ಸಾರಾಂಶ
ಬೆಂಗಳೂರು : ಬೆಂಗಳೂರು ಉಪನಗರ ರೈಲು ಯೋಜನೆಯನ್ನು (ಬಿಎಸ್‌ಆರ್‌ಪಿ) ಎರಡನೇ ಹಂತದಲ್ಲಿ 146ಕಿಮೀ ವಿಸ್ತರಿಸುವ ಹಾಗೂ ವರ್ತುಲ ರೈಲು ಯೋಜನೆ ಜೊತೆಗೆ ಸಂಧಿಸುವ ಸಂಬಂಧ ಕಾರ್ಯಸಾಧ್ಯತಾ ಅಧ್ಯಯನ ನಡೆಸಲು ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕೆ-ರೈಡ್) ರೈಲ್ವೆ ಸಚಿವಾಲಯಕ್ಕೆ ಅನುಮತಿ ಕೋರಿದೆ.
ಉಪನಗರ ರೈಲು ಯೋಜನೆ ಅನುಷ್ಠಾನಗೊಳಿಸುತ್ತಿರುವ ಕೆ-ರೈಡ್, ಮೊದಲ ಹಂತದಲ್ಲಿ 148.17 ಕಿಮೀ ಉದ್ದದ ರೈಲು ಮಾರ್ಗ ನಿರ್ಮಿಸುವ ಯೋಜನೆಯಲ್ಲಿ ತೊಡಗಿದೆ. ಬೈಯಪ್ಪನಹಳ್ಳಿಯಿಂದ ಚಿಕ್ಕಬಾಣಾವರ ಸಂಪರ್ಕಿಸುವ ‘ಮಲ್ಲಿಗೆ’ ಮಾರ್ಗದ ಕಾಮಗಾರಿ ಹಾಗೂ ಹೀಲಲಿಗೆಯಿಂದ ರಾಜಾನುಕುಂಟೆ ಸಂಪರ್ಕಿಸುವ ‘ಕನಕ’ ಮಾರ್ಗದ ಕಾಮಗಾರಿ ಚಾಲ್ತಿಯಲ್ಲಿದೆ. ಉಳಿದಂತೆ ಮೆಜೆಸ್ಟಿಕ್ ನಿಂದ ದೇವನಹಳ್ಳಿ (ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ) ಸಂಪರ್ಕಿಸುವ ‘ಸಂಪಿಗೆ’ ಯೋಜನೆ ಟೆಂಡರ್ ಹಂತದಲ್ಲಿದ್ದರೆ, ಕೆಂಗೇರಿ ವೈಟ್‌ಫೀಲ್ಡ್ ಸಂಪರ್ಕಿಸುವ ‘ಪಾರಿಜಾತ’ ಯೋಜನೆ ಅನುಷ್ಠಾನ ಸಂಬಂಧ ಪರಾಮರ್ಷೆ ನಡೆದಿದೆ.
ಉಪನಗರ ರೈಲನ್ನು 2ನೇ ಹಂತದಲ್ಲಿ ಬೆಂಗಳೂರಿನ ಹೊರವಲಯ, ಸನಿಹದ ಜಿಲ್ಲೆಗಳಿಗೆ ವಿಸ್ತರಿಸಲು ಯೋಜಿಸಲಾಗಿದೆ. ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರ (18ಕಿಮೀ), ಚಿಕ್ಕಬಾಣಾವರದಿಂದ ಕುಣಿಗಲ್ (50ಕಿಮೀ), ಚಿಕ್ಕಬಾಣಾವರದಿಂದ ದಾಬಸ್‌ಪೇಟೆ (36ಕಿಮೀ) ಕೆಂಗೇರಿಯಿಂದ ಹೆಜ್ಜಾಲ ( 11ಕಿಮೀ) ಹಾಗೂ ಹೀಲಲಿಗೆ ಆನೇಕಲ್ ರಸ್ತೆ (11ಕಿಮೀ) ಹಾಗೂ ರಾಜಾನುಕುಂಟೆಯಿಂದ ಒಡ್ಡರಹಳ್ಳಿ (20ಕಿಮೀ) ವರೆಗೆ ವಿಸ್ತರಿಸುವ ಯೋಜನೆ ರೂಪಿಸಿಕೊಳ್ಳಲಾಗಿದೆ.
