ವನ್ಯಜೀವಿಗಳ ಕಳ್ಳಸಾಗಣೆ ಪ್ರಪಂಚದಲ್ಲೇ ಎರಡನೇ ಅತಿ ಬೃಹತ್‌ ಜಾಲ. ವನ್ಯಜೀವಿಗಳ ಜೀವಂತ ಸಾಗಣೆ, ಅಂಗಾಂಗಗಳ ಕಳ್ಳಸಾಗಣೆ ಹೀಗೆ ನಾನಾ ರೀತಿಯಲ್ಲಿ ನಡೆಯುತ್ತದೆ. ಬೆಂಗಳೂರಿನಲ್ಲಿ ಮಾದಕವಸ್ತುಗಳ ಜಾಲ ಹೇಗೆ ಸಕ್ರಿಯವಾಗಿದೆಯೋ ಅದೇ ರೀತಿ ವನ್ಯಜೀವಿಗಳ ಕಳ್ಳಸಾಗಣೆ ಜಾಲವೂ ಸಕ್ರಿಯವಾಗಿತ್ತು

ವನ್ಯಜೀವಿಗಳ ಕಳ್ಳಸಾಗಣೆ ಪ್ರಪಂಚದಲ್ಲೇ ಎರಡನೇ ಅತಿ ಬೃಹತ್‌ ಜಾಲ. ವನ್ಯಜೀವಿಗಳ ಜೀವಂತ ಸಾಗಣೆ, ಅಂಗಾಂಗಗಳ ಕಳ್ಳಸಾಗಣೆ ಹೀಗೆ ನಾನಾ ರೀತಿಯಲ್ಲಿ ನಡೆಯುತ್ತದೆ. ಬೆಂಗಳೂರಿನಲ್ಲಿ ಮಾದಕವಸ್ತುಗಳ ಜಾಲ ಹೇಗೆ ಸಕ್ರಿಯವಾಗಿದೆಯೋ ಅದೇ ರೀತಿ ವನ್ಯಜೀವಿಗಳ ಕಳ್ಳಸಾಗಣೆ ಜಾಲವೂ ಸಕ್ರಿಯವಾಗಿತ್ತು. ಆದರೆ, ಈ ಜಾಲಕ್ಕೆ ಮರ್ಮಾಘಾತ ನೀಡುವಲ್ಲಿ ಕರ್ನಾಟಕ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಬೆಂಗಳೂರಿನಲ್ಲಿ ಕಳೆದ ಕೆಲವು ವರ್ಷಗಳಿಂದ ಮಾದಕವಸ್ತುಗಳ ಹಾವಳಿ ವಿಪರೀತ ಹೆಚ್ಚಾಗಿದೆ. ಅದು ಈಗ ರಾಜ್ಯದ ಬೇರೆ ಬೇರೆ ನಗರ, ಪಟ್ಟಣಗಳಿಗೂ ವ್ಯಾಪಿಸಿಬಿಟ್ಟಿದೆ. ಇಂತಹ ಮಾದಕವಸ್ತುಗಳ ಜಾಲವನ್ನು ಮಟ್ಟಹಾಕಲು ಪೊಲೀಸರು ಒಂದೆಡೆ ಶ್ರಮಿಸುತ್ತಿದ್ದರೆ ಇನ್ನೊಂದೆಡೆ ವನ್ಯಜೀವಿ ಕಳ್ಳಸಾಗಣೆ ತಡೆಯುವಲ್ಲಿ ಅರಣ್ಯ ಇಲಾಖೆ ಬಹಳಷ್ಟು ಯಶಸ್ವಿಯಾಗಿದೆ.

ಜಗತ್ತಿನಲ್ಲಿ ಅತಿ ಹೆಚ್ಚು ಹಣ ಚಲಾವಣೆಯಾಗುವುದು ಮಾದಕ ವಸ್ತುಗಳ ಕಳ್ಳಸಾಗಣೆ ಜಾಲದಲ್ಲಿ. ಅದನ್ನು ಹೊರತುಪಡಿಸಿದರೆ, ವನ್ಯಜೀವಿಗಳ ಕಳ್ಳಸಾಗಣೆ ಪ್ರಪಂಚದಲ್ಲೇ ಎರಡನೇ ಅತಿ ಬೃಹತ್‌ ಜಾಲ. ವನ್ಯಜೀವಿಗಳ ಜೀವಂತ ಸಾಗಣೆ, ಅಂಗಾಂಗಗಳ ಕಳ್ಳಸಾಗಣೆ ಹೀಗೆ ನಾನಾ ರೀತಿಯಲ್ಲಿ ನಡೆಯುತ್ತದೆ. ಬೆಂಗಳೂರಿನಲ್ಲಿ ಮಾದಕವಸ್ತುಗಳ ಜಾಲ ಹೇಗೆ ಸಕ್ರಿಯವಾಗಿದೆಯೋ ಅದೇ ರೀತಿ ವನ್ಯಜೀವಿಗಳ ಕಳ್ಳಸಾಗಣೆ ಜಾಲವೂ ಸಕ್ರಿಯವಾಗಿತ್ತು. ಆದರೆ, ಈ ಜಾಲಕ್ಕೆ ಮರ್ಮಾಘಾತ ನೀಡುವಲ್ಲಿ ಕರ್ನಾಟಕ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣವನ್ನು ದೇವನಹಳ್ಳಿಯಲ್ಲಿ ನಿರ್ಮಾಣ ಮಾಡಿದಾಗ ಅದರ ಉದ್ದೇಶ ಖಂಡಿತವಾಗಿಯೂ ಬಹುಪಯೋಗಿಯೇ ಆಗಿತ್ತು. ಆದರೆ, ಆ ವಿಮಾನನಿಲ್ದಾಣಕ್ಕೆಂದು ದೇವನಹಳ್ಳಿ ಜಾಗವನ್ನು ಫೈನಲ್‌ ಮಾಡಿ ಅಲ್ಲಿ ಕಾರ್ಯಾರಂಭ ಆಗುತ್ತಿದ್ದಂತೆಯೇ ನಂತರ ನಡೆದದ್ದೇ ಬೇರೆ. ಈ ವಿಮಾನನಿಲ್ದಾಣ ಮೂರು ರಾಜ್ಯಗಳ ಗಡಿಗೆ ಹೊಂದಿಕೊಂಡಂತೆ ಇದೆ. ಇದು ಕರ್ನಾಟಕದಲ್ಲೇ ಇದ್ದರೂ, ಅತಿ ಸಮೀಪ ಇರುವುದು ಆಂಧ್ರಪ್ರದೇಶಕ್ಕೆ. ಅದೇ ರೀತಿ ವಿಮಾನನಿಲ್ದಾಣದಿಂದ ತಮಿಳುನಾಡು ಗಡಿ ತಲುಪಲು ಕೇವಲ ಒಂದು ಗಂಟೆ ಸಾಕು. ಈ ರೀತಿಯ ತ್ರಿರಾಜ್ಯಗಳ ಜಂಕ್ಷನ್‌ನಲ್ಲಿದ್ದ ಕಾರಣ, ವನ್ಯಜೀವಿ ಕಳ್ಳಸಾಗಣೆದಾರರಿಗೆ ಇದು ವರವಾಗಿ ಬಿಟ್ಟಿತು. ಜಗತ್ತಿನ ಯಾವುದೇ ದೇಶದಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದಿಳಿದರೂ, ಆಂಧ್ರಪ್ರದೇಶಕ್ಕಾಗಲಿ ಅಥವಾ ತಮಿಳುನಾಡಿಗಾಗಲಿ, ಹೆದ್ದಾರಿಯಲ್ಲೇ ಪ್ರಯಾಣಿಸಬೇಕಿರಲಿಲ್ಲ. ಹಳ್ಳಿಗಳನ್ನು ಹಾದು ಹೋಗುವ ರಸ್ತೆಗಳನ್ನು ಬಳಸಿ ಶಾರ್ಟ್‌ ಕಟ್‌ ಮೂಲಕ ಬೇರೆ ರಾಜ್ಯದ ಗಡಿಯೊಳಗೆ ಸುಲಭವಾಗಿ ಹೋಗಿಬಿಡಬಹುದಿತ್ತು. ಇದನ್ನು ಲಾಭವನ್ನಾಗಿ ಮಾಡಿಕೊಂಡ ಕಳ್ಳಸಾಗಣೆದಾರರು, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣವನ್ನು ತಮ್ಮ ಕಾರ್ಯಾಚರಣೆಯ ಕೇಂದ್ರಸ್ಥಾನವನ್ನಾಗಿಸಿಕೊಂಡರು.

