ದೇವಸ್ಥಾನಗಳ ಅಕ್ಕಪಕ್ಕ ಇರುವ ಖಾಲಿ ಜಾಗವನ್ನು ಅರಣ್ಯ ಇಲಾಖೆ ವಿಶೇಷ ಕಾಳಜಿ ಮತ್ತು ಮುತುವರ್ಜಿಯಿಂದ ದೈವಿವನಗಳನ್ನಾಗಿ ಅಭಿವೃದ್ಧಿಪಡಿಸುತ್ತಿದೆ. ಇಲ್ಲಿ ಅರಳಿ, ಬನ್ನಿ, ಬಿಲ್ವಪತ್ರೆ ಮತ್ತು ನಾಗಸಂಪಿಗೆ ಮತ್ತಿತರ ಧಾರ್ಮಿಕ ವೃಕ್ಷಗಳನ್ನು ಆದ್ಯತೆ ಮೇರೆಗೆ ನೆಟ್ಟು ಬೆಳೆಸಲಾಗುತ್ತದೆ

ದೇವಸ್ಥಾನಗಳ ಅಕ್ಕಪಕ್ಕ ಇರುವ ಖಾಲಿ ಜಾಗವನ್ನು ಅರಣ್ಯ ಇಲಾಖೆ ವಿಶೇಷ ಕಾಳಜಿ ಮತ್ತು ಮುತುವರ್ಜಿಯಿಂದ ದೈವಿವನಗಳನ್ನಾಗಿ ಅಭಿವೃದ್ಧಿಪಡಿಸುತ್ತಿದೆ. ಇಲ್ಲಿ ಅರಳಿ, ಬನ್ನಿ, ಬಿಲ್ವಪತ್ರೆ ಮತ್ತು ನಾಗಸಂಪಿಗೆ ಮತ್ತಿತರ ಧಾರ್ಮಿಕ ವೃಕ್ಷಗಳನ್ನು ಆದ್ಯತೆ ಮೇರೆಗೆ ನೆಟ್ಟು ಬೆಳೆಸಲಾಗುತ್ತದೆ. ಇದರ ಜೊತೆಗೆ ರಾಶಿ ವನ, ನಕ್ಷತ್ರವನ, ನವಗ್ರಹ ವನಗಳನ್ನೂ ಸಹ ನಿರ್ಮಾಣ ಮಾಡಲಾಗುತ್ತಿದೆ.

ಅರಣ್ಯ ಇಲಾಖೆ ರಾಜ್ಯದಲ್ಲಿ ಸದ್ದಿಲ್ಲದೇ ನಗರ ಪ್ರದೇಶಗಳಲ್ಲಿ ಹೊಸ ಹಸಿರು ಕ್ರಾಂತಿಯೊಂದನ್ನು ಮಾಡುತ್ತಿದೆ. ಕಾಡನ್ನು ಸಂರಕ್ಷಣೆ ಮಾಡಿ ವನ್ಯಜೀವಿಗಳಿಗೆ ಭದ್ರತೆ ಒದಗಿಸುವ ಜೊತೆಗೆ ನಗರ ಮತ್ತು ಪಟ್ಟಣ ಪ್ರದೇಶಗಳ ಜನರಿಗೂ ಪರಿಸರದ ಲಾಭ ಸಿಗಲಿ ಎನ್ನುವ ಉದ್ದೇಶದಿಂದ ವೃಕ್ಷೋದ್ಯಾನ ಯೋಜನೆಯನ್ನು ಅತ್ಯುತ್ತಮವಾಗಿ ಹಾಗೂ ತ್ವರಿತಗತಿಯಲ್ಲಿ ಜಾರಿಗೊಳಿಸುತ್ತಿದೆ. ದೈವಿ ವನ, ವೃಕ್ಷೋದ್ಯಾನ ಮತ್ತು ನಗರ ವನಗಳ ಹೆಸರಿನಲ್ಲಿ ನಾನಾ ಕಡೆ ಹಸಿರಿಕರಣ

ಯೋಜನೆಯನ್ನು ಯಶಸ್ವಿಯಾಗಿ ಕೈಗೆತ್ತಿಕೊಳ್ಳಲಾಗಿದೆ.

ನಗರ ಮತ್ತು ಪಟ್ಟಣಗಳ ಹೊರವಲಯ ಅಥವಾ ಎಲ್ಲಿ ಜಾಗ ಲಭ್ಯವಿದೆಯೋ ಅಲ್ಲಿ “ನಗರದ ಶ್ವಾಸಕೋಶ (Urban Lung Space)” ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ನಮ್ಮ ನಡುವೆ ಇದ್ದ ಅತ್ಯಂತ ಅಪರೂಪದ ಸಾಲುಮರದ ತಿಮ್ಮಕ್ಕ ಅವರ ಕೊಡುಗೆಯನ್ನು ನೆನಪಿಸಲು ಅವರದ್ದೇ ಹೆಸರಿನಲ್ಲಿ ರಾಜ್ಯದ ಬಹುತೇಕ ಎಲ್ಲ ಪಟ್ಟಣ ಮತ್ತು ನಗರಗಳಲ್ಲಿ ಸಾಲು ಮರದ ತಿಮ್ಮಕ್ಕ ವೃಕ್ಷ ಉದ್ಯಾನವನಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ತಿಮ್ಮಕ್ಕ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸಾರ್ವಜನಿಕರಿಗಾಗಿ, ಸಮಾಜಕ್ಕಾಗಿ ರಸ್ತೆ ಪಕ್ಕ ಸಾಲು ಮರಗಳನ್ನು ನೆಟ್ಟು ದಶಕಗಳ ಕಾಲ ಪೋಷಣೆ ಮಾಡಿದ್ದರು. ಅವರ ಪರಿಸರ ಪ್ರೇಮ ಅರಣ್ಯ ಇಲಾಖೆಗೆ ಹೊಸ ಆಲೋಚನೆಯನ್ನು ನೀಡಿದೆ. ಆದ್ದರಿಂದ ಅವರದ್ದೇ ಹೆಸರಿನಿಂದ ವೃಕ್ಷೋದ್ಯಾನಗಳನ್ನು ನಿರ್ಮಾಣ ಮಾಡಿ ಆ ಮೂಲಕ ತಿಮ್ಮಕ್ಕನ ಪರಿಸರ ಸೇವೆಯ ಪರಂಪರೆಯನ್ನು ಗುರುತಿಸಿ, ಗೌರವಿಸಿ, ಮುಂದುವರಿಸಿಕೊಂಡು ಹೋಗಲಾಗುತ್ತಿದೆ. 2011-12ರಲ್ಲಿ ಶುರುವಾದ ಈ ಯೋಜನೆ ನಗರ ಮತ್ತು ಪಟ್ಟಣ ಪ್ರದೇಶದ ಜನರಿಗೆ ಉತ್ತಮ ಮತ್ತು ಆರೋಗ್ಯಕರ ಪರಿಸರವನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಜಿಲ್ಲಾ ಕೇಂದ್ರ, ನಗರ ಮತ್ತು ಪಟ್ಟಣ ಪ್ರದೇಶಗಳ ಸಮೀಪವಿರುವ ಅರಣ್ಯ, ಅರಣ್ಯೇತರ ಅಥವಾ ಸಮುದಾಯ ಭೂಮಿಗಳಲ್ಲಿ ವೃಕ್ಷೋದ್ಯಾನಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಜನಸಾಂದ್ರತೆ ಹೆಚ್ಚಿರುವ ಪ್ರದೇಶಗಳನ್ನು ಗುರಿಯಾಗಿಸಿಕೊಂಡು, ಪ್ರತಿ ತಾಲೂಕಿನಲ್ಲಿಯೂ ಸಾರ್ವಜನಿಕರ ಬಳಕೆಗೆ ಅಗತ್ಯವಾದ ಹಸಿರು ವಲಯಗಳನ್ನು ನಿರ್ಮಿಸುವುದು ಈ ಯೋಜನೆಯ ಆಶಯ.

ಸದ್ಯ ರಾಜ್ಯದ ಬಹುತೇಕ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೊಂದು ಟ್ರಿ ಪಾರ್ಕ್‌(ವೃಕ್ಷೋದ್ಯಾನ)ಗಳನ್ನು ಸ್ಥಾಪಿಸಲಾಗಿದೆ. ಆದಷ್ಟು ಸ್ಥಳೀಯ ಜಾತಿ ಗಿಡ, ಮರಗಳನ್ನು ನೆಡುವುದರ ಜೊತೆಗೆ ಅಲಂಕಾರಿಕ, ಹೂವಿನ ಗಿಡಗಳನ್ನೂ ಸಹ ಇಲ್ಲಿ ಬೆಳೆಸಲಾಗುತ್ತದೆ. ಇಲ್ಲಿ ಜನರಿಗೆ ವಾಕಿಂಗ್‌ ರಸ್ತೆ ಹಾಗೂ ದೈಹಿಕ ಚಟುವಟಿಕೆ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. ಜೊತೆಗೆ ಶೌಚಾಲಯ, ಮಕ್ಕಳ ಆಟಿಕೆಗಳ ಸೌಲಭ್ಯ ಸಹ ಇಲ್ಲಿ ಕಲ್ಪಿಸಲಾಗುತ್ತಿದೆ. ಕೇವಲ 3 ರಿಂದ 5 ವರ್ಷಗಳಲ್ಲೇ ಇದು ಸುಂದರ, ಜೈವಿಕ ಉದ್ಯಾನವನವಾಗಿ ರೂಪುಗೊಳ್ಳುತ್ತದೆ. ಇದರಿಂದಾಗಿ ಆ ಸುತ್ತಮುತ್ತಲಿನ ಜಾಗದಲ್ಲಿ ಅಂತರ್ಜಲದ ಹೆಚ್ಚಳದ ಜೊತೆಗೆ ಆ ಊರಿನ ಜನತೆಗೆ ಹೊಸ ಹಸಿರು ಶ್ವಾಸಕೋಶವೂ ಸಿಕ್ಕಂತಾಗುತ್ತದೆ.

