ಹರಿದಾಸರ ಸಾಹಿತ್ಯದ ಇನ್ನಷ್ಟು ಕೃತಿ ಅಧ್ಯಯನ ಅಗತ್ಯ: ಅಕ್ಷೋಭ್ಯ ರಾಮಪ್ರಿಯ ತೀರ್ಥ ಸ್ವಾಮೀಜಿ

| Published : Nov 18 2024, 01:18 AM IST / Updated: Nov 18 2024, 06:45 AM IST

ಸಾರಾಂಶ

ಹರಿದಾಸರ ಕೃತಿಗಳಲ್ಲಿ ಉಲ್ಲೇಖಿಸಿರುವ ಭೌತಿಕ ವಸ್ತುಗಳ ಅಧ್ಯಯನ ಮಾಡಿ ಹರಿದಾಸ ಸಾಹಿತ್ಯದ ಇನ್ನಷ್ಟು ಕೃತಿ ರಚಿಸುವ ಅಗತ್ಯವಿದ್ದು,  ವಿದ್ವಾಂಸರ ಪಡೆ, ವಿಶ್ವವಿದ್ಯಾಲಯಗಳ ನೆರವು ಪಡೆಯಬೇಕು ಎಂದು ಬಾಳಗಾರು ಮಠ   ಪೀಠಾಧೀಶ ಅಕ್ಷೋಭ್ಯರಾಮಪ್ರಿಯತೀರ್ಥ ಸ್ವಾಮೀಜಿ ಹೇಳಿದರು.

  ಬೆಂಗಳೂರು : ಹರಿದಾಸರ ಕೃತಿಗಳಲ್ಲಿ ಉಲ್ಲೇಖಿಸಿರುವ ಭೌತಿಕ ವಸ್ತುಗಳ ಅಧ್ಯಯನ ಮಾಡಿ ಹರಿದಾಸ ಸಾಹಿತ್ಯದ ಇನ್ನಷ್ಟು ಕೃತಿ ರಚಿಸುವ ಅಗತ್ಯವಿದ್ದು, ಇದಕ್ಕಾಗಿ ವಿದ್ವಾಂಸರ ಪಡೆ, ವಿಶ್ವವಿದ್ಯಾಲಯಗಳ ನೆರವು ಪಡೆಯಬೇಕು ಎಂದು ಬಾಳಗಾರು ಮಠ ಶ್ರೀಮದಾರ್ಯ ಅಕ್ಷೋಭ್ಯತೀರ್ಥ ಮೂಲ ಸಂಸ್ಥಾನದ ಕಿರಿಯ ಪೀಠಾಧೀಶ ಅಕ್ಷೋಭ್ಯರಾಮಪ್ರಿಯತೀರ್ಥ ಸ್ವಾಮೀಜಿ ಹೇಳಿದರು.

ಭಾನುವಾರ ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆ ಟ್ರಸ್ಟ್‌ ಐಟಿಐ ಬಡಾವಣೆಯ ಶ್ರೀ ಕೃಷ್ಣ ಸಮೂಹ ವಿದ್ಯಾ ಸಂಸ್ಥೆಯಲ್ಲಿ ನಡೆದ 6ನೇ ಅಖಿಲ ಭಾರತ ಹರಿದಾಸ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಹತ್ತಾರು ವರ್ಷದಿಂದ ಹರಿದಾಸ ಸಾಹಿತ್ಯದ ಅಧ್ಯಯನ ನಡೆಯುತ್ತಿದೆ. ಹರಿದಾಸರ ಕೃತಿಗಳಲ್ಲಿ ಉಲ್ಲೇಖಿಸಿದಂತೆ ಶಾಸನ, ಚಾರಿತ್ರಿಕ ಕಾವ್ಯ, ಸ್ಮಾರಕ, ಪ್ರತಿಮೆ, ನಾಣ್ಯ ಸೇರಿ ಸಾಕಷ್ಟು ಭೌತಿಕ ವಸ್ತುಗಳು, ಸಂಗತಿಗಳು ಲಭ್ಯವಿದೆ. ಅವುಗಳನ್ನು ಅಧ್ಯಯನ ನಡೆಸಿದರೆ ಹತ್ತಾರು ಆಯಾಮದಲ್ಲಿ ಕೃತಿಗಳನ್ನು ರಚಿಸಲು ಸಾಧ್ಯವಿದೆ. ಇದಕ್ಕಾಗಿ ತಜ್ಞರು, ವಿದ್ವಾಂಸರ ಬೆಂಬಲ ಪಡೆಯಬೇಕು. ಈ ಮೂಲಕ ಮುಂದಿನ ತಲೆಮಾರಿಗೆ ಜ್ಞಾನ ನೀಡುವ ಜವಾಬ್ದಾರಿ ನಿಭಾಯಿಸೋಣ ಎಂದರು.

ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆ ಟ್ರಸ್ಟ್‌ ಉಪಾಧ್ಯಕ್ಷ ಡಾ। ಅರಳು ಮಲ್ಲಿಗೆ ಪಾರ್ಥಸಾರಥಿ ಮಾತನಾಡಿ, ಹರಿದಾಸರು ಜನರ ಮಧ್ಯೆ ಇದ್ದು ಅವರನ್ನು ಅರ್ಥ ಮಾಡಿಕೊಂಡರು. ಬದುಕಿಗೆ ಪೂರಕವಾರದ ವಿಚಾರಗಳನ್ನು ಬಿಟ್ಟು ಮುಂದೆ ನಡೆಯಬೇಕು. ಎಲ್ಲರಿಗೂ ಹಿತವಾಗಿರುವ ಕೆಲಸ ಮಾಡಬೇಕು. ನಾವು ಎಂತವರ ಸಂಘ ಮಾಡುತ್ತೇವೆ ಎಂಬುದರ ಮೇಲೆ ಬದುಕು ನಿರ್ಣಯವಾಗುತ್ತದೆ ಎಂದು ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ। ಡಿ.ವಿ.ಪರಮಶಿವಮೂರ್ತಿ, ಅಮೆರಿಕ ಫ್ಲೋರಿಡಾ ಯೋಗ ಸಂಸ್ಕೃತ ವಿವಿಯ ಕುಲಪತಿ ಡಾ। ಬಿ.ವೆಂಕಟಕೃಷ್ಣ ಶಾಸ್ತ್ರಿ, ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆ ಟ್ರಸ್ಟ್‌ ಕಾರ್ಯದರ್ಶಿ ಎಚ್.ಬಿ.ಲಕ್ಷ್ಮೀನಾರಾಯಣ, ಲೆಕ್ಕಪರಿಶೋಧಕ ಸಿ.ಆರ್.ಮುರಳಿ ಇದ್ದರು.