ವೃತ್ತಿಜೀವನದ ಆರಂಭಿಕ ಹಂತದಲ್ಲಿರುವ ಯುವಜನತೆ ಕೆಲಸ ಪಡೆಯುವ ತರಾತುರಿಯಲ್ಲಿ ಇಂದಿಗೂ ವಂಚಕರ ಸುಲಭದ ತುತ್ತಾಗುತ್ತಿದ್ದಾರೆ ಎಂದು ಲಿಂಕ್ಡ್‌ ಇನ್‌ನ ಇತ್ತೀಚಿನ ವರದಿ ತಿಳಿಸಿದೆ.

ಕನ್ನಡಪ್ರಭವಾರ್ತೆ ಬೆಂಗಳೂರು: ಭಾರತೀಯ ವೃತ್ತಿಪರರು ಉದ್ಯೋಗ ವಂಚನೆಗಳ ಬಗ್ಗೆ ಹಿಂದೆಂದಿಗಿಂತಲೂ ಹೆಚ್ಚು ಜಾಗರೂಕರಾಗುತ್ತಿದ್ದಾರೆ. ಆದರೆ, ವೃತ್ತಿಜೀವನದ ಆರಂಭಿಕ ಹಂತದಲ್ಲಿರುವ ಯುವಜನತೆ ಕೆಲಸ ಪಡೆಯುವ ತರಾತುರಿಯಲ್ಲಿ ಇಂದಿಗೂ ವಂಚಕರ ಸುಲಭದ ತುತ್ತಾಗುತ್ತಿದ್ದಾರೆ ಎಂದು ಲಿಂಕ್ಡ್‌ ಇನ್‌ನ ಇತ್ತೀಚಿನ ಜಾಬ್ ಸರ್ಚ್ ಸೇಫ್ಟಿ ಪಲ್ಸ್ ವರದಿ ತಿಳಿಸಿದೆ.ವರದಿಯ ಮುಖ್ಯಾಂಶಗಳು:

- ಶೇ. 82ರಷ್ಟು ಭಾರತೀಯ ವೃತ್ತಿಪರರು ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಮುನ್ನ ಅದರ ವಿಶ್ವಾಸಾರ್ಹತೆಯನ್ನು ಪರೀಕ್ಷಿಸುತ್ತಿದ್ದಾರೆ.

- ಶೇ. 53ರಷ್ಟು ಜನ ಕಳೆದ ವರ್ಷಕ್ಕೆ ಹೋಲಿಸಿದರೆ ಈಗ ಉದ್ಯೋಗದ ಆಫರ್‌ಗಳನ್ನು ಹೆಚ್ಚು ಸಂಶಯದಿಂದ ನೋಡುತ್ತಿದ್ದಾರೆ.

- ಆದರೆ, ಶೇ. 49ರಷ್ಟು ಜೆನ್ ಜೀ ಯುವಕರು ತಾವು ವಂಚನೆಗೆ ಬಲಿಯಾಗುವ ಹಂತಕ್ಕೆ ತಲುಪಿದ್ದಾಗಿ ಒಪ್ಪಿಕೊಂಡಿದ್ದಾರೆ.

