ತುರ್ತು ಚಿಕಿತ್ಸೆ : ಗೋಲ್ಡನ್ ಅವರ್ ಕುರಿತು ನೀವು ತಿಳಿದಿರಬೇಕಾದ ವಿಚಾರಗಳು

| N/A | Published : Oct 25 2025, 01:00 AM IST

Golden Hour

ಸಾರಾಂಶ

ಅಪಘಾತ ಉಂಟಾದಾಗ ಅಪಘಾತಕ್ಕೆ ಒಳಗಾದ ವ್ಯಕ್ತಿಗೆ ತುರ್ತಾಗಿ ಚಿಕಿತ್ಸೆ ಬೇಕಿರುತ್ತದೆ. ಈ ಕುರಿತು ಬೆಂಗಳೂರು ನಾರಾಯಣ ಹೆಲ್ತ್ ಸಿಟಿಯ ತುರ್ತು ಚಿಕಿತ್ಸಾ ವಿಭಾಗ ಕ್ಲಿನಿಕಲ್ ಲೀಡ್ ಮತ್ತು ಕನ್ಸಲ್ಟೆಂಟ್ ಡಾ. ವಿ. ವಿಜು ವಿಲ್ಬೆನ್ ಒಂದು ವಿಶೇಷ ಲೇಖನ ಬರೆದಿದ್ದಾರೆ.

  ಬೆಂಗಳೂರು

- ಡಾ. ವಿ. ವಿಜು ವಿಲ್ಬೆನ್, ಕ್ಲಿನಿಕಲ್ ಲೀಡ್ ಮತ್ತು ಕನ್ಸಲ್ಟೆಂಟ್, ತುರ್ತು ಚಿಕಿತ್ಸಾ ವಿಭಾಗ, ನಾರಾಯಣ ಹೆಲ್ತ್ ಸಿಟಿ, ಬೆಂಗಳೂರು

ಪ್ರತೀ ವರ್ಷ ಅಪಘಾತ ಕಾರಣದಿಂದ ಸಿಕ್ಕಾಪಟ್ಟೆ ಮಂದಿ ಪ್ರಾಣ ಕಳೆದುಕೊಳ್ಳುತ್ತಾರೆ. ಬಹುತೇಕ ಪ್ರಕರಣಗಳಲ್ಲಿ ಅದಕ್ಕೆ ಕಾರಣ ಸಕಾಲಕ್ಕೆ ಅವರಿಗೆ ಸಹಾಯ ದೊರೆಯದಿರುವುದು. ಆ ಸಕಾಲವನ್ನು ನಾವು ಗೋಲ್ಡನ್ ಅವರ್ ಎಂದು ಕರೆಯುತ್ತೇವೆ.ಯಾವುದೇ ಅಪಘಾತದಲ್ಲಿ ಗಂಭೀರ ಗಾಯಗಳಾಗುವ ನಂತರದ 60 ನಿಮಿಷಗಳನ್ನು ಸಾಮಾನ್ಯವಾಗಿ ಗೋಲ್ಡನ್ ಅವರ್ ಎಂದು ಕರೆಯಲಾಗುತ್ತದೆ. ಈ ಸಮಯ ಬಹಳ ಮಹತ್ವದ್ದು

 ಈ ಅವಧಿಯಲ್ಲಿ ತಕ್ಷಣದ ವೈದ್ಯಕೀಯ ನೆರವು ದೊರೆಯಬೇಕು. ಸೂಕ್ತ ಸಹಾಯ ಸಿಕ್ಕರೆ ಬದುಕುವ ಸಾಧ್ಯತೆ ಗಣನೀಯವಾಗಿ ಹೆಚ್ಚಾಗುತ್ತದೆ ಮತ್ತು ಶಾಶ್ವತ ಅಂಗವೈಕಲ್ಯ ಉಂಟಾಗುವ ಅಪಾಯ ತಪ್ಪುತ್ತದೆ.ಹಾಗಾದರೆ, ಗೋಲ್ಡನ್ ಅವರ್ ಎಂದರೇನು? ಗೋಲ್ಡನ್ ಅವರ್ ಎಂದರೆ ಅಪಘಾತದ ನಂತರದ ಮೊದಲ ಒಂದು ಗಂಟೆ. 

