2ನೇ ಆವೃತ್ತಿಯ ಮೂರು ದಿನಗಳ ವೀರಲೋಕ ಪುಸ್ತಕ ಸಂತೆಗೆ ತೆರೆ : ಎರಡು ಲಕ್ಷಕ್ಕೂ ಅಧಿಕ ಜನ ಭೇಟಿ

| Published : Nov 18 2024, 01:18 AM IST / Updated: Nov 18 2024, 06:46 AM IST

ಸಾರಾಂಶ

ಕಳೆದ ಮೂರು ದಿನಗಳಿಂದ ಜಯನಗರದ ಶಾಲಿನಿ ಮೈದಾನದಲ್ಲಿ ವೀರಲೋಕ ಪ್ರಕಾಶನದಿಂದ ನಡೆದ ನಡೆದ 2ನೇ ಆವೃತ್ತಿಯ ಮೂರು ದಿನಗಳ ಪುಸ್ತಕ ಸಂತೆಗೆ ತೆರೆಬಿದ್ದಿದ್ದು, ಒಟ್ಟಾರೆ ಎರಡು ಲಕ್ಷಕ್ಕೂ ಅಧಿಕ ಜನ ಭೇಟಿ ನೀಡಿರುವುದಾಗಿ ಸಂಘಟಕರು ತಿಳಿಸಿದ್ದಾರೆ.

 ಬೆಂಗಳೂರು : ಕಳೆದ ಮೂರು ದಿನಗಳಿಂದ ಜಯನಗರದ ಶಾಲಿನಿ ಮೈದಾನದಲ್ಲಿ ವೀರಲೋಕ ಪ್ರಕಾಶನದಿಂದ ನಡೆದ ನಡೆದ 2ನೇ ಆವೃತ್ತಿಯ ಮೂರು ದಿನಗಳ ಪುಸ್ತಕ ಸಂತೆಗೆ ತೆರೆಬಿದ್ದಿದ್ದು, ಒಟ್ಟಾರೆ ಎರಡು ಲಕ್ಷಕ್ಕೂ ಅಧಿಕ ಜನ ಭೇಟಿ ನೀಡಿರುವುದಾಗಿ ಸಂಘಟಕರು ತಿಳಿಸಿದ್ದಾರೆ.

ಕೊನೆಯ ದಿನವಾದ ಭಾನುವಾರ ಜನಸಾಗರ ಹರಿದುಬಂದಿತ್ತು. ವಾರಾಂತ್ಯದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಸಾಹಿತ್ಯಾಸಕ್ತರು ತುಂಬಿಕೊಂಡಿದ್ದರು. ಇಡೀ ದಿನ ಸಂಭ್ರಮದಿಂದ ಸಂತೆಯಲ್ಲಿ ಓಡಾಡಿ, ನೆಚ್ಚಿನ ಪುಸ್ತಕ ಖರೀದಿಸಿ, ಸಾಹಿತಿಗಳ ಹಸ್ತಾಕ್ಷರ ಪಡೆದು, ಸಮಾಲೋಚಿಸಿದರು.

ಹರಿವು ಬುಕ್ಸ್‌ ಪ್ರಕಟಿಸಿದ ಕೆ.ಬಿ.ಸೂರ್ಯಕುಮಾರ್‌ ಅವರ ‘ಮಂಗಳಿ’ ಮೈಸೂರು ನಾಗರಾಜ ಶರ್ಮ ಅವರ ‘ಸಂಚು ವಂಚನೆಗಳ ಲೋಕದಲ್ಲಿ’ ಸರ್ವಮಂಗಳ ಜಯರಾಂ ಅವರ ‘ಸಂಜೆ ಸುರಿದ ಮಳೆ’ ಹಾಗೂ ವೆಂಕಟೇಶ್ ಪಿ.ಮರಕಂದಿನ್ನಿ ಅವರ ‘ಪಡಸಾಲೆ’ ಪುಸ್ತಕಗಳು ಲೋಕಾರ್ಪಣೆಗೊಂಡವು.

