ಅಮೆಜಾನ್‌ನ ತಾಂತ್ರಿಕ ವಿಭಾಗದಲ್ಲಿ ಭಾರತೀಯ ನಾರಿಯರು ಮಿಂಚುತ್ತಿದ್ದಾರೆ. ಈ ಕುರಿತ ವರದಿ ಇಲ್ಲಿದೆ.

ಕನ್ನಡಪ್ರಭವಾರ್ತೆ ಬೆಂಗಳೂರು: ಜಾಗತಿಕ ಇ-ಕಾಮರ್ಸ್ ದೈತ್ಯ ಅಮೆಜಾನ್ ಸಂಸ್ಥೆಯು ಪ್ರತಿದಿನ ಲಕ್ಷಾಂತರ ಗ್ರಾಹಕರಿಗೆ ಒದಗಿಸುವ ವೈಯಕ್ತೀಕರಿಸಿದ ಶಿಫಾರಸುಗಳು ಹಾಗೂ ಪೂರೈಕೆ ಸರಪಳಿಯ ಮುನ್ಸೂಚನೆಗಳ ಹಿಂದೆ ಪ್ರಬಲ ಭಾರತೀಯ ಮಹಿಳಾ ನಾಯಕತ್ವದ ಶ್ರಮವಿದೆ. ಭಾರತವು ಇಂದು ಜಾಗತಿಕ ಆವಿಷ್ಕಾರ ಕೇಂದ್ರವಾಗಿ ಹೊರಹೊಮ್ಮಿದ್ದು, ಇಲ್ಲಿನ ಮಹಿಳಾ ನಾಯಕಿಯರು ಅತ್ಯಾಧುನಿಕ ''ಜನರೇಟಿವ್ ಎಐ'' ತಂತ್ರಜ್ಞಾನವನ್ನು ಗ್ರಾಹಕ ಸ್ನೇಹಿ ಅನುಭವಗಳನ್ನಾಗಿ ಪರಿವರ್ತಿಸುತ್ತಿದ್ದಾರೆ.ಅಮೆಜಾನ್ ಇಂಡಿಯಾದ ತಾಂತ್ರಿಕ ವೇದಿಕೆಗಳ ಹಿಂದೆ ಮೂವರು ಪ್ರಮುಖ ನಾಯಕಿಯರಿದ್ದಾರೆ. ಸಾಫ್ಟ್‌ವೇರ್ ಡೆವಲಪ್‌ಮೆಂಟ್ ನಿರ್ದೇಶಕಿ ಗೀತಾಂಜಲಿ ಭೂತಾನಿ ಅವರು ಜೆನ್ ಎಐ ಬಳಸಿ ವಹಿವಾಟುಗಳ ಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಿಸಿದ ಬೃಹತ್ ಸಿಸ್ಟಮ್‌ಗಳ ನೇತೃತ್ವ ವಹಿಸಿದ್ದಾರೆ. ‘ಉತ್ತಮ ತಂಡವನ್ನು ಕಟ್ಟಿದರೆ ಹೊಸ ಆವಿಷ್ಕಾರಗಳಿಗೆ ಯಾವತ್ತೂ ಕೊರತೆಯಿರುವುದಿಲ್ಲ’ ಎನ್ನುವುದು ಇವರ ಅಭಿಪ್ರಾಯ.ಮತ್ತೊಬ್ಬ ನಿರ್ದೇಶಕಿ ಪಾಯಲ್ ಗುಪ್ತಾ ಅವರು ವಿಶ್ವದಾದ್ಯಂತ ಶಾಪಿಂಗ್ ಅನುಭವಕ್ಕೆ ಶಕ್ತಿ ತುಂಬುವ ಎಂಜಿನಿಯರಿಂಗ್ ತಂಡಗಳನ್ನು ಮುನ್ನಡೆಸುತ್ತಿದ್ದಾರೆ. ಲಕ್ಷಾಂತರ ಗ್ರಾಹಕರು ಯಾವುದೇ ಅಡೆತಡೆಯಿಲ್ಲದೆ ಉತ್ಪನ್ನಗಳನ್ನು ಖರೀದಿಸಲು