ಇಂದಿನಿಂದ ಭಾರತ vs ದ.ಆಫ್ರಿಕಾ ಟಿ20 ಕದನ: ವಿಶ್ವಕಪ್‌ ಫೈನಲ್‌ ಬಳಿಕ ಮತ್ತೊಂದು ಹೈವೋಲ್ಟೇಜ್‌ ಫೈಟ್‌

| Published : Nov 08 2024, 12:32 AM IST / Updated: Nov 08 2024, 04:22 AM IST

ಇಂದಿನಿಂದ ಭಾರತ vs ದ.ಆಫ್ರಿಕಾ ಟಿ20 ಕದನ: ವಿಶ್ವಕಪ್‌ ಫೈನಲ್‌ ಬಳಿಕ ಮತ್ತೊಂದು ಹೈವೋಲ್ಟೇಜ್‌ ಫೈಟ್‌
Share this Article
  • FB
  • TW
  • Linkdin
  • Email

ಸಾರಾಂಶ

2026ರ ಟಿ20 ವಿಶ್ವಕಪ್‌ಗೆ ಬಲಿಷ್ಠ ತಂಡ ಕಟ್ಟುವ ದೃಷ್ಟಿಯಿಂದ ಮಹತ್ವ ಪಡೆದಿರುವ 4 ಪಂದ್ಯಗಳ ಸರಣಿ. ಡರ್ಬನ್‌ನಲ್ಲಿ ಮೊದಲ ಪಂದ್ಯ. ಅವಕಾಶ ನಿರೀಕ್ಷೆಯಲ್ಲಿ ಕರ್ನಾಟಕ ವೇಗಿ ವೈಶಾಖ್‌

ಡರ್ಬನ್‌: 2026ರ ಟಿ20 ವಿಶ್ವಕಪ್‌ಗೆ ಬಲಿಷ್ಠ ತಂಡ ಕಟ್ಟುವ ದೃಷ್ಟಿಯಿಂದ ಮಹತ್ವ ಪಡೆದಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ನಾಲ್ಕು ಪಂದ್ಯಗಳ ಟಿ20 ಸರಣಿಗೆ ಶುಕ್ರವಾರ ಚಾಲನೆ ಸಿಗಲಿದೆ. 4 ಪಂದ್ಯಗಳ ಸರಣಿಯ ಮೊದಲ ಪಂದ್ಯಕ್ಕೆ ಡರ್ಬನ್‌ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಟಿ20 ವಿಶ್ವಕಪ್‌ ಫೈನಲ್‌ ಬಳಿಕ ಉಭಯ ತಂಡಗಳು ಮೊದಲ ಬಾರಿ ಟಿ20ಯಲ್ಲಿ ಮುಖಾಮುಖಿಯಾಗುತ್ತಿದ್ದು, ಕುತೂಹಲ ಹೆಚ್ಚಿಸಿದೆ.

ಸೂರ್ಯಕುಮಾರ್‌ ಯಾದವ್‌ ನಾಯಕತ್ವದಲ್ಲಿ ಕಣಕ್ಕಿಳಿಯಲಿರುವ ತಂಡದಲ್ಲಿ ತಜ್ಞ ಟಿ20 ಆಟಗಾರರೇ ಇದ್ದಾರೆ. ಹೀಗಾಗಿ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಮತ್ತು ಸಿಕ್ಕ ಸ್ಥಾನ ಗಟ್ಟಿಗೊಳಿಸಲು ಪೈಪೋಟಿ ಹೆಚ್ಚಿದೆ. ಟಿ20ಯ ಹೊಸ ಆರಂಭಿಕ ಜೋಡಿಯಾಗಿರುವ ಅಭಿಷೇಕ್‌ ಶರ್ಮಾ ಹಾಗೂ ಸಂಜು ಸ್ಯಾಮ್ಸನ್‌ ಎಷ್ಟರ ಮಟ್ಟಿಗೆ ಯಶಸ್ಸು ಸಾಧಿಸಲಿದ್ದಾರೆ ಎಂಬ ಕುತೂಹಲವಿದೆ. ಅಭಿಷೇಕ್‌ ಜುಲೈನಲ್ಲಿ ಜಿಂಬಾಬ್ವೆ ವಿರುದ್ಧ 47 ಎಸೆತಕ್ಕೆ ಶತಕ ಬಾರಿಸಿದ್ದರು. ಆದರೆ ಬಳಿಕ 6 ಇನ್ನಿಂಗ್ಸ್‌ಗಳಲ್ಲಿ 59 ರನ್‌ ಮಾತ್ರ ಗಳಿಸಿದ್ದಾರೆ. 

ಮತ್ತೊಂದೆಡೆ ಸಂಜು ಸ್ಥಿರ ಆಟವಾಡಲು ಕಾಯುತ್ತಿದ್ದಾರೆ.ನಾಯಕ ಸೂರ್ಯಕುಮಾರ್‌, ಹಾರ್ದಿಕ್‌ ಪಾಂಡ್ಯ ಮೇಲೆ ಹೆಚ್ಚಿನ ನಿರೀಕ್ಷೆ ಇದ್ದು, ಅಕ್ಷರ್‌ ಪಟೇಲ್‌ ಕೂಡಾ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಬಹುದು.

