ಕಳೆದ ವರ್ಷ ತಾಯಿಯಾಗಿದ್ದ ನಟಿ ಕತ್ರೀನಾ ಕೈಫ್ ಅವರು ಇತ್ತೀಚೆಗೆ ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಮನೆಯಲ್ಲಿ ಕೂರಿಸಲಾಗಿದ್ದ ಗಣೇಶನ ದರ್ಶನ ಪಡೆಯಲು ಬಂದಿದ್ದರು. ಈ ವೇಳೆ ಅವರ ದೇಹತೂಕ ಕೊಂಚ ಹೆಚ್ಚಿದಂತೆ ಕಂಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಬಾಡಿ ಶೇಮಿಂಗ್ ಆರಂಭವಾಗಿತ್ತು
ಕತ್ರೀನಾ ಕೈಫ್ಬಾಲಿವುಡ್ ನಟಿ
ಕಳೆದ ವರ್ಷ ನವೆಂಬರ್ನಲ್ಲಿ ತಾಯಿಯಾಗಿದ್ದ ನಟಿ ಕತ್ರೀನಾ ಕೈಫ್ ಅವರು ಇತ್ತೀಚೆಗೆ ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಮನೆಯಲ್ಲಿ ಕೂರಿಸಲಾಗಿದ್ದ ಗಣೇಶನ ದರ್ಶನ ಪಡೆಯಲು ಬಂದಿದ್ದರು. ಈ ವೇಳೆ ಅವರ ದೇಹತೂಕ ಕೊಂಚ ಹೆಚ್ಚಿದಂತೆ ಕಂಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಬಾಡಿ ಶೇಮಿಂಗ್ ಆರಂಭವಾಗಿತ್ತು. ಅದಕ್ಕೆ ತಕ್ಷಣ ಪ್ರತಿಕ್ರಿಯಿಸದ ಕೈಫ್, ಲಂಡನ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರೋಕ್ಷವಾಗಿ ದಿಟ್ಟ ಉತ್ತರ ನೀಡಿದ್ದಾರೆ.
ನೀವು ಸದಾ ಎಲ್ಲರಿಗೂ ಒಪ್ಪಿಗೆಯಾಗುವಂತೆ ಇರಲು, ಬದುಕಲು ಸಾಧ್ಯವೇ ಇಲ್ಲ. ಒಂದೊಮ್ಮೆ ನೀವು ಜನರನ್ನು ಮೆಚ್ಚಿಸುತ್ತೇನೆ ಎಂದು ಹೊರಟುಬಿಟ್ಟರೆ, ಅದಕ್ಕೆ ನೀವು ತೆರಬೇಕಾದ ಬೆಲೆ ಬಲು ದುಬಾರಿಯಾಗುತ್ತದೆ. ನಿಮ್ಮ ಸ್ವ-ಬೆಳವಣಿಗೆ ಹಾಗೂ ಸ್ವಾತಂತ್ರ್ಯವನ್ನೇ ಪಣಕ್ಕಿಟ್ಟು ಕಳೆದುಕೊಳ್ಳಬೇಕಾಗುವುದು. ಜತೆಗೆ ಅದು ನಿಮ್ಮ ಆತ್ಮಸ್ಥೈರ್ಯಕ್ಕೆ ಪೆಟ್ಟು ಕೊಡುತ್ತದೆ ಹಾಗೂ ನಿಮ್ಮ ಆಯ್ಕೆಯಂತೆ ಬದುಕಲು ಬಿಡದು.
ಇತ್ತೀಚೆಗೆ ನನ್ನ ದೇಹದ ಬಗ್ಗೆಯೂ ಜನ ಭಾರೀ ಟೀಕೆಗಳನ್ನು ಮಾಡಿದ್ದರು. ಆದರೆ ನಾನು ಅವೆಲ್ಲವುಗಳನ್ನು ಕೇಳಿಸಿಕೊಳ್ಳದೆ ಮುಂದುವರಿದೆ.