ಕತೆ, ಕಾದಂಬರಿ, ಕವನಗಳ ಬರೆಯುವ ಬಗೆಗಳ ಕುರಿತು ತಮಗಿರುವ ಸಂಶಯಗಳನ್ನು ಪರಿಹರಿಸಿಕೊಂಡರು. ಪುಸ್ತಕ ಮಳಿಗೆ ಮಾತ್ರವಲ್ಲದೆ, ಆಹಾರ, ಆಟಿಕೆ, ಕರಕುಶಲ ಅಲಂಕಾರಿಕ ಮಳಿಗೆಗಳಲ್ಲಿಯೂ ಜನ ತುಂಬಿಕೊಂಡಿದ್ದರು.

ಪುಸ್ತಕ ಸಂತೆಯ ವಿಶೇಷವಾಗಿ ಓಲೆ (ಓದುಗ ಲೇಖಕ) ವಿಭಾಗದ ಕಾರ್ಯಕ್ರಮದಲ್ಲಿ ಮಲ್ಲೇಪುರಂ ಜಿ.ವೆಂಕಟೇಶ್‌, ಮೂಡ್ನಾಕೋಡು ಚಿನ್ನಸ್ವಾಮಿ, ನಾಗರಾಜ ವಸ್ತಾರೆ, ವಿಕ್ರಮ್‌ ಹತ್ವಾರ್, ಎಂ.ಎಸ್‌.ಶರತ್‌ ಹಲವರು ಪಾಲ್ಗೊಂಡಿದ್ದರು. ಓದುಗ ವರ್ಗದ ಜೊತೆಗೆ ಬೆರೆತು ಅವರ ಪ್ರಶ್ನೆಗಳಿಗೆ ಉತ್ತರಿಸಿದರು. ಮಧ್ಯಾಹ್ನದ ನಂತರ ನಡೆದ ಕವಿತೆ ಹುಟ್ಟುವ ಸಮಯ ಕಾರ್ಯಾಗಾರದಲ್ಲಿ ಯುವ ಕವಿಗಳು ಪಾಲ್ಗೊಂಡಿದ್ದರು.

ಬಿಡುಗಡೆ ಆದ ಕೃತಿಗಳಿವು: ಸಂಜೆ ಕಾರ್ಯಕ್ರಮದಲ್ಲಿ ಪಿ.ಚಂದ್ರಿಕಾ ಅವರ ‘ಪ್ಲಾಲೆಟ್‌’, ಮಂಜುನಾಥ ಚಾಂದ್‌ ಅವರ ‘ಪ್ರಿಯ ಮೀರಾ’, ಡಿ.ವಿ.ಗುರುಪ್ರಸಾದ್‌ ಅವರ ‘ಸಮರಖಂಡ’, ಡಿ.ಎಸ್‌.ಚೌಗಲೆ ಅವರ ‘ಸದರ ಬಜಾರ್‌’ ರಾಮ್‌ ಕದಮ್‌ ಅವರ ‘ಮನೆ ಎಂಜಿನಿಯರ್‌’, ಶ್ರೀದೇವಿ ಕಳಸದ ಅವರ ‘ಹಮ್ಮ ಹೂ, ಅನು ಬೆಳ್ಳೆ ಅವರ ‘ನಗು ಎಂದಿದೆ ಮಂಜಿನ ಬಿಂದು‘ ಕೃತಿ ಬಿಡುಗಡೆಯಾದವು.

ಇನ್ನು, ವೀರಲೋಕದಿಂದ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಲೆಂದೇ ವಿಶೇಷ ಬಾಕ್ಸನ್ನು ಬಿಡುಗಡೆ ಮಾಡಲಾಯಿತು. ಆಪ್ತರಿಗೆ ಆರೇಳು ಪುಸ್ತಕಗಳನ್ನು ಕೊಡಬಹುದಾಗಿದ್ದು, ಕೊರಿಯರ್‌ ಮೂಲಕವೂ ಉಡುಗೊರೆಯಾಗಿ ಕಳಿಸಿಕೊಡುವ ಸೌಲಭ್ಯವನ್ನು ಕಲ್ಪಿಸುವ ಬಗ್ಗೆ ಆಯೋಜಕರು ತಿಳಿಸಿದರು.