ಒತ್ತಡವೇ ವಂಚಕರಿಗೆ ಬಂಡವಾಳ

ಯುವ ಉದ್ಯೋಗಾಕಾಂಕ್ಷಿಗಳು ಆಕರ್ಷಕ ಅವಕಾಶಗಳನ್ನು ಕಳೆದುಕೊಳ್ಳಬಾರದು ಎಂಬ ಆತಂಕದಲ್ಲಿ ಎಚ್ಚರಿಕೆ ಸಂಕೇತಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಶೇ. 54ರಷ್ಟು ಯುವಜನರು ಸ್ಪರ್ಧೆಯ ಒತ್ತಡದಿಂದಾಗಿ ಜಾಗರೂಕತೆ ಮರೆಯುತ್ತಿರುವುದು ವರದಿಯಲ್ಲಿ ದೃಢಪಟ್ಟಿದೆ. ವಿಶೇಷವಾಗಿ ಉದ್ಯೋಗ ಹುಡುಕುವ ಆರಂಭಿಕ ಹಂತದಲ್ಲಿ ಅಥವಾ ನೇಮಕಾತಿದಾರರು ಮೊದಲ ಬಾರಿ ಸಂಪರ್ಕಿಸಿದಾಗ ವಂಚನೆಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ.ವಂಚಕರು ಶೇ. 90ರಷ್ಟು ಸಂದರ್ಭಗಳಲ್ಲಿ ಅಭ್ಯರ್ಥಿಗಳನ್ನು ಲಿಂಕ್ಡ್‌ ಇನ್‌ನಂತಹ ಅಧಿಕೃತ ವೇದಿಕೆಗಳಿಂದ ವೈಯಕ್ತಿಕ ಮೆಸೇಜಿಂಗ್ ಆ್ಯಪ್‌ಗಳಿಗೆ ವರ್ಗಾಯಿಸಲು ಪ್ರಯತ್ನಿಸುತ್ತಾರೆ. ಅಲ್ಲಿ ಸಂಭಾಷಣೆಗಳು ಅನೌಪಚಾರಿಕವಾಗಿರುವುದರಿಂದ ವಂಚನೆ ಸುಲಭವಾಗುತ್ತದೆ.

ಸುರಕ್ಷತೆಗಾಗಿ ಲಿಂಕ್ಡ್‌ ಇನ್ ಕ್ರಮಗಳು:

ಲಿಂಕ್ಡ್‌ ಇನ್ ಇಂಡಿಯಾದ ಲೀಗಲ್ ಮತ್ತು ಪಬ್ಲಿಕ್ ಪಾಲಿಸಿ ಹೆಡ್ ಅದಿತಿ ಝಾ ಮಾತನಾಡಿ, ‘ವೃತ್ತಿಪರರಲ್ಲಿ ಜಾಗೃತಿ ಮೂಡುತ್ತಿದ್ದರೂ, ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಅದನ್ನು ಕಾರ್ಯರೂಪಕ್ಕೆ ತರುವುದು ಸವಾಲಾಗಿದೆ. ನಕಲಿ ಖಾತೆಗಳ ಪತ್ತೆ, ಐಡಿ ಪರಿಶೀಲನೆ ಕಡ್ಡಾಯ ಮತ್ತು ಸ್ಪ್ಯಾಮ್ ಫಿಲ್ಟರಿಂಗ್ ಮೂಲಕ ನಾವು ಸುರಕ್ಷಿತ ಪರಿಸರ ನಿರ್ಮಿಸಲು ಶ್ರಮಿಸುತ್ತಿದ್ದೇವೆ’ ಎಂದಿದ್ದಾರೆ.ಉದ್ಯೋಗಾಕಾಂಕ್ಷಿಗಳಿಗೆ ಸಲಹೆಗಳು- ವಿವರಗಳು ಅಸ್ಪಷ್ಟವಾಗಿದ್ದರೆ ಅಥವಾ ನೇಮಕಾತಿಗೆ ಅತಿಯಾದ ಅವಸರ ತೋರುತ್ತಿದ್ದರೆ ಎಚ್ಚರವಹಿಸಿ.

- ಕಂಪನಿ ಪೇಜ್ ಮತ್ತು ನೇಮಕಾತಿದಾರರ ವೆರಿಫಿಕೇಶನ್ ಬ್ಯಾಡ್ಜ್ ಪರೀಕ್ಷಿಸಿ.

- ಸಂಭಾಷಣೆಯನ್ನು ಬೇರೆ ಆ್ಯಪ್‌ಗಳಿಗೆ ಸ್ಥಳಾಂತರಿಸಲು ಕೋರಿದರೆ ಸಂಶಯಿಸಿ.

- ಅನುಮಾನಾಸ್ಪದ ಪೋಸ್ಟ್‌ಗಳನ್ನು ತಕ್ಷಣ ವರದಿ ಮಾಡಿ.