ರಾಜ್ಯದಲ್ಲಿ ಈಗ 224 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಂಗಳೂರು ಸೇರಿದಂತೆ ಸುಮಾರು 210 ವೃಕ್ಷೋದ್ಯಾನಗಳನ್ನು ನಿರ್ಮಾಣ ಮಾಡಲಾಗಿದೆ. ಅದೇ ರೀತಿ ಸುಮಾರು 134 ಜಾಗಗಳಲ್ಲಿ ಪವಿತ್ರವನ/ ದೈವಿ ವನಗಳನ್ನು ನಿರ್ಮಿಸಲಾಗಿದೆ. ದೇವರಕಾಡುಗಳು ನೈಸರ್ಗಿಕವಾಗಿಯೇ ಇರುವುದನ್ನು ಸಂರಕ್ಷಿಸಿಕೊಂಡು ಬರಲಾಗುತ್ತಿದೆ. ಈ ಅಮೂಲ್ಯ ಪರಿಸರ ವ್ಯವಸ್ಥೆಗಳನ್ನು ಪವಿತ್ರ ತೋಪುಗಳಾಗಿ ಅವುಗಳ ಮೂಲ ಸ್ಥಿತಿಯಲ್ಲಿ ಸಂರಕ್ಷಿಸಲು, ಯಾವುದೇ ಹಸ್ತಕ್ಷೇಪವಿಲ್ಲದೇ, ಅವುಗಳ ನೈಸರ್ಗಿಕ ಬೆಳವಣಿಗೆಯನ್ನು ಮುಂದುವರಿಸಿಕೊಂಡು ಹೋಗಲು ಅನುವು ಮಾಡಿಕೊಡಲು ಈ ಯೋಜನೆಯನ್ನು 2010-11ರಲ್ಲಿ ಪ್ರಾರಂಭಿಸಲಾಯಿತು. ಪ್ರತಿ ಜಿಲ್ಲೆಯಲ್ಲಿ ಒಂದು ದೈವಿವನ ಸ್ಥಾಪಿಸಲಾಗುತ್ತಿದೆ. ಒಟ್ಟು 134 ದೈವಿವನಗಳ ನಿರ್ಮಾಣ ಆಗಿದೆ.

13 ದೇವರಕಾಡುಗಳ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಈ ಪೈಕಿ 8 ಹೊಸ ದೈವಿವನಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಅರಣ್ಯ ಇಲಾಖೆ ವೃಕ್ಷೋದ್ಯಾನ, ದೈವಿವನ ಮತ್ತು ನಗರ ವನಗಳ ನಿರ್ಮಾಣ ಮಾತ್ರವಲ್ಲ, ಅವುಗಳ ನಿರ್ವಹಣೆಯನ್ನೂ ಸಹ ಮಾಡಿಕೊಂಡು ಬರುತ್ತಿದೆ. ಈ ನಗರ ಮತ್ತು ದೈವಿವನಗಳ ಮೂಲಕ ಅರಣ್ಯ ಇಲಾಖೆ ನಗರ ಪ್ರದೇಶಗಳ ಜನರು ಹಾಗೂ ದೇವಸ್ಥಾನಕ್ಕೆ ಬರುವ ಭಕ್ತರು ಹೀಗೆ ಇಬ್ಬರನ್ನೂ ಏಕಕಾಲಕ್ಕೆ ಅರಣ್ಯ ಸಂರಕ್ಷಣೆಯ ಮಹತ್ವವನ್ನು ತಿಳಿಸಿಕೊಡುವ ಕೆಲಸ ಮಾಡುತ್ತಿದೆ. ಈ ವನಗಳಲ್ಲಿ ಪ್ರತಿ ಮರಕ್ಕೂ ಅದರ ಹೆಸರು, ಕಾಯಿ, ಎಲೆಗಳ ಹಾಗೂ ಮರದ ಪಾರಿಸಾರಿಕ ಕೊಡುಗೆಯ ವಿವರಗಳ ಫಲಕ ಹಾಕಲಾಗುತ್ತದೆ.

