ಸಾರಾಂಶ
ನವದೆಹಲಿ: 2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಆಟಗಾರರ ಅಂತಿಮ ಪಟ್ಟಿಯನ್ನು ಬಿಸಿಸಿಐ ಶುಕ್ರವಾರ ಪ್ರಕಟಿಸಿದೆ. 366 ಭಾರತೀಯರು ಹಾಗೂ 208 ವಿದೇಶಿಗರು ಸೇರಿದಂತೆ ಒಟ್ಟು 574 ಆಟಗಾರರು ಹರಾಜಿನಲ್ಲಿ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ.
ನ.24 ಹಾಗೂ 25ಕ್ಕೆ ಸೌದಿ ಅರೇಬಿಯಾದ ಜೆದ್ದಾ ನಗರದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಹರಾಜಿಗೆ ಬರೋಬ್ಬರಿ 1574 ಆಟಗಾರರು ನೋಂದಣಿ ಮಾಡಿಕೊಂಡಿದ್ದರು. ಈ ಸಂಖ್ಯೆಯನ್ನು ಬಿಸಿಸಿಐ 574ಕ್ಕೆ ಇಳಿಸಿದೆ. ಅಂತಾರಾಷ್ಟ್ರೀಯ ಪಂದ್ಯವಾಡಿದ 48 ಭಾರತೀಯರು, 193 ವಿದೇಶಿ ಆಟಗಾರರು ಪಟ್ಟಿಯಲ್ಲಿದ್ದಾರೆ.
ಭಾರತದ 318 ಅನ್‌ಕ್ಯಾಪ್ಡ್, ವಿದೇಶದ 12 ಅನ್‌ಕ್ಯಾಪ್ಡ್ ಆಟಗಾರರ ಜೊತೆಗೆ 3 ಐಸಿಸಿ ಅಸೋಸಿಯೇಟ್ ರಾಷ್ಟ್ರಗಳ ಆಟಗಾರರೂ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. ಆಸ್ಟ್ರೇಲಿಯಾ, ಇಂಗ್ಲೆಂಡ್‌ನ ತಲಾ 37, ನ್ಯೂಜಿಲೆಂಡ್‌ನ 24, ದಕ್ಷಿಣ ಆಫ್ರಿಕಾದ 31, ವೆಸ್ಟ್‌ಇಂಡೀಸ್‌ನ 22, ಅಫ್ಘಾನಿಸ್ತಾನದ 18, ಬಾಂಗ್ಲಾದೇಶದ 12, ಶ್ರೀಲಂಕಾದ 19 ಆಟಗಾರರು ಹರಾಜು ಪಟ್ಟಿಯಲ್ಲಿದ್ದಾರೆ.81 ಮಂದಿ ಗರಿಷ್ಠ ಅಂದರೆ 2 ಕೋಟಿ ರು. ಮೂಲಬೆಲೆ ಹೊಂದಿದ್ದು, 320 ಮಂದಿ ಕನಿಷ್ಠ ಅಂದರೆ 30 ಲಕ್ಷ ರು. ಮೂಲಬೆಲೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ.
ಹರಾಜಲ್ಲಿ 14 ವರ್ಷದ ವೈಭವ್, 42ರ ಜಿಮ್ಮಿ!
ಈ ಬಾರಿ ಹರಾಜಿನಲ್ಲಿ ಬಿಹಾರದ ರಣಜಿ ಆಟಗಾರ, 14 ವರ್ಷದ ವೈಭವ್ ಸೂರ್ಯವಂಶಿ ಕೂಡಾ ಪಾಲ್ಗೊಳ್ಳಲಿದ್ದು, ಪಟ್ಟಿಯಲ್ಲಿರುವ ಅತಿ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಇನ್ನು, ಕಳೆದ 10 ವರ್ಷಗಳಿಂದ ಟಿ20 ಪಂದ್ಯವಾಡದ ಇಂಗ್ಲೆಂಡ್‌ನ 42 ವರ್ಷದ ವೇಗಿ ಜೇಮ್ಸ್ ಆ್ಯಂಡರ್‌ಸನ್ ಕೂಡಾ ಹರಾಜು ಪಟ್ಟಿಯಲ್ಲಿದ್ದಾರೆ. ಆ್ಯಂಡರ್‌ಸನ್ ಪಟ್ಟಿಯಲ್ಲಿರುವ ಅತಿ ಹಿರಿಯ ಆಟಗಾರ.
ರಾಜ್ಯದ 24 ಆಟಗಾರರು ಭಾಗಿ
ಹರಾಜಿನಲ್ಲಿ ಕರ್ನಾಟಕದ 24 ಆಟಗಾರರು ಪಾಲ್ಗೊಳ್ಳಲಿದ್ದಾರೆ. ಕೆ.ಎಲ್.ರಾಹುಲ್, ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ, ಮಯಾಂಕ್ ಅಗರ್‌ವಾಲ್, ಪ್ರಸಿದ್ಧ್ ಕೃಷ್ಣ, ಲುವ್ನಿತ್ ಸಿಸೋಡಿಯಾ, ಆರ್.ಸ್ಮರಣ್, ಎಲ್.ಆರ್.ಚೇತನ್, ಮನೋಜ್ ಭಾಂಡಗೆ, ಅಭಿಲಾಶ್ ಶೆಟ್ಟಿ, ವೈಶಾಖ್ ವಿಜಯ್‌ಕುಮಾರ್, ಪ್ರವೀಣ್ ದುಬೆ, ಮನ್ವಂತ್ ಕುಮಾರ್, ಕೆ.ಗೌತಮ್, ಶ್ರೇಯಸ್ ಗೋಪಾಲ್, ಹಾರ್ದಿಕ್ ರಾಜ್, ಅಭಿನವ್ ಮಹೋಹರ್, ಬಿ.ಆರ್.ಶರತ್. ಕೃಷ್ಣನ್ ಶ್ರೀಜಿತ್, ವಿದ್ವತ್ ಕಾವೇರಪ್ಪ, ದೀಪಕ್ ದೇವಾಡಿಗ, ವಿದ್ಯಾಧರ್ ಪಾಟೀಲ್, ಶುಭಾಂಗ್ ಹೆಗಡೆ, ಸಮರ್ಥ್ ನಾಗರಾಜ್ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ.