ಟಿ20 ವಿಶ್ವ ಸಮರಕ್ಕೆ 20 ಪಡೆಗಳು ಸನ್ನದ್ಧ: ಕಪ್‌ ಗೆಲ್ಲುವವರು ಯಾರು?

| Published : Jun 02 2024, 01:46 AM IST / Updated: Jun 02 2024, 04:05 AM IST

ಸಾರಾಂಶ

ಈ ಬಾರಿಯ ವಿಶ್ವಕಪ್‌ನಲ್ಲಿ ಸೆಣಸಲಿರುವ ತಂಡಗಳು ಯಾವುವು? ಆ ತಂಡಗಳ ಬಲಾಬಲವೇನು? ಈ ಹಿಂದಿನ ಸಾಧನೆ ಏನು? ತಂಡದಲ್ಲಿರುವ ಪ್ರಮುಖ ಆಟಗಾರರು ಯಾರ್‍ಯಾರು? ಈ ಎಲ್ಲಾ ಮಾಹಿತಿಗಳನ್ನು ‘ಕನ್ನಡಪ್ರಭ’ ನಿಮ್ಮ ಮುಂದಿಡುತ್ತಿದೆ.

2024ರ ಟಿ20 ವಿಶ್ವಕಪ್‌ ಸಮರಕ್ಕೆ ಈಗಾಗಲೇ ಚಾಲನೆ ದೊರೆತಿದೆ. ಅಮೆರಿಕ ಹಾಗೂ ವೆಸ್ಟ್‌ಇಂಡೀಸ್‌ನಲ್ಲಿ ಮುಂದಿನ 28 ದಿನಗಳ ಕಾಲ ನಡೆಯಲಿರುವ ಪಂದ್ಯಾವಳಿಯಲ್ಲಿ ಪ್ರಶಸ್ತಿಗಾಗಿ 20 ತಂಡಗಳು ಸೆಣಸಲಿವೆ. ಇದೇ ಮೊದಲ ಬಾರಿಗೆ ಯಾವುದೇ ಮಾದರಿಯ ಕ್ರಿಕೆಟ್‌ನ ವಿಶ್ವಕಪ್‌ನಲ್ಲಿ 20 ತಂಡಗಳು ಸ್ಪರ್ಧಿಸಲಿದ್ದು, ಕ್ರೀಡಾಭಿಮಾನಿಗಳಲ್ಲಿ ಫಿಫಾ ಫುಟ್ಬಾಲ್‌ ವಿಶ್ವಕಪ್‌ ರೀತಿಯ ಅನುಭವವನ್ನು ನೀಡಿದರೆ ಅಚ್ಚರಿಯಿಲ್ಲ.

ಈ ಬಾರಿಯ ವಿಶ್ವಕಪ್‌ನಲ್ಲಿ ಸೆಣಸಲಿರುವ ತಂಡಗಳು ಯಾವುವು? ಆ ತಂಡಗಳ ಬಲಾಬಲವೇನು? ಈ ಹಿಂದಿನ ಸಾಧನೆ ಏನು? ತಂಡದಲ್ಲಿರುವ ಪ್ರಮುಖ ಆಟಗಾರರು ಯಾರ್‍ಯಾರು? ಈ ಎಲ್ಲಾ ಮಾಹಿತಿಗಳನ್ನು ‘ಕನ್ನಡಪ್ರಭ’ ನಿಮ್ಮ ಮುಂದಿಡುತ್ತಿದೆ.

ಭಾರತ

ಐಸಿಸಿ ರ್‍ಯಾಂಕಿಂಗ್‌: 01

ಶ್ರೇಷ್ಠ ಪ್ರದರ್ಶನ: 2007ರಲ್ಲಿ ಚಾಂಪಿಯನ್‌ತಾರಾ ಆಟಗಾರರು: ಕೊಹ್ಲಿ, ರೋಹಿತ್‌, ಬೂಮ್ರಾ, ಸೂರ್ಯ, ಜೈಸ್ವಾಲ್‌, ರಿಷಭ್‌