ಅಂತಾರಾಷ್ಟ್ರೀಯ ವಿಮಾನನಿಲ್ದಾಣಗಳಲ್ಲಿ ಕಸ್ಟಮ್ಸ್‌ ಅಧಿಕಾರಿಗಳೇ ಬಹುತೇಕ ಅಂತಾರಾಷ್ಟ್ರೀಯ ಅಕ್ರಮಗಳನ್ನು ಪತ್ತೆ ಹಚ್ಚುತ್ತಾರೆ. ಕಸ್ಟಮ್ಸ್‌ ಅಧಿಕಾರಿಗಳ ಹದ್ದಿನಕಣ್ಣಿನಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ, ಕೆಲ ಸ್ವಯಂ ಸೇವಾ ಸಂಸ್ಥೆಗಳಿಗೆ ಈ ಕಳ್ಳಸಾಗಣೆಯ ಮಾಹಿತಿ ಸಿಕ್ಕೊಡನೆ, ಅವರು ಕಸ್ಟಮ್ಸ್‌ ಅವರೊಂದಿಗೆ ಹಂಚಿಕೊಳ್ಳುತ್ತಿದ್ದರು. ಆಗ ಕಾರ್ಯಾಚರಣೆ ನಡೆಸಿ ಅವರನ್ನು ಸೆರೆ ಹಿಡಿಯಲಾಗುತ್ತಿತ್ತು. ಆದರೆ, ಇಲ್ಲಿ ಕೆಲವೊಂದು ತಾಂತ್ರಿಕ ಅಡಚಣೆಗಳಿದ್ದವು. ಕಸ್ಟಮ್ಸ್‌ ಅಧಿಕಾರಿಗಳು ವಿಮಾನನಿಲ್ದಾಣದ ಒಳಗೆ ಮಾತ್ರ ಕಾರ್ಯಾಚರಣೆ ನಡೆಸಬಹುದಾಗಿತ್ತೇ ಹೊರತು, ಅದರಾಚೆಗೆ ಕಷ್ಟವಾಗುತ್ತಿತ್ತು. ಕೆಲವೊಮ್ಮೆ ಇದೂ ಕೂಡ ಕಳ್ಳಸಾಗಣೆದಾರರಿಗೆ ಅನುಕೂಲ ಆಗಿಬಿಡುತ್ತಿತ್ತು. ಆದರೂ, ಬಿಗಿ ಕ್ರಮಗಳನ್ನು ಕೈಗೊಂಡು, ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದಾಗಲೆಲ್ಲ ನಾನಾ ದೇಶಗಳ ವನ್ಯಜೀವಿಗಳು ಸಿಕ್ಕುತ್ತಿದ್ದವು. ಅವುಗಳನ್ನು ತಂದವರು ಕೇವಲ ಹಣದಾಸೆಗೆ ಆ ಕೆಲಸವನ್ನು ಒಪ್ಪಿದ್ದವರು ಆಗಿರುತ್ತಿದ್ದರೇ ಹೊರತು, ನಿಜವಾದ ಕಿಂಗ್‌ ಪಿಂಗ್‌ ಗಳು ಸಿಕ್ಕಿಬೀಳುತ್ತಿರಲಿಲ್ಲ.

