ಹೇಳುವ ರೀತಿಯಲ್ಲಿನ ಕತೆಯ ವೈವಿಧ್ಯತೆ ನಿರಾಕರಿಸಬಾರದು : ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ

| N/A | Published : Feb 03 2025, 01:15 AM IST / Updated: Feb 03 2025, 05:11 AM IST

ಹೇಳುವ ರೀತಿಯಲ್ಲಿನ ಕತೆಯ ವೈವಿಧ್ಯತೆ ನಿರಾಕರಿಸಬಾರದು : ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಅಮಾನವೀಯ ಸಾಹಿತ್ಯವನ್ನು ಓದುಗರು ತಿರಸ್ಕರಿಸಬೇಕೆ ವಿನಃ ಕತೆ ಹೇಳುವ ರೀತಿಯಲ್ಲಿನ ವೈವಿಧ್ಯತೆಯನ್ನು ನಿರಾಕರಣೆಯ ಧೋರಣೆಯಿಂದ ನೋಡಬಾರದು ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದರು.

 ಬೆಂಗಳೂರು : ಅಮಾನವೀಯ ಸಾಹಿತ್ಯವನ್ನು ಓದುಗರು ತಿರಸ್ಕರಿಸಬೇಕೆ ವಿನಃ ಕತೆ ಹೇಳುವ ರೀತಿಯಲ್ಲಿನ ವೈವಿಧ್ಯತೆಯನ್ನು ನಿರಾಕರಣೆಯ ಧೋರಣೆಯಿಂದ ನೋಡಬಾರದು ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದರು.

ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷತ್‌ ಮಂದಿರದಲ್ಲಿ ತ್ರಿವೇಣಿ ಶೆಲ್ಲಿಕೇರಿ ಪ್ರತಿಷ್ಠಾನ, ಬಾಗಲಕೋಟೆಯ ಓದು ಗೆಳೆಯರ ಬಳಗ ಹಾಗೂ ಅಮೂಲ್ಯ ಪ್ರಕಾಶನ ಆಯೋಜಿಸಿದ್ದ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರ ‘ಹವೇಲಿ ದೊರೆಸಾನಿ’ ಕಥಾ ಸಂಕಲನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾಹಿತ್ಯದಲ್ಲಿ ಸೃಜನಶೀಲತೆಗೆ ಅವಕಾಶವಿದೆ. ಹೀಗಾಗಿಯೇ ವಾಲ್ಮೀಕಿ ರಾಮಾಯಣ, ವ್ಯಾಸರ ಮಹಾಭಾರತ ಬೇರೆ ಬೇರೆ ಭಾಷೆ, ಸಂಸ್ಕೃತಿ, ವಿಚಾರಧಾರೆಯೊಂದಿಗೆ ಮರುಹುಟ್ಟು ಪಡೆದಿದೆ. ಸಾಹಿತ್ಯಗಳ ಈ ಮರುಹುಟ್ಟು ಸೃಜನಶೀಲತೆ ಪ್ರತಿಪಾದಿಸುತ್ತದೆ ಎಂದರು.

ಸೃಜನಶೀಲತೆಯು ವೈವಿಧ್ಯತೆ ಹಾಗೂ ಮಾನವೀಯತೆಯೊಂದಿಗೆ ಬೆಸೆದುಕೊಂಡಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ, ಸಮಾನತೆ, ಸಹಿಷ್ಣುತೆ ಹಾಗೂ ಮಾನವೀಯ ಅಂಶಗಳು ಇದರಲ್ಲಿವೆ. ಆದ್ದರಿಂದ ಅದು ಪ್ರಜಾಸತ್ತಾತ್ಮಕ ಸ್ವರೂಪದಲ್ಲಿ ಇರುತ್ತದೆಯೇ ಹೊರತು ಸರ್ವಾಧಿಕಾರಿಯಾಗಿರುವುದಿಲ್ಲ. ಹಾಗೆಯೇ ಕನ್ನಡ ಕಥನಲೋಕದಲ್ಲಿ ಗಂಭೀರ, ಜನಪ್ರಿಯ, ಸರಳ ಎಂಬಂತೆ ಹಲವು ವಿಧಾನ ಕಾಣಬಹುದು. ಇಲ್ಲಿ ಯಾವುದೇ ಒಂದು ವಿಧಾನವನ್ನು ಶ್ರೇಷ್ಠ ಎಂದು ಪರಿಗಣಿಸಿ ಇನ್ನೊಂದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಕತೆಗಾರ್ತಿ ಬಿ.ಆರ್.ಶ್ರುತಿ ಮಾತನಾಡಿ, ಸಮಾಜದ ಸಂಕಷ್ಟಗಳಿಗೆ ಪ್ರತಿಕ್ರಿಯಿಸುವ ಮನಸ್ಥಿತಿ ‘ಹವೇಲಿ ದೊರೆಸಾನಿ’ ಕೃತಿಯ ಮೂಲಬಿಂದುವಾಗಿದೆ. ಕೃತಿಯ ಹಲವು ಕತೆಗಳಲ್ಲಿ ದುರ್ಬಲರು, ದಮನಿತರು ಹಾಗೂ ಸಮಾಜದಿಂದ ನಿರ್ಲಕ್ಷ್ಯಕ್ಕೆ ಒಳಗಾದವರ ಧ್ವನಿ ವ್ಯಕ್ತವಾಗಿದೆ. ಗ್ರಾಮೀಣ ಬದುಕಿನ ಸಂಕಟವನ್ನು ಈ ಕಥೆಗಳು ತೆರೆದಿಡುತ್ತದೆ. ಲೇಖಕ ತನ್ನ ಸುತ್ತಲಿನ ಘಟನೆಗಳನ್ನು ಗ್ರಹಿಸುವಲ್ಲಿ ಯಶಸ್ವಿಯಾಗಿರುವುದು ಪುಸ್ತಕದುದ್ದಕ್ಕೂ ಕಾಣಿಸುತ್ತದೆ ಎಂದರು.

ಪತ್ರಕರ್ತ ಚ.ಹ.ರಘುನಾಥ್ ಮಾತನಾಡಿ, ಸರಳವಾಗಿ ಬರೆಯುವುದು ಎಂದರೆ ಜಾಳುಜಾಳಾಗಿ ಬರೆಯುವುದಲ್ಲ. ಸರಳವಾಗಿ ಬರೆಯುವುದೂ ಕಷ್ಟದ ಕೆಲಸವೇ ಆಗಿದೆ. ಕೃತಿಕಾರರು ಸರಳ ಬರವಣಿಗೆಯನ್ನು ರೂಢಿಸಿಕೊಳ್ಳಬೇಕು ಎಂದರು.ಕತೆಗಾರ ಎಸ್.ದಿವಾಕರ, ಪುಸ್ತಕದ ಲೇಖಕ ಮಂಜುನಾಥ ಶೆಲ್ಲಿಕೇರಿ, ಬಾಗಲಕೋಟೆ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಇದ್ದರು.