ಒಳ ಮೀಸಲಾತಿ ಜಾರಿಗೆ ನಗರದಲ್ಲಿ ಎಸ್‌ಸಿ ಕುಟುಂಬಗಳ ಸಮೀಕ್ಷೆ ಮೇ 5 ರಿಂದ ಆರಂಭ

| N/A | Published : Apr 25 2025, 01:51 AM IST / Updated: Apr 25 2025, 06:31 AM IST

BBMP latest news today photo

ಸಾರಾಂಶ

ಬಿಬಿಎಂಪಿ ವ್ಯಾಪ್ತಿಯಲ್ಲಿ ಮೇ 5 ರಿಂದ 17ರವರೆಗೆ 10 ದಿನ ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷೆ ನಡೆಸುವುದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

 ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಮೇ 5 ರಿಂದ 17ರವರೆಗೆ 10 ದಿನ ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷೆ ನಡೆಸುವುದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ಒಳ ಮೀಸಲಾತಿ ಕುರಿತಂತೆ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ ದಾಸ ನೇತೃತ್ವದ ಏಕ ಸದಸ್ಯ ವಿಚಾರಣೆ ಆಯೋಗ ರಚಿಸಿದೆ. ಆಯೋಗವು ರಾಜ್ಯದ ಪರಿಶಿಷ್ಟ ಜಾತಿ ಕುಟುಂಬಗಳ ವಿವಿಧ ಅಂಶಗಳ ಬಗ್ಗೆ ದತ್ತಾಂಶ ಶೇಖರಿಸುವುದಕ್ಕೆ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಸಮೀಕ್ಷೆಯ ಸಮನ್ವಯ ಸಾಧಿಸುವುದಕ್ಕೆ ರಾಜ್ಯಮಟ್ಟ, ಜಿಲ್ಲಾಮಟ್ಟ, ತಾಲೂಕು ಮಟ್ಟ ಹಾಗೂ ಬಿಬಿಎಂಪಿಯ ಮಟ್ಟದ ಸಮನ್ವಯ ಸಮಿತಿ ರಚಿಸಿ ಸರ್ಕಾರ ಆದೇಶಿಸಿದೆ.

ಅದರಂತೆ ಬಿಬಿಎಂಪಿಯು ತನ್ನ ವ್ಯಾಪ್ತಿಯಲ್ಲಿರುವ ಪರಿಶಿಷ್ಟ ಜಾತಿ ಕುಟುಂಬ ಸಮೀಕ್ಷೆ ನಡೆಸಿ ದತ್ತಾಂಶ ಸಂಗ್ರಹಿಸುವುದಕ್ಕೆ ತಯಾರಿ ಮಾಡಿಕೊಂಡಿದೆ. ಬಿಬಿಎಂಪಿ ಮಟ್ಟದ ಸಮನ್ವಯ ಸಮಿತಿಯನ್ನು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ. ಬಿಬಿಎಂಪಿ ಮುಖ್ಯ ಆಯುಕ್ತರು, ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಅವರನ್ನು ಸದಸ್ಯರಾಗಿ ನೇಮಕ ಮಾಡಲಾಗಿದೆ. ಬಿಬಿಎಂಪಿಯ ಕಲ್ಯಾಣ ವಿಭಾಗದ ವಿಶೇಷ ಆಯುಕ್ತರನ್ನು ಸದಸ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಮೊಬೈಲ್‌ ಆ್ಯಪ್‌ ಆಧಾರಿತವಾಗಿ ಸಮೀಕ್ಷೆ ನಡೆಸಲಾಗುತ್ತದೆ. ಶಿಕ್ಷಕರಿಂದ ಸಮೀಕ್ಷೆ ನಡೆಸುವುದಕ್ಕೆ ಸರ್ಕಾರ ಸೂಚನೆ ನೀಡಿದೆ. ಅದರಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಸಮೀಕ್ಷೆ ಆರಂಭಕ್ಕೂ ಮುನ್ನಾ ಶಿಕ್ಷಕರಿಗೆ ಸಮೀಕ್ಷೆ ಹೇಗೆ ನಡೆಸುವುದು ಎಂಬುದರ ಬಗ್ಗೆ ತರಬೇತಿ ಕಾರ್ಯಕ್ರಮ ನಡೆಸಲಾಗುವುದು. ಆ ಬಳಿಕ ಮೇ 5 ರಿಂದ 17ರ ವರೆಗೆ ಸರ್ಕಾರಿ ರಜೆ ಹೊರತು ಪಡಿಸಿ 10 ದಿನ ಸಮೀಕ್ಷೆ ನಡೆಸಲಾಗುತ್ತದೆ. ಸಮೀಕ್ಷೆಗೆ ಸುಮಾರು 6 ಸಾವಿರ ಗಣತಿದಾರರು ಬೇಕಾಗಲಿದ್ದಾರೆ. ಅಷ್ಟೊಂದು ಶಿಕ್ಷಕರು ಲಭ್ಯವಾಗದಿದ್ದರೆ, ಬಿಬಿಎಂಪಿಯ ಸಿಬ್ಬಂದಿ ಸೇರಿಸಿಕೊಂಡು ಸಮೀಕ್ಷೆ ನಡೆಸಲಾಗುವುದು ತೀರ್ಮಾನಿಸಲಾಗಿದೆ.