 ಆಗ ದೇಹವು ಅತ್ಯಂತ ದುರ್ಬಲವಾಗಿರುತ್ತದೆ ಮತ್ತು ತಕ್ಷಣದ ವೈದ್ಯಕೀಯ ನೆರವು ಬೇಕಿರುತ್ತದೆ. ಒಬ್ಬ ವ್ಯಕ್ತಿಯು ತೀವ್ರವಾದ ಗಾಯವನ್ನು ಉದಾಹರಣೆಗೆ ಭಾರೀ ರಕ್ತಸ್ರಾವ, ತಲೆಗೆ ಪೆಟ್ಟು ಅಥವಾ ಒಳಗಿನ ಗಾಯ ಹೊಂದಿದ್ದರೆ ಅವರ ದೇಹದ ಕಾರ್ಯಗಳು ತ್ವರಿತವಾಗಿ ನಿಲ್ಲತೊಡಗುತ್ತವೆ. ಈ ಹಂತದಲ್ಲಿ ರಕ್ತಸ್ರಾವವನ್ನು ನಿಯಂತ್ರಿಸುವುದು, ಆಮ್ಲಜನಕ ಸಂಚರಿಸುವಂತೆ ಮಾಡುವುದು ಮತ್ತು ಸೂಕ್ತ ಚಿಕಿತ್ಸೆ ನೀಡುವುದರಿಂದ ದೊಡ್ಡ ಅಪಾಯ ತಪ್ಪಿಸಬಹುದು.

ಬಹಳಷ್ಟು ಬಾಧಿತರು ಇಂತಹ ಸಂದರ್ಭದಲ್ಲಿ ಆಸ್ಪತ್ರೆಗೆ ತಡವಾಗಿ ತಲುಪುತ್ತಾರೆ. ಇದಕ್ಕೆ ಕಾರಣ ಆ ಪರಿಸ್ಥಿತಿಯನ್ನು ನೋಡಿದ ವ್ಯಕ್ತಿಗಳಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿದಿರುವುದಿಲ್ಲ. ತುರ್ತಾಗಿ ಸ್ಪಂದಿಸುವವರು ತಕ್ಷಣ ಲಭ್ಯರಿರುವುದಿಲ್ಲ ಮತ್ತು ಸುತ್ತಮುತ್ತಲಿನವರು ಕೆಲವೊಮ್ಮೆ ಪ್ರತಿಕ್ರಿಯಿಸುವ ಬದಲು ಗಾಬರಿಯಾಗುತ್ತಾರೆ.ಇದೇ ಕಾರಣಕ್ಕೆ ತುರ್ತು ಸಂದರ್ಭಗಳಲ್ಲಿ ಸುತ್ತಮುತ್ತಲಿನವರು ಪ್ರಮುಖ ಪಾತ್ರವನ್ನು ವಹಿಸುತ್ತಾರೆ.  

ನೀವು ಒಂದು ಅಪಘಾತವನ್ನು ಕಂಡರೆ ಜೀವ ಉಳಿಸಲು ಸಹಾಯ ಮಾಡಲು ನೀವು ಈ ಕೆಳಗಿನವುಗಳನ್ನು ಮಾಡಬಹುದು:

- ತಕ್ಷಣವೇ ತುರ್ತು ಸೇವಾ ನಂಬರ್ ಗೆ ಉದಾಹರಣೆಗೆ 108 ಅಥವಾ ನಿಮ್ಮ ಪ್ರದೇಶದ ಆಂಬುಲೆನ್ಸ್ ಸಂಖ್ಯೆಗೆ ಡಯಲ್ ಮಾಡಿ. ನೀವು ಎಲ್ಲಿದ್ದೀರಿ ಮತ್ತು ಯಾವ ರೀತಿಯ ಅಪಘಾತ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡಿ. 

- ಮೊದಲು ನೀವು ಸುರಕ್ಷಿತರಾಗಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ, ಬಾಧಿತರು ಬೆಂಕಿ ಅಥವಾ ಟ್ರಾಫಿಕ್‌ ನಿಂದ ಅಪಾಯದಲ್ಲಿದ್ದರೆ ಮಾತ್ರ ಸ್ಥಳಾಂತರಿಸಿ.

 - ರಕ್ತಸ್ರಾವವಾಗುತ್ತಿರುವ ಗಾಯಗಳ ಮೇಲೆ ಒಂದು ಸ್ವಚ್ಛವಾದ ಬಟ್ಟೆಯನ್ನು ಬಳಸಿ ಗಟ್ಟಿಯಾಗಿ ಒತ್ತಡವನ್ನು ಹಾಕಿ. 

- ವ್ಯಕ್ತಿಯನ್ನು ವಿಶೇಷವಾಗಿ ಅವರ ಕುತ್ತಿಗೆ ಅಥವಾ ಬೆನ್ನುಹುರಿಗೆ ಗಾಯವಾಗಿರಬಹುದು ಎಂದು ನೀವು ಭಾವಿಸಿದರೆ ಅವರು ಸ್ಥಿರವಾಗಿ ಇರುವಂತೆ ನೋಡಿಕೊಳ್ಳಿ

.- ಗಾಯಗೊಂಡ ವ್ಯಕ್ತಿಯ ಸುತ್ತಲೂ ಜನ ತುಂಬದಂತೆ ತಡೆಯಿರಿ. ಅವರಿಗೆ ಉಸಿರಾಡಲು ಜಾಗವನ್ನು ನೀಡಿ ಮತ್ತು ತುರ್ತು ಚಿಕಿತ್ಸಕರು ಆಗಮಿಸಿದಾಗ ಅವರಿಗೆ ಕೆಲಸ ಮಾಡಲು ಅವಕಾಶವನ್ನು ನೀಡಿ. 