2025ರಲ್ಲಿ ಡಿಪಿಆರ್ ಪೂರ್ಣ ಸಾಧ್ಯತೆ: ಇನ್ನು ರೈಲ್ವೆ ಇಲಾಖೆಯು ಬೆಂಗಳೂರು ಸುತ್ತುವರಿಯುವ 287 ಕಿಮೀ ವರ್ತುಲ ರೈಲು ಯೋಜನೆಯನ್ನು ರೂಪಿಸಿಕೊಂಡಿದೆ. ಇದು ನಿಡವಂದ- ದೊಡ್ಡಬಳ್ಳಾಪುರ (49.9 ಕಿಮೀ), ದೊಡ್ಡಬಳ್ಳಾಪುರ ದೇವನಹಳ್ಳಿ (28.5 ಕಿಮೀ), ದೇವನಹಳ್ಳಿ - ಮಾಲೂರು (46.5 ಕಿಮೀ), ಮಾಲೂರು ಹೀಲಲಿಗೆ (52 ಕಿಮೀ) ಹಾಗೂ ಹೆಜ್ಜಾಲ ಸೊಲೂರು (43.5ಕಿಮೀ) ಸೊಲೂರು ನಿಡವಂದ (34.2 ಕಿಮೀ.) ಹಾಗೂ ಹೆಜ್ಜಾಲ ಹೀಲಲಿಗೆ (42ಕಿಮೀ ) ಉದ್ದ ಒಳಗೊಂಡಿದೆ. ಇದರ ಡಿಪಿಆರ್ ಪ್ರಕ್ರಿಯೆ ನಡೆಯುತ್ತಿದ್ದು, ಈ ವರ್ಷ ಮುಗಿಯಲಿದೆ.
ಈ ಯೋಜನೆ ಅನುಷ್ಠಾನಕ್ಕೆ ನೈಋತ್ಯ ರೈಲ್ವೆ ಬೆಂಗಳೂರು ವಿಭಾಗ ಹಾಗೂ ಕೆ-ರೈಡ್ ಜಂಟಿ ಸಹಭಾಗಿತ್ವ ಅಗತ್ಯವಾಗಿದ್ದು, ವಿಸ್ತರಣೆ, ಸಂಯೋಜನೆಗೆ ರೈಲ್ವೆ ಸಚಿವಾಲಯದಿಂದ ಒಪ್ಪಿಗೆ ದೊರೆತ ಬಳಿಕ ಕೆ-ರೈಡ್ ಡಿಪಿಆರ್ ರೂಪಿಸಿಕೊಳ್ಳಬೇಕು. ಬಳಿಕ ರೈಲ್ವೆ ಇಲಾಖೆಯಿಂದ ಯೋಜನೆಗೆ ಒಪ್ಪಿಗೆ ಪಡೆಯಬೇಕಾಗುತ್ತದೆ. ಈ ಯೋಜನೆ ಸಂಬಂಧ ಇನ್ನಷ್ಟೇ ಸಮಾಲೋಚನೆ ನಡೆಸಬೇಕಿದೆ ಎಂದು ನೈಋತ್ಯ ರೈಲ್ವೆ ಬೆಂಗಳೂರು ವಿಭಾಗದ ಅಧಿಕಾರಿಗಳು ತಿಳಿಸಿದರು.
ಏನು ಪ್ರಯೋಜನ?: ಉಪನಗರ ರೈಲ್ವೆಯು ದೊಡ್ಡಬಳ್ಳಾಪುರ, ದೇವನಹಳ್ಳಿ, ಮಾಲೂರು, ಹೀಲಲಿಗೆ, ಹೆಜ್ಜಾಲ, ನೆಲಮಂಗಲ ಹಾಗೂ ನಿಡವಂದಗಳಲ್ಲಿ ವರ್ತುಲ ರೈಲನ್ನು ಸಂಯೋಜಿಸಲಿದೆ. ಇಲ್ಲಿ ಇಂಟರ್ ಚೇಂಜ್ ನಿಲ್ದಾಣಗಳು ನಿರ್ಮಾಣ ಆದಲ್ಲಿ ಹೊರವಲಯ, ತುಮಕೂರು ಸೇರಿ ಅಕ್ಕಪಕ್ಕದ ಜಿಲ್ಲೆಗಳ ಜನತೆ ನೇರವಾಗಿ ನಗರವನ್ನು ಪ್ರವೇಶಿಸಲು ಸಾಧ್ಯವಾಗಲಿದ್ದು, ರಸ್ತೆ ಮಾರ್ಗದ ಮೇಲಿನ ಒತ್ತಡ ಗಣನೀಯವಾಗಿ ಕಡಿಮೆಯಾಗಲಿದೆ. ಮುಂದುವರಿದು ನಮ್ಮ ಮೆಟ್ರೋ ಹಾಗೂ ರೈಲ್ವೆ ಮಾರ್ಗವನ್ನು ಕೂಡ ಬಿಎಸ್‌ಆರ್‌ಪಿ ಯೋಜನೆಯು ಸಂಯೋಜಿಸಲಿರುವ ಕಾರಣ ಪ್ರಯಾಣಿಕರ ಓಡಾಟ ಇನ್ನಷ್ಟು ಸುಗಮ ಆಗಲಿದೆ.