ಮೂರು ವಿಧದಲ್ಲಿ ಸಮೀಕ್ಷೆ:

ಮನೆ- ಮನೆ ಭೇಟಿ ನೀಡಿ ದತ್ತಾಂಶ ಸಂಗ್ರಹ, ಮನೆಯಲ್ಲಿ ಲಭ್ಯವಾಗದವರಿಗೆ ಆಯಾ ಚುನಾವಣೆ ಬೂತ್‌ನಲ್ಲಿ ಶಿಬಿರ ನಡೆಸಿ ದತ್ತಾಂಶ ಸಂಗ್ರಹಿಸುವುದು. ಆನ್‌ಲೈನ್‌ ಮೂಲಕವೂ ಸ್ವಯಂ ಪ್ರೇರಿತರಾಗಿ ಪರಿಶಿಷ್ಟ ಜಾತಿಯವರೇ ತಮ್ಮ ಮಾಹಿತಿಯನ್ನು ದಾಖಲಿಸುವುದಕ್ಕೂ ವ್ಯವಸ್ಥೆ ಮಾಡಲಾಗಿದೆ ಎಂದು ಬಿಬಿಎಂಪಿ ಕಲ್ಯಾಣ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಮಾಹಿತಿ ನೀಡಿದ್ದಾರೆ.

ದತ್ತಾಂಶ ಪರಿಶೀಲನೆಗೆ ಅವಕಾಶ:

ಸಮೀಕ್ಷೆಯಲ್ಲಿ ಪಡೆದೆ ದತ್ತಾಂಶವನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಲಾಗುವುದು. ಒಂದು ವೇಳೆ ತಪ್ಪು ಮಾಹಿತಿ ದಾಖಲಾಗಿದ್ದರೆ ಅನ್ನು ಸರಿ ಪಡಿಸಿಕೊಳ್ಳುವುದಕ್ಕೆ ಅವಕಾಶ ನೀಡಲಾಗುವುದು. ಇನ್ನು ಸಂಗ್ರಹಿಸಿದ ದತ್ತಾಂಶ ಸರಿಯಾಗಿದೆಯೇ ಎಂಬುದರ ಬಗ್ಗೆ ಶೇ.10 ರಷ್ಟು ರ್‍ಯಾಂಡ್ ಪರಿಶೀಲನೆ ನಡೆಸಲಾಗುವುದು ಎಂದು ವಿವರಿಸಿದ್ದಾರೆ.