- ಶಾಂತವಾಗಿರಿ ಮತ್ತು ಅವರಿಗೆ ಧೈರ್ಯ ತುಂಬಿ. ನಿಮ್ಮ ಉಪಸ್ಥಿತಿಯು ಅವರಿಗೆ ಗಾಬರಿ ಮತ್ತು ಆಘಾತ ಉಂಟಾಗುವುದನ್ನು ತಪ್ಪಿಸಬಹುದು. 

ನೀವು ಮಾಡಬಾರದ ಕೆಲವು ವಿಚಾರಗಳು:-ಅಪಸ್ಮಾರ ಸ್ಥಿತಿಯಲ್ಲಿರುವ ವ್ಯಕ್ತಿಗೆ ನೀರು, ಆಹಾರ ಅಥವಾ ಔಷಧಿಯನ್ನು ಕೊಡಬೇಡಿ. -ಮುರಿದ ಮೂಳೆಗಳು ಅಥವಾ ಕಾಲುಗಳನ್ನು ನೇರಗೊಳಿಸಲು ಪ್ರಯತ್ನಿಸಬೇಡಿ. -ಗಂಭೀರ ಆಘಾತದ ಸಂದರ್ಭಗಳಲ್ಲಿ ಗಾಯಗೊಂಡ ವ್ಯಕ್ತಿಯನ್ನು ಎತ್ತಲು ಅಥವಾ ಸ್ಥಳಾಂತರಿಸಲು ಪ್ರಯತ್ನಿಸಬೇಡಿ. 

ಗಮನಾರ್ಹ ಸಂಗತಿಗಳು 

ಭಾರತದ ಆಸ್ಪತ್ರೆಗಳಲ್ಲಿ ಅಪಘಾತ ಚಿಕಿತ್ಸೆ, ವಿಶೇಷವಾಗಿ ತುರ್ತು ಚಿಕಿತ್ಸಾ ವಿಭಾಗ ಸುಧಾರಣೆಯಾಗುತ್ತಿದೆ. ಈಗ ಆಸ್ಪತ್ರೆಯ ಸಿಬ್ಬಂದಿಯು ರೋಗಿಯು ಆಸ್ಪತ್ರೆಗೆ ಆಗಮಿಸುವ ಮೊದಲೇ ಚಿಕಿತ್ಸೆ ನೀಡುವಷ್ಟು ಸಾಮರ್ಥ್ಯ ಹೊಂದಿರುತ್ತಾರೆ. ತುರ್ತು ವಾಹನಗಳು ಸುಧಾರಿತ ಜೀವ-ರಕ್ಷಕ ಉಪಕರಣಗಳನ್ನು ಹೊಂದಿರುತ್ತವೆ. ಪ್ಯಾರಾಮೆಡಿಕ್‌ಗಳು ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವಾಗ ಸ್ಥಿರ ಆರೋಗ್ಯ ಕಾಪಾಡುವಷ್ಟು ಶಕ್ತಿ ಹೊಂದಿರುತ್ತಾರೆ. ಆಂಬುಲೆನ್ಸ್‌ಗಳಲ್ಲಿ ಜಿಪಿಎಸ್ ಮಾನಿಟರಿಂಗ್ ಇರುತ್ತದೆ. ಎಲ್ಲಾ ವಿಭಾಗಗಳೂ ಸುಧಾರಿತ ಸಾಮರ್ಥ್ಯ ಹೊಂದಿರುತ್ತವೆ.ಆದರೆ ತಂತ್ರಜ್ಞಾನ ಕೇವಲ ಒಂದು ಭಾಗ ಮಾತ್ರ. ಅಪಘಾತ ಉಂಟಾದಾಗ ಏನು ಮಾಡಬೇಕು ಎಂದು ತಿಳಿದಿರುವವರ ಅಗತ್ಯವಿದೆ. ಹಾಗೆ ತಕ್ಷಣ ಸ್ಪಂದಿಸುವವರ ಸಂಖ್ಯೆ ಜಾಸ್ತಿಯಾದರೆ ಇನ್ನೂ ಹೆಚ್ಚಿನ ಜೀವಗಳನ್ನು ಉಳಿಸಬಹುದು.

Read more Articles on