ಕಸ್ಟಮ್ಸ್‌ ಅಧಿಕಾರಿಗಳು ಹಿಡಿದ ಮೇಲೆ ಅಥವಾ ಕೇಸು ದಾಖಲಾದ ಮೇಲೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ಸಿಕ್ಕುತ್ತಿತ್ತು. ಅವರೂ ಸಹ ಕಸ್ಟಮ್ಸ್‌ ಕಾಯ್ದೆಯಡಿ ಕೇಸುಗಳನ್ನು ದಾಖಲಿಸುತ್ತಿದ್ದರೇ ಹೊರತು, ವನ್ಯಜೀವಿ ಕಾಯ್ದೆಗಳ ಅಡಿಯಲ್ಲಿ ಕೇಸು ಹಾಕುತ್ತಿರಲಿಲ್ಲ. ಇದನ್ನೆಲ್ಲ ಮನಗಂಡ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ವಿಮಾನನಿಲ್ದಾಣ ವನ್ಯಜೀವಿಗಳ ಕಳ್ಳಸಾಗಣೆಯ ಹೆಬ್ಬಾಗಿಲು ಆಗಿರುವುದನ್ನು ಪತ್ತೆ ಹಚ್ಚಿದರು. ಬ್ಯೂರೋ ಆಫ್‌ ಸಿವಿಲ್‌ ಎವಿಯೇಷನ್‌ ಸೆಕ್ಯುರಿಟಿ ಜೊತೆ ಸತತ ಸಭೆಗಳನ್ನು ನಡೆಸಿದ ನಂತರ ಕಸ್ಟಮ್ಸ್‌ ಸಿಬ್ಬಂದಿಯ ಜೊತೆಗೆ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ದರ್ಜೆಯ ನಾಲ್ವರು ಅಧಿಕಾರಿಗಳನ್ನು ದಿನದ 24 ಗಂಟೆ ಹಾಗೂ ವರ್ಷದ 365 ದಿನವೂ ನಿಯೋಜಿಸಲು ಅವಕಾಶ ಕಲ್ಪಿಸುವಂತೆ ಮನವೊಲಿಸುವಲ್ಲಿ ಯಶಸ್ವಿಯಾದರು. ಅಲ್ಲಿಂದ ಅರಣ್ಯ ಇಲಾಖೆ ವಿಮಾನನಿಲ್ದಾಣದ ಒಳಗೂ ಕಾರ್ಯಾಚರಣೆ ಶುರು ಮಾಡಿತು.

ಕಸ್ಟಮ್ಸ್‌ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ರಹಸ್ಯ ಮಾಹಿತಿ ಹಂಚಿಕೊಂಡೇ ಜಂಟಿಯಾಗಿ ಜಾಲವನ್ನು ಮಟ್ಟಹಾಕಲು ಶುರು ಮಾಡಿದರು. ಇದಾದ ನಂತರವೂ ಅನೇಕ ಪ್ರಕರಣಗಳು ಪತ್ತೆ ಆದವು. ಥಾಯ್ಲೆಂಡ್‌ ಮತ್ತು ಮಲೇಷಿಯಾದಿಂದ ಅತಿ ಹೆಚ್ಚು ಕಳ್ಳಸಾಗಣೆ ನಡೆಯುತ್ತದೆ. ಬೆಂಗಳೂರಿನಿಂದ ದಕ್ಷಿಣ ಪೂರ್ವ ಏಷ್ಯಾದ ದೇಶಗಳಿಗೆ ನೇರ ಸಂಪರ್ಕದ ವಿಮಾನಗಳ ಸಂಖ್ಯೆಯೂ ಹೆಚ್ಚಿದೆ. ಆದ್ದರಿಂದ ಇಲ್ಲಿಂದ ಬಗೆ ಬಗೆಯ ಹಾವುಗಳು, ಹಕ್ಕಿಗಳು, ಆಮೆ, ಉಡ ಹೀಗೆ ಅನೇಕ ಪ್ರಾಣಿಗಳನ್ನು ಅಕ್ರಮವಾಗಿ ಸಾಗಿಸುತ್ತಾರೆ. ವಿಮಾನನಿಲ್ದಾಣದಲ್ಲಿ ಕಳ್ಳಸಾಗಣೆದಾರರು ಸಿಕ್ಕಿಬೀಳುತ್ತಿದ್ದಂತೆಯೇ ಅವರನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗುತ್ತದೆ. ಅವರನ್ನು ವನ್ಯಜೀವಿ ಕಾಯ್ದೆಯಡಿ ಬಂಧಿಸಿ, ಕೇಸು ದಾಖಲಿಸಿ, ಕೋರ್ಟಿಗೆ ಹಾಜರುಪಡಿಸುವ ಕೆಲಸ ಅರಣ್ಯ ಇಲಾಖೆ ಮಾಡುತ್ತದೆ. ಅಷ್ಟೇ ಅಲ್ಲ, ಅವರಿಗೆ ಜಾಮೀನು ಸಿಗದಂತೆ, ಶಿಕ್ಷೆ ಆಗುವಂತೆ ಸಹ ನೋಡಿಕೊಳ್ಳಲಾಗುತ್ತಿದೆ.