ಟೀಕೆಗಳ ಪಾಲಿಗೆ ಕಿವುಡರಾಗಿ:
ಸಾಮಾಜಿಕ ಜಾಲತಾಣಗಳಲ್ಲಿ ಜನ ಹಂಚಿಕೊಳ್ಳುವ ಥರಹೇವಾರಿ ಅಭಿಪ್ರಾಯಗಳು ಅಥವಾ ಪ್ರಚಲಿತ ಮಾತುಗಳು ನಮ್ಮ ಆತ್ಮಗೌರವ ಮತ್ತು ಮೌಲ್ಯದ ಮೇಲೆ ಪ್ರಭಾವ ಬೀರದಂತೆ ನಾವು ಎಚ್ಚರಿಕೆ ವಹಿಸಬೇಕು. ಇದು ನನ್ನ ಅನುಭವ ಹಾಗೂ ಅನಿಸಿಕೆ. ಏಕೆಂದರೆ ಜಾಲತಾಣಗಳಲ್ಲಿ ಅಸಂಖ್ಯಾತ ಅಭಿಪ್ರಾಯಗಳಿರುತ್ತವೆ. ಅವೆಲ್ಲವನ್ನೂ ತೃಪ್ತಿಪಡಿಸಲು ಅಥವಾ ಅವುಗಳಿಗೆ ಅನುಗುಣವಾಗಿ ನಡೆಯಲು ಪ್ರಯತ್ನಿಸಿದರೆ, ಸ್ವತಃ ನಮಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ನಮ್ಮ ಸಾಮರ್ಥ್ಯಕ್ಕೆ ಅದು ಖಂಡಿತವಾಗಿಯೂ ಅಡ್ಡಿಯುಂಟುಮಾಡುತ್ತದೆ. ಆದ್ದರಿಂದ ಟೀಕೆಗಳಿಗೆ, ಅದರಲ್ಲೂ ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಜನ ನಿಮ್ಮ ಬಗ್ಗೆ ಹರಿಬಿಡುವ ಥರಹೇವಾರಿ ಹೇಳಿಕೆಗಳಿಗೆ, ಟೀಕೆ, ಟ್ರೋಲ್ಗಳಿಗೆ ಕಿವಿಗೊಡದೆ ಆತ್ಮಗೌರವವನ್ನು ರಕ್ಷಿಸಿಕೊಳ್ಳಿ.
ನಿಮಗಾಗಿ ನೀವು ಬದುಕಿ:
ವೈಯಕ್ತಿಕವಾಗಿ ಹೇಳುವುದಾದರೆ, ಟೀಕೆಗಳು ಅಥವಾ ಪ್ರತಿಕ್ರಿಯೆಗಳನ್ನು ಎದುರಿಸಿದಾಗಲೆಲ್ಲಾ ಅವುಗಳೇ ನನ್ನ ಮುಂದಿನ ನಡೆಗಳನ್ನು ನಿರ್ಧರಿಸುವಂತಾಗಲು ನಾನು ಅವಕಾಶ ನೀಡಿದ್ದರೆ, ಬಹುಶಃ ಭಯದಿಂದಾಗಿ ನಾನು ಪ್ಯಾರಲೈಸ್ ಆದವರಂತೆ ನಿಂತ ನೀರಾಗಿ, ಜೀವನದಲ್ಲಿ ಅಥವಾ ಯಾವುದೇ ಕ್ಷೇತ್ರದಲ್ಲಿಯೂ ಮುಂದೆ ಸಾಗಲು ಸಾಧ್ಯವಾಗುತ್ತಿರಲಿಲ್ಲವೇನೋ ಎಂದು ನನಗೆ ಅನ್ನಿಸುತ್ತದೆ. ಕೆಲವೊಮ್ಮೆ ಜಗತ್ತು ನಿಮ್ಮ ಯಶಸ್ಸನ್ನು ವಿಜೃಂಭಣೆಯಿಂದ ಸಂಭ್ರಮಿಸುತ್ತದೆ. ಆದರೆ, ಇನ್ನು ಕೆಲವು ಸಂದರ್ಭಗಳಲ್ಲಿ ಪರಿಸ್ಥಿತಿ ತಲೆಕೆಳಗಾಗುತ್ತದೆ. ಅಂತಹ ಸಮಯದಲ್ಲಿ ನೀವೇ ಸ್ವತಃ ನಿಮ್ಮ ಅತಿದೊಡ್ಡ ಚಿಯರ್ ಲೀಡರ್ ಆಗಬೇಕಾಗುತ್ತದೆ ಹಾಗೂ ಮುಂದೆ ಅಡಿಯಿಡಲು ಉತ್ತೇಜಿಸಿಕೊಳ್ಳಬೇಕಾಗುತ್ತದೆ.