ಇವರ ತಂಡ ರೂಪಿಸಿದ ಮೂಲಸೌಕರ್ಯವೇ ಕಾರಣ. ಹಾಗೆಯೇ, ಶ್ವೇತಾ ಶಂಕರ್ ಅವರು ರಿಟೇಲ್ ತಂತ್ರಜ್ಞಾನ ತಂಡದ ನೇತೃತ್ವ ವಹಿಸಿದ್ದು, ನೈಜ ಸಮಯದ ದತ್ತಾಂಶ ಸಂಸ್ಕರಣೆಗಾಗಿ ದೃಢವಾದ ಎಐ-ಚಾಲಿತ ವ್ಯವಸ್ಥೆಯನ್ನು ರೂಪಿಸಿದ್ದಾರೆ. ‘ಗ್ರಾಹಕರ ಅಗತ್ಯತೆ ಮತ್ತು ತಂತ್ರಜ್ಞಾನದ ಆಳವಾದ ತಿಳುವಳಿಕೆ ಇಲ್ಲಿ ಮುಖ್ಯ’ ಎಂದು ಶ್ವೇತಾ ಹೇಳುತ್ತಾರೆ.ಅಮೆಜಾನ್ ಕೇವಲ ಆವಿಷ್ಕಾರಕ್ಕಷ್ಟೇ ಸೀಮಿತವಾಗದೆ, ಮಹಿಳಾ ಪ್ರತಿಭೆಗಳನ್ನು ಬೆಳೆಸಲು ಹತ್ತಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಅಮೆಜಾನ್ ಫ್ಯೂಚರ್ ಇಂಜಿನಿಯರ್ ಮೂಲಕ ಆರ್ಥಿಕವಾಗಿ ಹಿಂದುಳಿದ ಹೆಣ್ಣುಮಕ್ಕಳಿಗೆ ಕಂಪ್ಯೂಟರ್ ಸೈನ್ಸ್ ಶಿಕ್ಷಣ ನೀಡಲಾಗುತ್ತಿದೆ. ಅಮೆಜಾನ್ ವೋವ್ (WoW) ಮತ್ತು ಅಮೇಜ್ ವಿಟ್ (AmazeWIT) ಯೋಜನೆಗಳು ತಂತ್ರಜ್ಞಾನ ಕ್ಷೇತ್ರಕ್ಕೆ ಪ್ರವೇಶಿಸುವ ಮಹಿಳೆಯರಿಗೆ ಮಾರ್ಗದರ್ಶನ ನೀಡುತ್ತಿವೆ.ಇನ್ನು ನಾಯಕತ್ವದ ಹಂತದಲ್ಲಿರುವವರಿಗಾಗಿ ವುಮೆನ್ ಇನ್ ಲೀಡರ್‌ಶಿಪ್ ಮತ್ತು ಹಾರ್ವರ್ಡ್ ಸಹಯೋಗದ ಕ್ಯಾಟಪಲ್ಟ್ ಯೋಜನೆಗಳು ಕಾರ್ಯತಂತ್ರದ ಸಾಮರ್ಥ್ಯ ವೃದ್ಧಿಸುತ್ತಿವೆ. ಕೆಲಸದ ಸ್ಥಳದ ಆಚೆಗೂ ಅಮೆಜಾನ್ ಸಹೇಲಿ ಮೂಲಕ ಮಹಿಳಾ ಉದ್ಯಮಿಗಳಿಗೆ ಮಾರುಕಟ್ಟೆ ಮತ್ತು ಲಾಜಿಸ್ಟಿಕ್ಸ್ ನೆರವು ನೀಡಲಾಗುತ್ತಿದೆ. ಒಟ್ಟಾರೆಯಾಗಿ, ಈ ನಾಯಕಿಯರು ಮತ್ತು ಅಮೆಜಾನ್‌ನ ಯೋಜನೆಗಳು ತಂತ್ರಜ್ಞಾನದ ಭವಿಷ್ಯವನ್ನು ಮಹಿಳೆಯರು ಹೇಗೆ ರೂಪಿಸಬಹುದು ಎಂಬುದಕ್ಕೆ ಮಾದರಿಯಾಗಿವೆ.