ಕಾನ್ಪುರದಲ್ಲಿ ಮೊದಲ ದಿನ ಮಳೆ ಕಣ್ಣಾಮುಚ್ಚಾಲೆ: ಕೇವಲ 35 ಓವರ್ ಆಟ, ಬಾಂಗ್ಲಾ 3 ವಿಕೆಟ್‌ಗೆ 107

| Published : Sep 28 2024, 01:32 AM IST / Updated: Sep 28 2024, 04:15 AM IST

ಸಾರಾಂಶ

ಭಾರತ vs ಬಾಂಗ್ಲಾದೇಶ ಎರಡನೇ ಟೆಸ್ಟ್‌ ಪಂದ್ಯ. ಪದೇ ಪದೇ ಅಡ್ಡಿಪಡಿಸಿದ ಮಳೆರಾಯ. ಮೊದಲ ದಿನದ ಅಂತ್ಯಕ್ಕೆ ಬಾಂಗ್ಲಾ 3 ವಿಕೆಟ್‌ಗೆ 107 ರನ್‌. ಆಕಾಶ್‌ ದೀಪ್‌ಗೆ 2, ಅಶ್ವಿನ್‌ಗೆ 1 ವಿಕೆಟ್‌. ಇಂದೂ ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ

ಕಾನ್ಪುರ: ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್‌ ಪಂದ್ಯಕ್ಕೆ ನಿರೀಕ್ಷೆಯಂತೆಯೇ ಮಳೆ ಅಡ್ಡಿಪಡಿಸಿದೆ. ಮೊದಲ ದಿನವಾದ ಶುಕ್ರವಾರದ ಬಹುತೇಕ ಆಟವನ್ನು ಮಳೆರಾಯ ಬಲಿ ತೆಗೆದುಕೊಂಡಿತು. 

90 ಓವರ್‌ಗಳ ಆಟ ನಡೆಯಬೇಕಿದ್ದ ಮೊದಲ ದಿನ ಕೇವಲ 35 ಓವರ್‌ ಎಸೆಯಲಾಗಿದ್ದು, ಪ್ರವಾಸಿ ಬಾಂಗ್ಲಾದೇಶ 3 ವಿಕೆಟ್‌ಗೆ 107 ರನ್‌ ಕಲೆಹಾಕಿದೆ. ಮಧ್ಯರಾತ್ರಿ ಸುರಿದಿದ್ದ ಮಳೆಯಿಂದಾಗಿ ಪಂದ್ಯ ಒಂದು ಗಂಟೆ ತಡವಾಗಿ ಆರಂಭಗೊಂಡಿತು. ಬೆಳಗ್ಗೆ 10.30ಕ್ಕೆ ಶುರುವಾದ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತದ ನಾಯಕ ರೋಹಿತ್‌ ಶರ್ಮಾ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡರು. ಕಪ್ಪು ಮಣ್ಣಿನ ಪಿಚ್‌ ಆಗಿದ್ದರೂ ಭಾರತ ಹೆಚ್ಚುವರಿ ಸ್ಪಿನ್ನರ್‌ ಕಣಕ್ಕಿಳಿಸಲಿಲ್ಲ. ಚೆನ್ನೈನಲ್ಲಿ ಆಡಿದ್ದ ತಂಡವನ್ನೇ ಮುಂದುವರಿಸಿತು.ಚೆನ್ನೈ ಪಿಚ್‌ಗಿಂತ ಕಾನ್ಪುರದಲ್ಲಿ ಹೆಚ್ಚಿನ ಸ್ವಿಂಗ್‌ಗಳು ಕಂಡುಬಂದವು.

 8ನೇ ಓವರ್‌ನಲ್ಲಿ ವೇಗಿ ಆಕಾಶ್‌ ದೀಪ್‌ ಭಾರತಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. 24 ಎಸೆತಗಳನ್ನು ಎದುರಿಸಿದರೂ ರನ್‌ ಖಾತೆ ತೆರೆಯದ ಜಾಕಿರ್‌ ಹುಸೈನ್‌, ಯಶಸ್ವಿ ಜೈಸ್ವಾಲ್‌ ಹಿಡಿದ ಆಕರ್ಷಕ ಕ್ಯಾಚ್‌ಗೆ ಬಲಿಯಾದರು. 13ನೇ ಓವರ್‌ನಲ್ಲಿ ಆಕಾಶ್‌ ದೀಪ್‌ ಮತ್ತೆ ಬಾಂಗ್ಲಾದೇಶಕ್ಕೆ ಮಾರಕವಾಗಿ ಪರಿಣಮಿಸಿದರು. ಶದ್ಮಾನ್‌ ಇಸ್ಲಾಂ(24) ಆಕಾಶ್‌ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.