ನನ್ನ ಬ್ರ್ಯಾಂಡ್ನ ಸಂದೇಶವೂ ಇದೇ:
ನನ್ನ ಬ್ಯೂಟಿ ಬ್ರ್ಯಾಂಡ್ ಆದ ‘ಕೇ ಬ್ಯೂಟಿ’ಯ (Kay Beauty) ಘೋಷವಾಕ್ಯ (ಟ್ಯಾಗ್ಲೈನ್) ‘It’s K to be you’ ಎಂದಿದೆ. ಇದರರ್ಥ, ನೀವು ನೀವಾಗಿಯೇ ಇರುವುದರಲ್ಲಿ ತಪ್ಪೇನಿಲ್ಲ. ನಿಮ್ಮನ್ನು ನೀವು ಒಪ್ಪಿಕೊಳ್ಳಬೇಕು ಮತ್ತು ಈ ಕ್ಷಣದಲ್ಲಿ ನೀವು ಹೇಗಿದ್ದೀರೋ, ಅದಕ್ಕೆ ನಿಷ್ಠರಾಗಿರಬೇಕು. ಇದು ದಿನದಿಂದ ದಿನಕ್ಕೆ ಬದಲಾಗುತ್ತಿರುತ್ತದೆ ಹಾಗೂ ನಿಮ್ಮ ಜೀವನದ ವಿವಿಧ ಹಂತಗಳು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪರಿವರ್ತನೆಗಳಾಗುತ್ತಿರುತ್ತದೆ. ಹೀಗಿದ್ದರೂ, ಜನರು ತಮ್ಮ ವಿಶಿಷ್ಟ ವ್ಯಕ್ತಿತ್ವವನ್ನು ಉಳಿಸಿಕೊಳ್ಳಲು ಮತ್ತು ಜೀವನದ ವಿವಿಧ ಹಂತಗಳಲ್ಲಿ ತಮ್ಮನ್ನು ತಾವು ಒಪ್ಪಿಕೊಳ್ಳಲು ಇದು ಪ್ರೋತ್ಸಾಹಿಸುತ್ತದೆ.
ಸಮಯ ಸದಾ ಒಂದೇ ರೀತಿ ಇರದು:
ಎಲ್ಲಾ ದಿನಗಳು ಒಂದೇ ರೀತಿ ಇರುವುದಿಲ್ಲ. ನಮ್ಮ ಆತ್ಮವಿಶ್ವಾಸವೂ ಸದಾ ಸ್ಥಿರವಾಗಿರುವುದಿಲ್ಲ. ಜೀವನದಲ್ಲಿ ಎಲ್ಲವನ್ನೂ ಅತ್ಯುತ್ತಮವಾಗಿ ನಿಭಾಯಿಸುತ್ತಿದ್ದೇನೆ ಎಂದು ಒಮ್ಮೊಮ್ಮೆ ಅನ್ನಿಸುತ್ತದೆ. ಹಾಗೆಯೇ, ಏನನ್ನೂ ಸರಿಯಾಗಿ ಮಾಡಲು ನನ್ನ ಕೈಲಿ ಸಾಧ್ಯವಾಗುತ್ತಿಲ್ಲ ಎಂದು ಭಾಸವಾಗುವ ಸಮಯಗಳೂ ಇರುತ್ತವೆ. ಕೆಲವೊಮ್ಮೆ, ನಿಮ್ಮ ವ್ಯಕ್ತಿತ್ವದ ಅತ್ಯುತ್ತಮವಾಗಿದೆ ಹಾಗೂ ನಾನು ಸುರದ್ರೂಪಿಯಾಗಿ ಕಾಣಿಸುತ್ತಿದ್ದೇನೆ ಎಂದು ಅಂದುಕೊಳ್ಳುತ್ತೀರಿ. ಆದರೆ ಮರುಕ್ಷಣವೇ, ನಾನಿನ್ನೂ ಆ ಹಂತ ತಲುಪಿಲ್ಲ ಎನಿಸಿಬಿಡುತ್ತದೆ. ಹೀಗೆಲ್ಲಾ ಅನ್ನಿಸುವುದು ಸಹಜ. ಇವೆಲ್ಲವನ್ನೂ ತೀರಾ ಗಂಭೀರವಾಗಿ ತೆಗೆದುಕೊಳ್ಳದೆ, ಜೀವನವನ್ನು ಹಗುರವಾಗಿ ಬಂದಂತೆ ಸ್ವೀಕರಿಸುತ್ತಾ ಆನಂದಿಸುವುದು ಒಳ್ಳೆಯದು.