ವೈಶಾಖ್‌ಗೆ ಸಿಗುತ್ತಾ ಚಾನ್ಸ್‌: ಕರ್ನಾಟಕದ ಯುವ ವೇಗಿ ವೈಶಾಖ್‌ ವಿಜಯ್‌ಕುಮಾರ್‌ ಕೂಡಾ ಸರಣಿಗೆ ಆಯ್ಕೆಯಾಗಿದ್ದು, ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ತಂಡದಲ್ಲಿರುವ 15 ಆಟಗಾರರ ಪೈಕಿ ವೈಶಾಖ್‌ ಜೊತೆಗೆ ಅರ್ಶ್‌ದೀಪ್‌ ಸಿಂಗ್‌, ಆವೇಶ್‌ ಖಾನ್‌ ಹಾಗೂ ಜಿತೇಶ್‌ ಶರ್ಮಾ ರಿಟೈನ್‌ ಆಗಿಲ್ಲ. ಹೀಗಾಗಿ ಐಪಿಎಲ್‌ ಹರಾಜಿಗೂ ಮುನ್ನ ತಮ್ಮ ಸಾಮರ್ಥ್ಯ ಮತ್ತೊಮ್ಮೆ ಸಾಬೀತು ಪಡಿಸುವ ಕಾತರದಲ್ಲಿದ್ದಾರೆ.ಸೇಡಿನ ಕದನ: ಮತ್ತೊಂದೆಡೆ ದ.ಆಫ್ರಿಕಾ ತಂಡ ಏಡನ್‌ ಮಾರ್ಕ್‌ರಮ್‌ ನಾಯಕತ್ವದಲ್ಲಿ ಕಣಕ್ಕಿಳಿಯಲಿದ್ದು, ಟಿ20 ವಿಶ್ವಕಪ್‌ ಫೈನಲ್‌ ಸೋಲಿಗೆ ಸೇಡು ತೀರಿಸಿಕೊಳ್ಳುವ ವಿಶ್ವಾಸದಲ್ಲಿದೆ. ಡೇವಿಡ್‌ ಮಿಲ್ಲರ್‌, ಕ್ಲಾಸೆನ್‌, ಯಾನ್ಸನ್‌, ಸ್ಟಬ್ಸ್‌ ಸೇರಿ ಪ್ರಮುಖರು ತಂಡದಲ್ಲಿದ್ದಾರೆ.

ಒಟ್ಟು ಮುಖಾಮುಖಿ: 27ಭಾರತ: 15ದ.ಆಫ್ರಿಕಾ: 11ಫಲಿತಾಂಶವಿಲ್ಲ: 01

ಸಂಭವನೀಯ ಆಟಗಾರರುಭಾರತ: ಸಂಜು, ಅಭಿಷೇಕ್‌, ಸೂರ್ಯಕುಮಾರ್‌(ನಾಯಕ), ತಿಲಕ್‌, ಹಾರ್ದಿಕ್‌, ರಿಂಕು, ರಮನ್‌ದೀಪ್‌, ಅಕ್ಷರ್‌, ಆವೇಶ್‌, ಅರ್ಶ್‌ದೀಪ್‌, ವರುಣ್‌ ಚಕ್ರವರ್ತಿ.ದ.ಆಫ್ರಿಕಾ: ಹೆಂಡ್ರಿಕ್ಸ್‌, ರಿಕೆಲ್ಟನ್‌, ಮಾರ್ಕ್‌ರಮ್‌(ನಾಯಕ), ಸ್ಟಬ್ಸ್‌, ಕ್ಲಾಸೆನ್‌, ಮಿಲ್ಲರ್‌, ಯಾನ್ಸನ್‌/ಕೋಟ್ಟಿ, ಸಿಮೆಲೇನ್‌, ಪೀಟರ್‌, ಕೇಶವ್‌, ಬಾರ್ಟ್‌ಮನ್‌.

ಪಂದ್ಯ: ರಾತ್ರಿ 8.30ಕ್ಕೆ, ನೇರಪ್ರಸಾರ: ಸ್ಪೋರ್ಟ್ಸ್‌ 18 ಚಾನೆಲ್‌, ಜಿಯೋ ಸಿನಿಮಾ.

ಪಿಚ್ ರಿಪೋರ್ಟ್‌

ಡರ್ಬನ್‌ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, ದೊಡ್ಡ ಮೊತ್ತ ದಾಖಲಾಗುವ ಸಾಧ್ಯತೆ ಹೆಚ್ಚು. ಇಲ್ಲಿ ಕಳೆದ 7 ಟಿ20 ಪಂದ್ಯಗಳ ಮೊದಲ ಇನ್ನಿಂಗ್ಸ್‌ ಸರಾಸರಿ ಮೊತ್ತ 184. ಹೀಗಾಗಿ ಟಾಸ್‌ ಗೆಲ್ಲುವ ಬ್ಯಾಟಿಂಗ್‌ ಆಯ್ಕೆ ಮಾಡಿಕೊಳ್ಳಬಹುದು. ಆದರೆ ಇಲ್ಲಿ ಶುಕ್ರವಾರ ಶೇ.40ರಷ್ಟು ಮಳೆ ಬೀಳುವ ಸಾಧ್ಯತೆಯಿದ್ದು, ಪಂದ್ಯಕ್ಕೆ ಅಡ್ಡಿಪಡಿಸಬಹುದು.

10ನೇ ಪಂದ್ಯ: ಇದು ಇತ್ತಂಡಗಳ ನಡುವೆ ದ.ಆಫ್ರಿಕಾದಲ್ಲಿ ನಡೆಯುತ್ತಿರುವ 10ನೇ ಟಿ20 ಪಂದ್ಯ. ಈ ವರೆಗೆ ಭಾರತ 6, ದ.ಆಫ್ರಿಕಾ 3ರಲ್ಲಿ ಗೆದ್ದಿದೆ.