ. ಇಲ್ಲದಿದ್ದರೆ ಮುಂದೇ ಬೀಜ, ಗೊಬ್ಬರಕ್ಕೆ ಅವರು ಸಾಲ ಕೊಡುವುದಿಲ್ಲ. ನಾವು ಬೆಳೆ ಕೈಕೊಟ್ಟಿದೆ ಎಂದು ಕೈಗಡ ಸಾಲ ಕೊಡದೇ ಇರಲು ಆಗುವುದಿಲ್ಲ. ವಿಶ್ವಾಸ ಕೂಡ ಉಳಿಸಿಕೊಳ್ಳಬೇಕು. ಹಬ್ಬ ಹರಿದಿನಕ್ಕೂ ಬಟ್ಟೆಗಳನ್ನು ಕೊಂಡುಕೊಳ್ಳಬೇಕು. ಹಾಗಾಗಿ ಗುಳೆ ಹೋಗಿ ಕೆಲಸ ಮಾಡುತ್ತೇವೆ. ಬಂದ ಪರಿಸ್ಥಿತಿ ಎದುರಿಸಲು ನಮಗೆ ಗುಳೆಯೇ ಅನಿವಾರ್ಯ ಮಾರ್ಗವಾಗಿದೆ ಎಂದು ರೈತರಾದ ಬಸವರಾಜಪ್ಪ, ದಾನಪ್ಪ ತಮ್ಮ ಅಳಲು ತೋಡಿಕೊಂಡರು. ರಾಜ್ಯ ಸರ್ಕಾರ ಬರಗಾಲ ಪರಿಸ್ಥಿತಿ ಅವಲೋಕಿಸಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಗೆ ಕ್ರಮವಹಿಸಬೇಕು. ಈಗಾಗಲೇ 14- 15 ತಿಂಗಳ ಕಬ್ಬು ಬೆಳೆದು ನಿಂತಿದೆ. ಕಾರ್ಖಾನೆಗಳಲ್ಲಿ ಕಬ್ಬು ಅರೆಸುವುದನ್ನು ಆರಂಭಿಸಿದರೆ, ಕಬ್ಬು ಕಟಾವು ಆರಂಭವಾಗುತ್ತದೆ. ಇದರಿಂದ ಸ್ವಲ್ಪ ಉದ್ಯೋಗ ದೊರೆಯುತ್ತದೆ. ಸರ್ಕಾರ ಕೂಡಲೇ ಬರಗಾಲ ಸ್ಥಿತಿಗೆ ಅನುಗುಣವಾಗಿ ಯೋಜನೆಗಳನ್ನು ರೂಪಿಸಬೇಕು ಎಂದು ಶಾಸಕ ಹಗರಿಬೊಮ್ಮನಹಳ್ಳಿ ಶಾಸಕ ನೇಮರಾಜ್ ನಾಯ್ಕ ಆಗ್ರಹಿಸಿದರು.