ಬೆಂಗಳೂರು ಸೇರಿದಂತೆ ಇದೀಗ ಇಡೀ ರಾಜ್ಯದಲ್ಲಿ 250ಕ್ಕೂ ಹೆಚ್ಚು ನಗರ ವನಗಳನ್ನು ಅರಣ್ಯ ಇಲಾಖೆ ನಿರ್ಮಾಣ ಮಾಡಿದೆ. ಇವುಗಳ ಒಟ್ಟು ಸರಾಸರಿ ವಿಸ್ತೀರ್ಣ ತೆಗೆದುಕೊಂಡರೇ, ಇದೊಂದು ಬೃಹತ್‌ ಅರಣ್ಯವೊಂದರ ಸೃಷ್ಟಿ ಎನಿಸುತ್ತದೆ. ಪ್ರತಿ ನಗರ ವನಗಳೂ ಸಹ ವಿಶಿಷ್ಟ ಜೈವಿಕ ಜಾಲವನ್ನೇ ಸೃಷ್ಟಿಸುತ್ತವೆ. ನಗರ ಪ್ರದೇಶ ಮಾತ್ರವಲ್ಲ, ಎಲ್ಲೆಲ್ಲಿ ಈ ವನಗಳು ನಿರ್ಮಾಣವಾಗುತ್ತವೆಯೋ ಅಲ್ಲೆಲ್ಲ ಸುತ್ತಮುತ್ತಲಿನ ಪರಿಸರಕ್ಕೆ ಅವುಗಳ ಜೈವಿಕ ಕೊಡುಗೆಯೂ ಅಪಾರ. ಕರ್ನಾಟಕ ಅರಣ್ಯ ಇಲಾಖೆ ಒಂದು ಉದಾತ್ತ ಯೋಚನೆಯ ಮೂಲಕ ಸರಿ ಸುಮಾರು 20 ಸಾವಿರ ಎಕರೆ ಪ್ರದೇಶದಲ್ಲಿ ಈ ವನಗಳನ್ನು ನಿರ್ಮಿಸಿದೆ. ಬೆಂಗಳೂರಿನಲ್ಲಿ ಲಾಲ್‌ ಬಾಗ್‌, ಕಬ್ಬನ್‌ ಪಾರ್ಕ್‌ ಜೊತೆಗೆ ಇನ್ನೂ ನಾಲ್ಕು ಬೃಹತ್‌ ವೃಕ್ಷೋದ್ಯಾನ/ಇಕೋ ಪಾರ್ಕ್‌ ಗಳು ತಲೆ ಎತ್ತಲಿವೆ. ಆ ಮೂಲಕ ನಗರ ವಾಸಿಗಳಿಗೂ ಅರಣ್ಯದ ಸೇವೆ ಸಿಗುವಂತೆ ಅರಣ್ಯ ಇಲಾಖೆ ಕೆಲಸ ಮಾಡಿದೆ.

ಬೆಂಗಳೂರಿನ ವೃಕ್ಷೋದ್ಯಾನಗಳು

೧. ಪಣತ್ತೂರು ವೃಕ್ಷೋದ್ಯಾನ, ವರ್ತೂರು

೨. ಕಾಡುಗೋಡಿ ವೃಕ್ಷೋದ್ಯಾನ, ಕಾಡುಗೋಡಿ

೩ ತುರಹಳ್ಳಿ ಟ್ರೀ ಪಾರ್ಕ್‌

೪ ಎಚ್‌ಎಸ್‌ಆರ್‌ ಲೇಔಟ್‌ ಟ್ರೀ ಪಾರ್ಕ್‌

೫ ಜಾರಕಬಂಡೆ ಕಾವಲ್‌ ಟ್ರೀ ಪಾರ್ಕ್‌

ಒಟ್ಟು ದೈವಿವನ-134

ಒಟ್ಟು ಟ್ರಿ ಪಾರ್ಕ್‌ - 210(5890 ಹೆಕ್ಟೇರ್‌)

ಒಟ್ಟು ನಗರ ವನ- 17(580 ಹೆಕ್ಟೇರ್‌)

ಬೆಂಗಳೂರು ನಗರ ಟ್ರೀ ಪಾರ್ಕ್‌ - 11(475 ಹೆಕ್ಟೇರ್‌