ಸಾರಾಂಶ
ಅಲ್ ರಯ್ಯಾನ್(ಕತಾರ್): ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ವೀರೋಚಿತ ಸೋಲು ಕಂಡಿದ್ದ ಭಾರತ, ಎಎಫ್‌ಸಿ ಏಷ್ಯನ್ ಕಪ್ ಫುಟ್ಬಾಲ್ ಟೂರ್ನಿಯ ತನ್ನ 2ನೇ ಪಂದ್ಯದಲ್ಲಿ ಗುರುವಾರ ಉಜ್ಬೇಕಿಸ್ತಾನ ವಿರುದ್ಧ ಸೆಣಸಾಡಲಿದೆ.‘ಬಿ’ ಗುಂಪಿನ ಮೊದಲ ಪಂದ್ಯದಲ್ಲಿ ಭಾರತ, ಆಸ್ಟ್ರೇಲಿಯಾ ವಿರುದ್ಧ 0-2 ಗೋಲುಗಳಿಂದ ಸೋತಿತ್ತು. 4 ತಂಡಗಳಿರುವ ಗುಂಪಿನಲ್ಲಿ ಅಗ್ರ-2ರಲ್ಲಿ ಸ್ಥಾನ ಗಿಟ್ಟಿಸಿ ನಾಕೌಟ್‌ಗೇರಬೇಕಿದ್ದರೆ ಭಾರತಕ್ಕೆ ಉಜ್ಬೇಕಿಸ್ತಾನ ವಿರುದ್ಧ ಗೆಲ್ಲಲೇಬೇಕಿದೆ. ಆದರೆ ವಿಶ್ವ ರ್‍ಯಾಂಕಿಂಗ್‌ನಲ್ಲಿ 68ನೇ ಸ್ಥಾನದಲ್ಲಿರುವ ಉಜ್ಬೇಕಿಸ್ತಾನದಿಂದ 102ನೇ ಸ್ಥಾನದಲ್ಲಿರುವ ಭಾರತಕ್ಕೆ ಕಠಿಣ ಸವಾಲು ಎದುರಾಗುವ ಸಾಧ್ಯತೆಯಿದೆ. ಈ ವರೆಗೆ ಇತ್ತಂಡಗಳು 8 ಬಾರಿ ಮುಖಾಮುಖಿಯಾಗಿದ್ದು, 5ರಲ್ಲಿ ಉಜ್ಬೇಕಿಸ್ತಾನ, 1ರಲ್ಲಿ ಮಾತ್ರ ಭಾರತ ಗೆದ್ದಿದೆ. ಉಜ್ಬೇಕಿಸ್ತಾನ ಆರಂಭಿಕ ಪಂದ್ಯದಲ್ಲಿ ಸಿರಿಯಾ ವಿರುದ್ಧ ಗೋಲು ರಹಿತ ಡ್ರಾ ಸಾಧಿಸಿತ್ತು. ಗೆಲ್ಲುವ ವಿಶ್ವಾಸದಲ್ಲಿ ಭಾರತೀಯ ತಂಡದ ಆಟಗಾರರಿದ್ದು, ಸುನೀಲ್ ಚೆಟ್ರಿ ಪಡೆ ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ. ಪಂದ್ಯ: ರಾತ್ರಿ 8ಕ್ಕೆ, ನೇರಪ್ರಸಾರ: ಸ್ಪೋರ್ಟ್ಸ್ 18, ಜಿಯೋ ಸಿನಿಮಾ