ಸಾರಾಂಶ
ಬೆಂಗಳೂರು: ಬ್ಯಾಟರ್‌ಗಳ ಸ್ವರ್ಗ ಎಂದೇ ಕರೆಸಿಕೊಳ್ಳುವ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಮತ್ತೊಮ್ಮೆ ರನ್ ಮಳೆ, ಭಾರೀ ಹೈಡ್ರಾಮ ಹಾಗೂ ರಣರೋಚಕ ಪೈಪೋಟಿಗೆ ಸಾಕ್ಷಿಯಾಯಿತು.
ಭರ್ಜರಿ ಸಿಕ್ಸರ್, ಬೌಂಡರಿ ಮೂಲಕ ಅಭಿಮಾನಿಗಳಿಗೆ ಭರಪೂರ ರಸದೌತಣ ಉಣಬಡಿಸಿದ ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ 3ನೇ ಟಿ20 ಪಂದ್ಯ ‘ಡಬಲ್ ಸೂಪರ್ ಓವರ್’ ಮೂಲಕ ಅತಿ ರೋಚಕ ಫಲಿತಾಂಶಕ್ಕೆ ಸಾಕ್ಷಿಯಾಯಿತು.
2ನೇ ಸೂಪರ್ ಓವರ್‌ನಲ್ಲಿ 10 ರನ್ ಗೆಲುವು ಸಾಧಿಸಿದ ಭಾರತ 3 ಪಂದ್ಯಗಳ ಸರಣಿಯನ್ನು 3-0 ಅಂತರದಲ್ಲಿ ಕೈವಶಪಡಿಸಿಕೊಂಡಿತು.ಮೊದಲು ಬ್ಯಾಟ್ ಮಾಡಿದ ನಾಟಕೀಯ ಕುಸಿತದ ಬಳಿಕ ರೋಹಿತ್ ಶರ್ಮಾ-ರಿಂಕು ಸಿಂಗ್ ಸಾಹಸದಿಂದಾಗಿ 4 ವಿಕೆಟ್‌ಗೆ ಬರೋಬ್ಬರಿ 212 ರನ್ ಕಲೆಹಾಕಿತು.
ಬೃಹತ್ ಮೊತ್ತ ಬೆನ್ನತ್ತಿದ ಅಫ್ಘಾನಿಸ್ತಾನ ಉತ್ತಮ ಹೋರಾಟ ನೀಡಿ ಇನ್ನಿಂಗ್ಸ್ ಅಂತ್ಯಕ್ಕೆ 6 ವಿಕೆಟ್‌ಗಳ ನಷ್ಟಕ್ಕೆ 212 ರನ್‌ಗಳಿಸುವ ಮೂಲಕ ಸ್ಕೋರ್ ಸಮಬಲಗೊಂಡಿತು.ಹೀಗಾಗಿ ಸೂಪರ್ ಓವರ್ ಆಡಿಸಲಾಯಿತು.
ಅಫ್ಘಾನಿಸ್ತಾನ 1 ವಿಕೆಟ್‌ಗೆ 16 ರನ್ ಗಳಿಸಿದರೆ, ಗುರಿ ಬೆನ್ನತ್ತಿದ ಭಾರತ ಕೂಡಾ 16 ರನ್ ಗಳಿಸಿದ್ದರಿಂದ ಮತ್ತೆ ಟೈ ಆಯಿತು. ಈಗ 2ನೇ ಸೂಪರ್ ಓವರ್ ಸರದಿ. ಭಾರತ 11 ರನ್ ಸಿಡಿಸಿದರೆ, ಗುರಿ ಬೆನ್ನತ್ತಿದ ಆಫ್ಘನ್ 1 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಉತ್ತಮ ಆರಂಭ: ಅಫ್ಘಾನಿಸ್ತಾನ ಮೊದಲ ವಿಕೆಟ್‌ಗೆ 93 ರನ್ ಗಳಿಸುವ ಮೂಲಕ ಉತ್ತಮ ಆರಂಭ ಪಡೆದುಕೊಂಡರೂ ಸಹ ಬಳಿಕ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುವ ಮೂಲಕ ಸೋಲಿನ ದವಡೆಗೆ ಸಿಲುಕಿತು.
ಅಫ್ಘಾನಿಸ್ತಾನ ಪರ ಆರಂಭಿಕರಾದ ಗುರ್ಬಾಜ್(50), ಇಬ್ರಾಹಿಂ ಜದ್ರಾನ್(50) ಅಬ್ಬರಿಸಿದರೆ, ಕೊನೆಯಲ್ಲಿ ಗುಲ್ಬದೀನ್ ನೈಬ್ 23 ಎಸೆತಗಳಲ್ಲಿ 55 ರನ್ ಸಿಡಿಸಿ ಪಂದ್ಯವನ್ನು ಸಾಹಸಿಕವಾಗಿ ಟೈ ಮಾಡಿಕೊಂಡರು.
ನಾಯಕನ ಆಸರೆ: ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ನಾಯಕ ರೋಹಿತ್ ಶರ್ಮಾ ಅಮೋಘ ಶತಕ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು.