ಯಾವಾಗ ಅರಣ್ಯ ಇಲಾಖೆ ಮತ್ತು ಕಸ್ಟಮ್ಸ್‌ ಇಲಾಖೆ ಜಂಟಿ ಕಾರ್ಯಾಚರಣೆ ಶುರು ಮಾಡಿದರೋ, ಕಳ್ಳಸಾಗಣೆದಾರರಿಗೆ ನಡುಕ ಶುರುವಾಯಿತು. ಅನೇಕ ಪ್ರಕರಣಗಳು ಬೆಳಕಿಗೆ ಬಂದವು. 2025ರಲ್ಲಿ ಥಾಯ್ಲೆಂಡ್‌ ಮತ್ತು ಮಲೇಷಿಯಾದಿಂದ ಕಳ್ಳಸಾಗಣೆ ಮಾಡಿದ 22 ಪ್ರಕರಣಗಳು ಪತ್ತೆಯಾದರೆ, ಭಾರತದಿಂದ ವಿದೇಶಕ್ಕೆ ವನ್ಯಜೀವಿಗಳನ್ನು ಸಾಗಿಸುವಾಗ ಸಿಕ್ಕಿಬಿದ್ದ 3 ಪ್ರಕರಣ ದಾಖಲಾಗಿವೆ. ಈ ವರ್ಷ ಅದು 6ಕ್ಕೆ ಇಳಿದಿದೆ. ಅರಣ್ಯ ಮತ್ತು ಕಸ್ಟಮ್ಸ್‌ ಇಲಾಖೆ ಜಂಟಿ ಕಾರ್ಯಾಚರಣೆಯಿಂದಾಗಿ ಇದೀಗ ಕಳ್ಳಸಾಗಣೆದಾರರು ಬೆಂಗಳೂರನ್ನು ತಮ್ಮ ಕಾರ್ಯಾಚರಣೆಯ ಪ್ಲಾನ್‌ ನಿಂದ ಕೈಬಿಡಲಾರಂಭಿಸಿದ್ದಾರೆ. ಕಳೆದ

ಒಂದು ವರ್ಷದಿಂದ ಈಗ ಕಳ್ಳಸಾಗಣೆಯ ಪ್ರಕರಣಗಳು ಬಹಳ ಕಡಿಮೆ ಆಗಿವೆ.

ನಮ್ಮ ಅರಣ್ಯಾಧಿಕಾರಿಗಳು ಕಸ್ಟಮ್ಸ್‌ ಇಲಾಖೆಯ ಅಧಿಕಾರಿಗಳ ಜೊತೆ ಶಿಫ್ಟ್‌ ಆಧಾರದಲ್ಲಿ ವಿಮಾನನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದಾರೆ. ನಾವು ಬಹುತೇಕ ಅಂತಾರಾಷ್ಟ್ರೀಯ ವಿಮಾನಗಳ ಪ್ರಯಾಣಿಕರನ್ನೇ ಟಾರ್ಗೆಟ್‌ ಮಾಡಿ ಕಣ್ಗಾವಲು ಇಟ್ಟಿರುತ್ತೇವೆ. ನಮ್ಮ ಮಾಹಿತಿ ಜಾಲವನ್ನೂ ಬಹಳ ಬಿಗಿ ಮಾಡಿದ್ದೇವೆ. ಆದ್ದರಿಂದ ಅಪರಾಧಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗುತ್ತಿದ್ದೇವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ವನ್ಯಜೀವಿಗಳ ಕಳ್ಳಸಾಗಣೆ ತಡೆಯುವ ನಮ್ಮ ಕಾರ್ಯಾಚರಣೆ ಇನ್ನಷ್ಟು ಬಿಗಿಯಾಗಿ ಮುಂದುವರೆಯಲಿದೆ.

-ಡಾ ಸಂತೋಷಕುಮಾರ್‌, ಡಿಸಿಎಫ್‌, ಬೆಂಗಳೂರು ಗ್ರಾಮಾಂತರ