ಜನರನ್ನು ಸ್ನೇಹಿತರು ಅಥವಾ ಶತ್ರುಗಳು ಎಂದು ವರ್ಗಿಕರಿಸದಿರುವುದನ್ನು ನಿಲ್ಲಿಸಿ

| N/A | Published : Aug 03 2025, 09:02 AM IST

Gurudev ravishankar guruji
ಜನರನ್ನು ಸ್ನೇಹಿತರು ಅಥವಾ ಶತ್ರುಗಳು ಎಂದು ವರ್ಗಿಕರಿಸದಿರುವುದನ್ನು ನಿಲ್ಲಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ತರಂಗಗಳು ಹೇಗೆ ನಮ್ಮ ಸ್ನೇಹವನ್ನು ರೂಪಿಸುತ್ತವೆ? ನಮ್ಮ ಸಮಯದ ಗುಣ ಹೇಗಿರುವುದೋ ಅದಕ್ಕೆ ತಕ್ಕಂತೆ ಅನುಭವ । ಧ್ಯಾನದಿಂದ ಸಕರಾತ್ಮಕ ಬೆಳವಣಿಗೆ, ಸ್ನೇಹ ಸಾಧ್ಯ ಪದಗಳನ್ನು ಮೀರಿದ ಅರ್ಥವು ನಮಗೆ ಗೋಚರಿಸುವುದಿಲ್ಲ ಮತ್ತು ಕೇವಲ ಪದಗಳ ಮೂಲಕ ಬೆಸೆದುಕೊಳ್ಳುವವರಿಗೆ ಆಳವಾದ ಸ್ನೇಹ-ಸಂಬಂಧಗಳಿರುವುದಿಲ್ಲ.

-ಗುರುದೇವ್ ಶ್ರೀ ಶ್ರೀ ರವಿ ಶಂಕರ್, ಆರ್ಟ್‌ ಆಫ್‌ ಲಿವಿಂಗ್‌. 

ಜನರನ್ನು ಸ್ನೇಹಿತರು ಅಥವಾ ಶತ್ರುಗಳು ಎಂದು ವರ್ಗಿಕರಿಸದಿರುವುದೇ ಉತ್ತಮ. ಏಕೆಂದರೆ, ನಿಮ್ಮ ಸಮಯ ಚೆನ್ನಾಗಿದ್ದಾಗ, ನಿಮ್ಮ ಕೆಟ್ಟ ಶತ್ರುಗಳು ಕೂಡ ನಿಮ್ಮ ಸಹಾಯಕ್ಕೆ ಬರುತ್ತಾರೆ. ಅದೇ ನಿಮ್ಮ ಸಮಯ ಕೆಟ್ಟಾಗ, ನಿಮ್ಮ ಆಪ್ತ ಮಿತ್ರರೂ ಸಹ ಶತ್ರುವಿನ ಹಾಗೆ ವರ್ತಿಸುತ್ತಾರೆ. ವಾಸ್ತವದಲ್ಲಿ, ಎರಡು ರೀತಿಯ ಜನರೆಂಬುದಿಲ್ಲ, ಸಮಯಕ್ಕನುಗುಣವಾಗಿ ಎಲ್ಲರೂ ವ್ಯವಹರಿಸುತ್ತಾರೆ. ಅದಕ್ಕಾಗಿಯೇ ಸಂಸ್ಕೃತದಲ್ಲಿ, ನಾವು ‘ಕಾಲಾಯ ತಸ್ಮೈ ನಮಃ’ ಎಂದು ಹೇಳುತ್ತೇವೆ. ನಮ್ಮ ಸಮಯದ ಗುಣ ಹೇಗಿರುವುದೋ ಅದಕ್ಕನುಸಾರವಾಗಿ ಜಗತ್ತಿನಲ್ಲಿ ನಮ್ಮ ಅನುಭವಗಳು ಇರುತ್ತವೆ.