ಭಾರತ 22 ರನ್‌ಗಳಿಗೆ 4 ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಸಮಯದಲ್ಲಿ ಜವಾಬ್ದಾರಿಯುತ ಆಟವಾಡಿದ ನಾಯಕ ರೋಹಿತ್ (69 ಎಸೆತಗಳಲ್ಲಿ 11 ಬೌಂಡರಿ, 8 ಸಿಕ್ಸರ್‌ನೊಂದಿಗೆ 121) ಹಾಗೂ ರಿಂಕು ಸಿಂಗ್(69) 5ನೇ ವಿಕೆಟ್‌ಗೆ 95 ಎಸೆತಗಳಲ್ಲಿ 190 ರನ್ ಜೊತೆಯಾಟವಾಡಿ ತಂಡ ಉತ್ತಮ ಮೊತ್ತ ಗಳಿಸಲು ನೆರವಾದರು.
ಇವರಿಬ್ಬರ ಅದ್ಭುತ ಆಟದಿಂದಾಗಿ 10 ಓವರ್‌ಗಳ ಅಂತ್ಯಕ್ಕೆ 61 ಗಳಿಸಿದ್ದ ತಂಡ ಮೊತ್ತ ಇನ್ನಿಂಗ್ಸ್‌ನ ಅಂತ್ಯಕ್ಕೆ 212ಕ್ಕೇರಿತು.
ಸ್ಕೋರ್: ಭಾರತ 20 ಓವರಲ್ಲಿ 212/4(ರೋಹಿತ್ 121*, ರಿಂಕು 69*, ಫರೀದ್ 3-20), ಅಫ್ಘಾನಿಸ್ತಾನ 20 ಓವರಲ್ಲಿ 212/6(ಗುಲ್ಬದಿನ್ 55*, ಗುರ್ಬಾಜ್ 50, ಜದ್ರಾನ್ 50, ವಾಷಿಂಗ್ಟನ್ 3-18)
ಟೀಂ ಇಂಡಿಯಾ ಪರ ಗರಿಷ್ಠ ಜೊತೆಯಾಟ: ರೋಹಿತ್ ಮತ್ತು ರಿಂಕು 95 ಬಾಲ್‌ಗಳಲ್ಲಿ ಗಳಿಸಿದ 190 ರನ್ ಭಾರತದ ಪರ ಯಾವುದೇ ವಿಕೆಟ್‌ಗೆ ಅತ್ಯಧಿಕ ಜೊತೆಯಾಟ ಎನಿಸಿಕೊಂಡಿತು. ಅಲ್ಲದೇ 5ನೇ ವಿಕೆಟ್‌ಗೆ ಒಟ್ಟಾರೆ ಅತ್ಯಧಿಕ ರನ್ ಜೊತೆಯಾಟ ಎನಿಸಿಕೊಂಡಿತು.
42ನೇ ಜಯ: ರೋಹಿತ್ ನಾಯಕತ್ವದಲ್ಲಿ ಭಾರತ ಪಂದ್ಯಗಳಲ್ಲಿ 42ನೇ ಜಯ ಸಾಧಿಸಿತು, ಧೋನಿ ನಾಯಕತ್ವದಲ್ಲಿ 72 ಪಂದ್ಯಗಳಲ್ಲಿ 41ರಲ್ಲಿ ಜಯಸಿತ್ತು. ಆ ದಾಖಲೆಯನ್ನು ರೋಹಿತ್ ಮುರಿದರು.
6ನೇ ಬಾರಿ ತವರಲ್ಲಿಭಾರತ ಕ್ಲೀನ್‌ಸ್ವೀಪ್: ಭಾರತ ತವರಿನಲ್ಲಿ 6ನೇ ಬಾರಿ ಟಿ20 ಸರಣಿ ಕ್ಲೀನ್‌ಸ್ವೀಪ್ ಮಾಡಿಕೊಂಡಿದೆ. ಈ ಮೊದಲು 2017ರಲ್ಲಿ ಶ್ರೀಲಂಕಾ, 2018ರಲ್ಲಿ ವೆಸ್ಟ್‌ಇಂಡೀಸ್, 2021ರಲ್ಲಿ ನ್ಯೂಜಿಲೆಂಡ್, 2022ರಲ್ಲಿ ವೆಸ್ಟ್‌ಇಂಡೀಸ್, ಶ್ರೀಲಂಕಾ ವಿರುದ್ಧದ ಸರಣಿಗಳನ್ನು ಭಾರತ 3-0 ಅಂತರದಲ್ಲಿ ಕ್ಲೀನ್‌ಸ್ವೀಪ್ ಮಾಡಿಕೊಂಡಿತ್ತು.
ರೋಹಿತ್ 5ನೇ ಟಿ20ಶತಕ ಹೊಸ ದಾಖಲೆ: ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20ಯಲ್ಲಿ 5ನೇ ಶತಕ ಪೂರ್ತಿಗೊಳಿಸಿದರು. ಇದು ಅಂ.ರಾ. ಟಿ20ಯಲ್ಲಿ ಗರಿಷ್ಠ. ಸೂರ್ಯಕುಮಾರ್ ಯಾದವ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ತಲಾ ಶತಕ ಬಾರಿಸಿದ್ದಾರೆ.
03ನೇ ಬಾರಿ: ಅಂ.ರಾ. ಟಿ20 ಪಂದ್ಯದಲ್ಲಿ ಓವರೊಂದರಲ್ಲಿ 36 ರನ್ ದಾಖಲಾಗಿದ್ದು ಇದು 3ನೇ ಬಾರಿ. 2017ರಲ್ಲಿ ಯುವರಾಜ್, 2021ರಲ್ಲಿ ಪೊಲ್ಲಾರ್ಡ್ ಕೂಡಾ ಓವರಲ್ಲಿ 36 ರನ್ ಚಚ್ಚಿದ್ದರು.