ಸಾರಾಂಶ
ಬಿಸಿಸಿಐನ ಹೊಸ ಕಾರ್ಯದರ್ಶಿ ನೇಮಕಕ್ಕೆ ಮೊದಲ ಹಂತದ ಹುಡುಕಾಟ ಆರಂಭ. ಜಯ್ ಶಾ ಹೇಳಿದವರೇ ಮುಂದಿನ ಕಾರ್ಯದರ್ಶಿ? ರೇಸ್‌ನಲ್ಲಿದ್ದಾರೆ ನಾಲ್ವರು.
ಬೆಂಗಳೂರು: ಇಲ್ಲಿ ಭಾನುವಾರ ನಡೆದ 93ನೇ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ನೂತನ ಕಾರ್ಯದರ್ಶಿಯನ್ನು ಆದಷ್ಟು ಬೇಗ ಆಯ್ಕೆ ಮಾಡುವಂತೆ ಹಾಲಿ ಕಾರ್ಯದರ್ಶಿ ಜಯ್ ಶಾಗೆ ಸದಸ್ಯರು ಮನವಿ ಸಲ್ಲಿಸಿದರು ಎಂದು ತಿಳಿದುಬಂದಿದೆ.
ನವೆಂಬರ್ ಕೊನೆ ವಾರದಲ್ಲಿ ಶಾ, ಬಿಸಿಸಿಐ ಕಾರ್ಯದರ್ಶಿ ಹುದ್ದೆ ತೊರೆಯಲಿದ್ದು, ಡಿ.1ರಂದು ಐಸಿಸಿ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಲಿದ್ದಾರೆ. ನವೆಂಬರ್‌ನಲ್ಲಿ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಸಹ ಇರುವ ಕಾರಣ, ಅದಕ್ಕೂ ಮೊದಲೇ ನೂತನ ಕಾರ್ಯದರ್ಶಿಯ ಘೋಷಣೆಯಾದರೆ ಉತ್ತಮ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಸದಸ್ಯರು ಶಾಗೆ ಮನವಿ ಮಾಡಿದರು ಎಂದು ಗೊತ್ತಾಗಿದೆ.
ಸದ್ಯಕ್ಕೆ ಡೆಲ್ಲಿ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರೋಹನ್ ಜೇಟ್ಲಿ, ಬಿಸಿಸಿಐನ ಖಜಾಂಚಿ ಆಶಿಶ್ ಶೆಲಾರ್, ಬಿಸಿಸಿಐ ಜಂಟಿ ಕಾರ್ಯದರ್ಶಿ ದೇವಜಿತ್ ಸಾಯ್ಕಿಯಾ ಹಾಗೂ ಗುಜರಾತ್ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಅನಿಲ್ ಪಟೇಲ್ ಬಿಸಿಸಿಐ ನೂತನ ಕಾರ್ಯದರ್ಶಿ ರೇಸ್‌ನಲ್ಲಿದ್ದಾರೆ.