ಜನರ ತಿಳುವಳಿಕೆ ಮತ್ತು ನಡವಳಿಕೆಯನ್ನು ರೂಪಿಸುವಲ್ಲಿ ಸಮಯವು ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮನ್ನೇ ನೀವು ನೋಡಿಕೊಳ್ಳಿ, ಹೇಗೆ ಸಮಯ ಕಳೆದಂತೆ ನಿಮ್ಮ ದೃಷ್ಟಿಕೋನಗಳು ಮತ್ತು ಅಭಿಪ್ರಾಯಗಳು ಸಹ ಬದಲಾಗುತ್ತಾ ಬಂದಿವೆ ಎಂದು. ಇಂದು ನೀವು ಐದು ವರ್ಷಗಳ ಹಿಂದೆ ಇದ್ದಂತಹ ವ್ಯಕ್ತಿಯಲ್ಲ, ಸಾಕಷ್ಟು ಬದಲಾಗಿರುವಿರಲ್ಲವೇ? ನಾವು ಯಾವಾಗ ಜನರ ಮಾತು ಮತ್ತು ಕ್ರಿಯೆಗಳಿಗೆ ಹೆಚ್ಚು ಒತ್ತು ನೀಡುತ್ತೆವೋ, ಆಗ ನಮ್ಮ ಸಂತೋಷವನ್ನು ಕಳೆದುಕೊಳ್ಳುತ್ತೇವೆ. ಜನರ ಮಾತು ಮತ್ತು ನಡವಳಿಕೆಯು ಯಾವಾಗ ಬೇಕಾದರೂ ಬದಲಾಗಬಹುದು.

 ನಮ್ಮ ಸಂತೋಷವನ್ನು ಬೇರೆಯವರ ಮಾತು ಹಾಗು ನಡವಳಿಕೆಯ ಮೇಲೆ ಅವಲಂಬಿಸುವುದು ಅರ್ಥಹೀನ. ಕೆಲವೊಮ್ಮೆ ನೀವು ನಿಮ್ಮ ಅರಿವಿಲ್ಲದೇ ನಿಮ್ಮ ಮಾತುಗಳಿಂದ ಇನ್ನೊಬ್ಬರ ಮನ ನೋಯುವಂತೆ ಮಾಡಿರಬಹುದು. ಆಗ ಅವರು ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ನಿಮ್ಮ ಬಗ್ಗೆ ಕಹಿಯಾದ ಭಾವವನ್ನು ಇಟ್ಟುಕೊಂಡಿದ್ದರೆ ನಿಮಗೆ ಹೇಗೆ ಅನ್ನಿಸುತ್ತದೆ? ನಿಮಗೆ ಅದು ಇಷ್ಟವಾಗುತ್ತದೆಯೇ? ಆಗುವುದಿಲ್ಲ. ಅವರು ನಿಮ್ಮ ಮಾತುಗಳ ಆಚೆಗೆ ನಿಮ್ಮನ್ನು ನೋಡಬೇಕೆಂದು ನೀವು ಬಯಸುತ್ತೀರಿ ಅಲ್ಲವೇ. ಆದರೆ ನೀವು ಬೇರೆಯವರ ಬಗ್ಗೆ ಹೀಗೆ ಮಾಡುವಿರೇ? ಇಲ್ಲ, ಅವರ ಮಾತುಗಳನ್ನು ನೀವು ಹಲವು ವರ್ಷಗಳ ಕಾಲ ನಿಮ್ಮ ಮನಸ್ಸಿಗೆ ಹಚ್ಚಿಕೊಂಡಿರುತ್ತೀರಿ.

ಮಾತಿನ ಉದ್ದೇಶವೇ ಬೇರೆ

ಎಷ್ಟೋ ಬಾರಿ ಒಬ್ಬರ ಮಾತುಗಳು ಅವರ ಉದ್ದೇಶಕ್ಕಿಂತ ಬೇರೆಯೇ ಆಗಿರುತ್ತದೆ. ಉದಾಹರಣೆಗೆ ಮಕ್ಕಳು ಹಠ ಮಾಡುವಾಗ ಸಾಮಾನ್ಯವಾಗಿ ತಾಯಂದಿರು ಅವರಿಗೆ, ‘ಹಾಳಾಗಿ ಹೋಗು!’ ಎಂದು ಹೇಳುತ್ತಾರೆ. ಆದರೆ ನಿಜವಾಗಿಯೂ ಮಕ್ಕಳು ಹಾಳಾಗಿ ಹೋದರೆ ಆ ತಾಯಿಯ ಜೀವಕ್ಕೆ ಏನಾಗಬಹುದು ಯೋಚಿಸಿ? ಅವರ ಉದ್ದೇಶ ಅದಾಗಿರುವುದೇ ಇಲ್ಲ. 

ಜನರನ್ನು ಸ್ನೇಹಿತರು ಅಥವಾ ಶತ್ರುಗಳು ಎಂದು ವಿಭಾಗೀಕರಿಸುವ ಬದಲು, ನಿಮ್ಮ ತರಂಗಗಳನ್ನು ಸಕಾರಾತ್ಮಕಗೊಳಿಸಿಕೊಳ್ಳುವುದು ಬುದ್ಧಿವಂತಿಕೆ. ನಿಮ್ಮ ಸ್ವಭಾವದಲ್ಲಿ ನೀವು ಸ್ನೇಹಪರರಾಗಿರಿ. ಯಾವಾಗಲೂ ಕಿರಿಕಿರಿಗೊಂಡ ಜನರೊಂದಿಗೆ ಕೆಲಸ ಮಾಡಲು ನೀವು ಬಯಸುತ್ತೀರಾ? ಅಥವಾ ಅಹಂಕಾರಿಯಾದ ಅಥವಾ ಸಹಿಸಲಾಗದ ವ್ಯಕ್ತಿಯೊಂದಿಗೆ ಇರಲು ಬಯಸುತ್ತೀರಾ? ಇಲ್ಲವಲ್ಲವೇ? ಈಗ ನಿಮ್ಮನ್ನು ನೀವೇ ಕೇಳಿಕೊಳ್ಳಿ - ಈ ಗುಣಗಳು ನಿಮ್ಮೊಳಗೆ ಇವೆಯೇ? ನೀವು ಕಿರಿಕಿರಿಗೊಳ್ಳುತ್ತೀರಾ? ನೀವು ಅಹಂಕಾರಿಯೇ? ನಿಮ್ಮನ್ನು ಸಹಿಸುವುದು ಇತರರರಿಗೆ ಕಷ್ಟವಾಗುತ್ತಿದೆಯೇ? ಬೇರೆಯವರ ಮಾತು ಅಥವಾ ನಡವಳಿಕೆಯ ಬಗ್ಗೆ ಯೋಚಿಸುವುದರ ಬದಲು ನಮ್ಮನ್ನು ನಾವು ನೋಡಿಕೊಳ್ಳುವುದು ಉತ್ತಮ.

ನಾವು ನಮ್ಮ ಮಾತುಗಳಿಗಿಂತ ನಮ್ಮ ತರಂಗಗಳ ಮೂಲಕ ಹೆಚ್ಚು ತಿಳಿಯಪಡಿಸುತ್ತೇವೆ. ನಾನು ಇಲ್ಲಿ ಕುಳಿತು ಎರಡು ಗಂಟೆ ಮಾತನಾಡಬಹುದು, ಪ್ರೀತಿಯ ಬಗ್ಗೆ ಉಪದೇಶವನ್ನು ನೀಡಬಹುದು, ಶಾಂತಿಯ ಬಗ್ಗೆ ನನ್ನ ಗಂಟಲು ಒಣಗುವವರೆಗೂ ಭಾಷಣ ಮಾಡಬಹುದು. ಆದರೆ, ಕೇವಲ ಮಾತುಗಳು ಪರಿಣಾಮವನ್ನು ಬೀರುವುದಿಲ್ಲ. ನಿಜವಾದ ಪರಿಣಾಮ ಬೀರುವುದು ಯಾವುದೆಂದರೆ, ಅದು ನಮ್ಮ ಉಪಸ್ಥಿತಿ. 

ನಮ್ಮ ಉಪಸ್ಥಿತಿಯೇ ಮುಖ್ಯ ಎರಡು ಗಂಟೆ ಪ್ರೀತಿಯ ಬಗ್ಗೆ ಆಡುವ ಮಾತುಗಳು, ನೀವು ನಿಮ್ಮ ನಾಯಿಮರಿಯೊಂದಿಗೆ ಕಳೆಯುವ ಮೂವತ್ತು ಸೆಕೆಂಡುಗಳಿಗೆ ಹೋಲಿಸಲಾಗುವುದಿಲ್ಲ. ನಿಮ್ಮನ್ನು ಕಂಡ ತಕ್ಷಣ ನಿಮ್ಮ ಬಳಿಗೆ ಓಡಿ ಬರುವ ನಿಮ್ಮ ಸಾಕುಪ್ರಾಣಿಯಲ್ಲಿ ನೀವು ಆ ಪ್ರೀತಿಯನ್ನು ತಕ್ಷಣವೇ ಅನುಭವಿಸುತ್ತೀರಿ. ಒಂದು ಸಣ್ಣ ಮಗುವನ್ನು ನೋಡಿದ ಮಾತ್ರಕ್ಕೇ ನಿಮಗೆ ಆ ಪ್ರೀತಿಯ ಅನುಭವವಾಗುತ್ತದೆ. ಈ ಭಾವನೆಗಳನ್ನು ಮಾತುಗಳಲ್ಲಿ ವ್ಯಕ್ತಪಡಿಸಲು ಆಗುವುದಿಲ್ಲ. ಅವುಗಳು ಅನುಭವಕ್ಕೆ ಸಿಗುತ್ತವೆ. ಅದಕ್ಕಾಗಿಯೇ, ನಮ್ಮ ಉಪಸ್ಥಿತಿ, ನಮ್ಮ ತರಂಗಗಳು, ನಾವು ಏನು ಹೇಳುತ್ತೇವೆ ಎನ್ನುವುದಕ್ಕಿಂತ ಎಷ್ಟೋ ಹೆಚ್ಚು ಮುಖ್ಯವಾಗುತ್ತದೆ.

ನಿಜವಾದ ಸಂವಹನವು ತರಂಗಗಳ ಮೂಲಕ ಸಂಭವಿಸುತ್ತದೆ. ನಾವು ನಮ್ಮ ಆಲೋಚನೆಗಳು ಮತ್ತು ಭಾವನೆಗಳನ್ನು ಮಾತುಗಳ ಮೂಲಕ ಅಲ್ಲದೇ, ನಮ್ಮ ಉಪಸ್ಥಿತಿಯ ಮೂಲಕ ವ್ಯಕ್ತಪಡಿಸುತ್ತೇವೆ. ಆದರೂ ಕೇವಲ ಮಾತುಗಳನ್ನು ಅವಲಂಬಿಸಿ ನಾವು ಎಷ್ಟು ಸ್ನೇಹವನ್ನು ಹಾಳುಮಾಡಿಕೊಳ್ಳುತ್ತೇವೆ. ನಮ್ಮ ಎಷ್ಟೋ ಸಂಬಂಧಗಳ ಮೇಲೆ ಇದು ಪರಿಣಾಮ ಬೀರಿಲ್ಲವೇ? ಜೀವನವನ್ನು ವಿಶಾಲ ದೃಷ್ಟಿಕೋನದಿಂದ ನೋಡಿ. ಒಂದು ಘಟನೆಯನ್ನು ಮೀರಿ ಹೋದಾಗ, ಅಲ್ಲಿ ಜ್ಞಾನವಿದೆ; ಒಂದು ವಸ್ತುವನ್ನು ಮೀರಿ ಹೋದಾಗ, ಅಲ್ಲಿ ಅನಂತತೆಯಿದೆ ಮತ್ತು ಒಬ್ಬ ವ್ಯಕ್ತಿಯನ್ನು ಮೀರಿ ನೋಡಿದಾಗ ಅಲ್ಲಿ ಪ್ರೀತಿಯಿದೆ. ಪದಗಳನ್ನು ಮೀರಿದ ಅರ್ಥವು ನಮಗೆ ಗೋಚರಿಸುವುದಿಲ್ಲ ಮತ್ತು ಕೇವಲ ಪದಗಳ ಮೂಲಕ ಬೆಸೆದುಕೊಳ್ಳುವವರಿಗೆ ಆಳವಾದ ಸ್ನೇಹ-ಸಂಬಂಧಗಳಿರುವುದಿಲ್ಲ.

ನಮ್ಮ ತರಂಗಗಳನ್ನು ಹೇಗೆ ಶುದ್ಧೀಕರಿಸುವುದು ಎಂದು ನಮಗೆ ಯಾರೂ ಕಲಿಸಲಿಲ್ಲ. ಇಲ್ಲಿಯೇ ಆಧ್ಯಾತ್ಮಿಕತೆಯು ಸಹಾಯಕ್ಕೆ ಬರುವುದು. ಧ್ಯಾನ, ಸೇವೆ, ಉಸಿರಾಟದ ಪ್ರಕ್ರಿಯೆಗಳಂತಹ ಆಧ್ಯಾತ್ಮಿಕ ಅಭ್ಯಾಸಗಳು ನಿಮ್ಮ ತರಂಗಗಳನ್ನು ಹೆಚ್ಚು ಸಕಾರಾತ್ಮಕವಾಗಿಸುತ್ತವೆ; ದ್ವೇಷದಿಂದ ಪ್ರೀತಿಯೆಡೆಗೆ, ಸಂದೇಹದಿಂದ ಆತ್ಮವಿಶ್ವಾಸದೆಡೆಗೆ ಮತ್ತು ಹತಾಶೆಯಿಂದ ಭರವಸೆಯೆಡೆಗೆ ನಿಮ್ಮನ್ನು ಕರೆದೊಯ್ಯುತ್ತವೆ. ನಿಮ್ಮ ತರಂಗಗಳು ಸಕಾರಾತ್ಮಕವಾಗಿದ್ದಾಗ, ಸ್ನೇಹವು ಸಲೀಸಾಗಿ ಅರಳುತ್ತದೆ.

Read more Articles on