3ನೇ ವಿಕೆಟ್‌ಗೆ ಜೊತೆಯಾದ ನಾಯಕ ನಜ್ಮುಲ್‌ ಹೊಸೈನ್‌ ಹಾಗೂ ಮೋಮಿನುಲ್‌ ಹಕ್‌ ಬಾಂಗ್ಲಾಕ್ಕೆ ಚೇತರಿಕೆ ನೀಡಿದರು. ಈ ಜೋಡಿ 101 ಎಸೆತಗಳಲ್ಲಿ 51 ರನ್‌ ಜೊತೆಯಾಟವಾಡಿದರು. ಆದರೆ ಇವರಿಬ್ಬರನ್ನು ಅಶ್ವಿನ್‌ ಬೇರ್ಪಡಿಸಿದರು. ಇನ್ನಿಂಗ್ಸ್‌ನ 29ನೇ ಎಸೆತದಲ್ಲಿ ನಜ್ಮುಲ್‌(31) ಎಲ್‌ಬಿಡಬ್ಲ್ಯು ಮೂಲಕ ಪೆವಿಲಿಯನ್‌ ಸೇರಿದರು. ಮುರಿಯದ 4ನೇ ವಿಕೆಟ್‌ಗೆ ಜೊತೆಯಾಗಿರುವ ಮುಷ್ಫಿಕುರ್‌ ರಹೀಂ(ಔಟಾಗದೆ 6) ಹಾಗೂ ಮೋಮಿನುಲ್ ತಂಡಕ್ಕೆ ದೊಡ್ಡ ಮೊತ್ತದ ನಿರೀಕ್ಷೆ ಮೂಡಿಸಿದ್ದಾರೆ. ಮೋಮಿನುಲ್ ಔಟಾಗದೆ 40 ರನ್‌ ಗಳಿಸಿದ್ದಾರೆ. ಆಕಾಶ್‌ ದೀಪ್‌ 2, ಅಶ್ವಿನ್‌ 1 ವಿಕೆಟ್‌ ಕಿತ್ತರು.ಸ್ಕೋರ್‌: ಬಾಂಗ್ಲಾದೇಶ 107/3(ಮೊದಲ ದಿನದಂತ್ಯಕ್ಕೆ) (ಮೋಮಿನುಲ್‌ 40*, ನಜ್ಮುಲ್‌ 31, ಶದ್ಮಾನ್‌ 24, ಆಕಾಶ್‌ ದೀಪ್‌ 2-34, ಅಶ್ವಿನ್‌ 1-22)

ಗಂಟೆಗಳ ಕಾಲ ಮಳೆ: ಅಡ್ಡಿಯಾದ ಮಂದ ಬೆಳಕು

ಶುಕ್ರವಾರ ಪಂದ್ಯ 1 ಗಂಟೆ ತಡವಾಗಿ ಆರಂಭಗೊಂಡಿತು. ಬಳಿಕ ಮಧ್ಯಾಹ್ನದ ವರೆಗೂ ಪಂದ್ಯ ನಡೆದರೂ, ಊಟದ ವಿರಾಮದ ವೇಳೆ ಮತ್ತೆ ಮಳೆ ಸುರಿಯಲಾರಂಭಿಸಿತು. 2ನೇ ಅವಧಿಯಲ್ಲಿ ಕೇವಲ 9 ಓವರ್‌ ಎಸೆಯಲಾಯಿತು. ಆ ನಂತರ ಗಂಟೆಗಳ ಕಾಲ ಸುರಿದ ಮಳೆ ಪಂದ್ಯವನ್ನು ಸ್ಥಗಿತಗೊಳಿಸಿತು. 3 ಗಂಟೆ ವೇಳೆಗಾಗಲೇ ಮಂದ ಬೆಳಕು ಆವರಿಸಿದ ಕಾರಣ ಪಂದ್ಯ ಪುನಾರಂಭಿಸಲಾಗಲಿಲ್ಲ. ಹೀಗಾಗಿ ದಿನದಾಟ ಕೊನೆಗೊಳಿಸಲಾಯಿತು. ನಗರದಲ್ಲಿ ಶನಿವಾರವೂ ಮಳೆ ಮುನ್ಸೂಚನೆ ಇದ್ದು, ಪಂದ್ಯಕ್ಕೆ ಅಡ್ಡಿಪಡಿಸುವ ಸಾಧ್ಯತೆ ಹೆಚ್ಚು.