ಐಪಿಎಲ್‌ ಮೂಡ್‌ನಿಂದ ಹೊರಬರುವ ಮೊದಲೇ ಟೀಂ ಇಂಡಿಯಾ ಆಟಗಾರರು ಟಿ20 ವಿಶ್ವ ಸಮರಕ್ಕೆ ಸಜ್ಜಾಗಿದ್ದಾರೆ. ಐಪಿಎಲ್‌ನಲ್ಲಿ ತಮ್ಮ ತಮ್ಮ ಫ್ರಾಂಚೈಸಿಗಳಿಗಾಗಿ ಅಭೂತಪೂರ್ವ ಪ್ರದರ್ಶನ ತೋರಿರುವ ಭಾರತೀಯ ಆಟಗಾರರು, ಈಗ ದೇಶಕ್ಕಾಗಿ ಆಡಲು, ಟ್ರೋಫಿ ಗೆಲ್ಲಲು ಕಾತರಿಸುತ್ತಿದ್ದಾರೆ. ರೋಹಿತ್‌ ಶರ್ಮಾ ನಾಯಕತ್ವದಲ್ಲಿ ಕಣಕ್ಕಿಳಿಯಲಿರುವ ಟೀಂ ಇಂಡಿಯಾ, ಬರೋಬ್ಬರಿ 17 ವರ್ಷಗಳ ಬಳಿಕ ಕಪ್‌ ಗೆಲ್ಲುವ ನಿರೀಕ್ಷೆಯಲ್ಲಿದೆ.ಕಳೆದ ವರ್ಷ ಏಕದಿನ ವಿಶ್ವಕಪ್‌ ರನ್ನರ್‌-ಅಪ್‌ ಭಾರತ ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಟ್ರೋಫಿ ಗೆಲ್ಲುವ ಫೇವರಿಟ್‌ ಎಂದೇ ಗುರುತಿಸಿಕೊಂಡಿದೆ. ತಂಡ ಎಲ್ಲಾ ವಿಭಾಗದಲ್ಲೂ ಬಲಿಷ್ಠವಾಗಿ ತೋರುತ್ತಿದ್ದು, ಟ್ರೋಫಿ ಗೆಲ್ಲಲು ಬೇಕಿರುವ ಎಲ್ಲಾ ಸಾಮರ್ಥ್ಯ ತಂಡಕ್ಕಿದೆ.

ಟೂರ್ನಿಯ ಇತಿಹಾಸದಲ್ಲೇ ಗರಿಷ್ಠ ರನ್‌ ಸರದಾರ ಎನಿಸಿಕೊಂಡಿರುವ ವಿರಾಟ್‌ ಕೊಹ್ಲಿ ಈ ಸಲವೂ ಉತ್ಕೃಷ್ಠ ಲಯದಲ್ಲಿದ್ದು, ತಂಡದ ಟ್ರಂಪ್‌ ಕಾರ್ಡ್‌ ಎನಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್‌ನಲ್ಲಿ 741 ರನ್‌ ಕಲೆಹಾಕಿದ್ದ ವಿರಾಟ್‌, ಅತ್ಯುತ್ತಮ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ್ದರು. ಅಮೆರಿಕದ ಡ್ರಾಪ್‌ ಇನ್‌ ಪಿಚ್‌ಗಳು ಹೇಗೆ ವರ್ತಿಸಲಿವೆ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಹೀಗಾಗಿ ಅನುಭವಿ ವಿರಾಟ್‌ ಕೊಹ್ಲಿಯ ಮೇಲೆ ತಂಡ ಭಾರಿ ನಿರೀಕ್ಷೆ ಇಟ್ಟುಕೊಂಡಿದೆ. ರೋಹಿತ್‌ ಶರ್ಮಾ ಜೊತೆ ಯಶಸ್ವಿ ಜೈಸ್ವಾಲ್‌ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆಯಿದ್ದು, ಹೀಗಾದರೆ ಕೊಹ್ಲಿ 3ನೇ ಕ್ರಮಾಂಕದಲ್ಲಿ ಆಡಬೇಕಾಗಬಹುದು. 

ರೋಹಿತ್‌-ಕೊಹ್ಲಿ ಇನ್ನಿಂಗ್ಸ್‌ ಆರಂಭಿಸಿದರೂ ಅಚ್ಚರಿಯಿಲ್ಲ. ಐಪಿಎಲ್‌ನಲ್ಲಿ ಜೈಸ್ವಾಲ್‌ ಹಾಗೂ ರೋಹಿತ್‌ರಿಂದ ಸ್ಥಿರ ಪ್ರದರ್ಶನ ಕಂಡು ಬಂದಿರಲಿಲ್ಲ. ಈ ಇಬ್ಬರು ಸ್ಥಿರ ಆಟವಾಡಬೇಕಿದೆ. ಇನ್ನು ಗುಂಪು ಹಂತದಲ್ಲಿ ಭಾರತಕ್ಕೆ ಪಾಕಿಸ್ತಾನ ಮಾತ್ರ ಪ್ರಬಲ ಎದುರಾಳಿ ಎನಿಸಿದ್ದು, ಉಳಿದ 3 ಪಂದ್ಯಗಳಲ್ಲಿ ಅಷ್ಟೇನೂ ದೊಡ್ಡ ಪ್ರಮಾಣದಲ್ಲಿ ಸವಾಲು ಎದುರಾಗುವ ನಿರೀಕ್ಷೆ ಇಲ್ಲ. ಹೀಗಾಗಿ, ಭಾರತೀಯ ಬ್ಯಾಟರ್‌ಗಳು ಸೂಪರ್‌-8 ಹಂತಕ್ಕೆ ಅಗತ್ಯವಿರುವ ಆಟದ ಶೈಲಿಯನ್ನು ಆರಂಭದಿಂದಲೇ ರೂಢಿಸಿಕೊಳ್ಳಬೇಕಾದ ಸವಾಲು ಸಹ ಇದೆ. 

ವಿಶ್ವ ನಂ.1 ಬ್ಯಾಟರ್‌ ಸೂರ್ಯಕುಮಾರ್‌ ಯಾದವ್ ತಂಡದ ಪ್ರಮುಖ ಆಸ್ತಿ.ಸೂರ್ಯ 360 ಡಿಗ್ರಿ ಆಟ, ಟೂರ್ನಿಯಲ್ಲಿ ಭಾರತದ ಫಲಿತಾಂಶವನ್ನು ನಿರ್ಧರಿಸಬಹುದು. ಇನ್ನು, ವಿಕೆಟ್‌ ಕೀಪರ್‌ ಸ್ಥಾನಕ್ಕೆ ಈ ಬಾರಿ ರಿಷಭ್‌ ಪಂತ್‌ ಮತ್ತು ಸಂಜು ಸ್ಯಾಮ್ಸನ್‌ ನಡುವೆ ಪೈಪೋಟಿ ಇದೆ.ಐಪಿಎಲ್‌ನಲ್ಲಿ ನೀರಸ ಪ್ರದರ್ಶನ ತೋರಿದ ಹೊರತಾಗಿಯೂ ಹಾರ್ದಿಕ್‌ ಪಾಂಡ್ಯ ಟಿ20 ವಿಶ್ವಕಪ್‌ಗೆ ಆಯ್ಕೆಯಾಗಿದ್ದಾರೆ. ತಮ್ಮ ಆಯ್ಕೆಯನ್ನು ಸಮರ್ಥಿಸುವ ರೀತಿಯಲ್ಲಿ ಪ್ರದರ್ಶನ ನೀಡಬೇಕಿದೆ. ಆಲ್ರೌಂಡರ್‌ ವಿಭಾಗದಲ್ಲಿ ರವೀಂದ್ರ ಜಡೇಜಾ, ಶಿವಂ ದುಬೆ, ಅಕ್ಷರ್‌ ಪಟೇಲ್‌ ತಂಡದ ಆಧಾರಸ್ತಂಭ. ಕುಲ್ದೀಪ್ ಯಾದವ್‌ ಹಾಗೂ ಯಜುವೇಂದ್ರ ಚಹಲ್‌ ನಡುವೆ ಒಂದು ಸ್ಥಾನಕ್ಕೆ ಪೈಪೋಟಿ ಏರ್ಪಡಬಹುದು. ಜಸ್‌ಪ್ರೀತ್‌ ಬೂಮ್ರಾ ವೇಗದ ಬೌಲಿಂಗ್‌ ಪಡೆ ಮುನ್ನಡೆಸಲಿದ್ದು, ಮೊಹಮದ್‌ ಸಿರಾಜ್‌, ಅರ್ಶ್‌ದೀಪ್‌ ಸಿಂಗ್ ಮೇಲೆ ತಂಡದ ಭಾರಿ ನಿರೀಕ್ಷೆ ಇಟ್ಟುಕೊಂಡಿದೆ. 

ಆಸ್ಟ್ರೇಲಿಯಾ

ಐಸಿಸಿ ರ್‍ಯಾಂಕಿಂಗ್‌: 02ಶ್ರೇಷ್ಠ ಪ್ರದರ್ಶನ: 2021ರಲ್ಲಿ ಚಾಂಪಿಯನ್‌ತಾರಾ ಆಟಗಾರರು: ಹೆಡ್‌, ಗ್ರೀನ್‌, ಸ್ಟಾರ್ಕ್‌, ವಾರ್ನರ್‌ಪ್ರತಿ ಬಾರಿಯಂತೆ ಈ ಸಲವೂ ಟ್ರೋಫಿ ಗೆಲ್ಲುವ ಫೇವರಿಟ್‌. ಏಕದಿನ ವಿಶ್ವಕಪ್‌ ಬಳಿಕ ಟಿ20ಯಲ್ಲೂ ಚಾಂಪಿಯನ್‌ ಎನಿಸಿಕೊಳ್ಳುವ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಲಿದೆ. ಟೂರ್ನಿಯ ಅತ್ಯಂತ ಅಪಾಯಕಾರಿ ತಂಡ. ಏಕಾಂಗಿಯಾಗಿ ಪಂದ್ಯ ಗೆಲ್ಲಿಸಬಲ್ಲ ಹಲವರಿದ್ದಾರೆ. ವಾರ್ನರ್‌, ಸ್ಟಾರ್ಕ್‌, ಕಮಿನ್ಸ್‌ರಂಥ ಅನುಭವಿಗಳ ಬಲ ಒಂದು ಕಡೆಯಾದರೆ, ಟ್ರ್ಯಾವಿಸ್‌ ಹೆಡ್‌, ಮಾರ್ಕಸ್‌ ಸ್ಟೋಯ್ನಿಸ್‌, ಮ್ಯಾಕ್ಸ್‌ವೆಲ್‌, ಟಿಮ್‌ ಡೇವಿಡ್‌ರಂತಹ ಸ್ಫೋಟಕ ಬ್ಯಾಟರ್‌ಗಳ ಉಪಸ್ಥಿತಿ ಮತ್ತೊಂದು ಕಡೆ.

ಇಂಗ್ಲೆಂಡ್‌ ಐಸಿಸಿ ರ್‍ಯಾಂಕಿಂಗ್‌: 03 ಶ್ರೇಷ್ಠ ಸಾಧನೆ: 2010, 2022ರಲ್ಲಿ ಚಾಂಪಿಯನ್‌ ತಾರಾ ಆಟಗಾರರು: ಬಟ್ಲರ್‌, ಬೇರ್‌ಸ್ಟೋವ್‌, ಆರ್ಚರ್‌, ಕರ್ರನ್‌ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಈ ಸಲವೂ ಪ್ರಶಸ್ತಿ ಜಯಿಸಬಲ್ಲ ಫೇವರಿಟ್‌ ತಂಡಗಳ ಪೈಕಿ ಒಂದೆನಿಸಿದೆ. ತಂಡ ಟಿ20 ತಜ್ಞ ಆಟಗಾರರಿಂದ ತುಂಬಿ ತುಳುಕುತ್ತಿದ್ದು, ಯಾವುದೇ ಎದುರಾಳಿಯನ್ನು ಬೇಟೆಯಾಡಬಲ್ಲ ಸಾಮರ್ಥ್ಯ ತಂಡಕ್ಕಿದೆ. ಜೋಸ್‌ ಬಟ್ಲರ್‌, ಫಿಲ್‌ ಸಾಲ್ಟ್‌ ಆರಂಭಿಕರಾಗಿ ಕಣಕ್ಕಿಳಿದರೆ ಯಾವುದೇ ಬೌಲಿಂಗ್‌ ಪಡೆಗಾದರೂ ನಡುಕ ಶುರುವಾಗಬಹುದು. ಅಲ್ಲದೇ ಬ್ಯಾಟಿಂಗ್‌ ಲೈನ್‌ ಅಪ್‌ ಬಹಳ ಬಲಿಷ್ಠವಾಗಿ ತೋರುತ್ತಿದೆ. ಲಿವಿಂಗ್‌ಸ್ಟೋನ್‌, ಬೇರ್‌ಸ್ಟೋವ್‌, ಬ್ರೂಕ್‌, ಅಲಿ, ಡಕೆಟ್‌, ಜ್ಯಾಕ್ಸ್‌ ಈ ಪೈಕಿ ಯಾರೊಬ್ಬರು ಕ್ರೀಸ್‌ನಲ್ಲಿ ನೆಲೆಯೂರಿದರೂ ಸಾಕು. ಗೆಲುವು ಖಚಿತ. ಇನ್ನು ಆರ್ಚರ್‌, ವುಡ್‌, ಕರ್ರನ್‌, ಜೋರ್ಡನ್‌, ಟಾಪ್ಲಿಯಂತಹ ಪ್ರಚಂಡ ವೇಗಿಗಳು, ರಶೀದ್, ಹಾರ್ಟ್ಲಿಯಂತಹ ಪ್ರತಿಭಾನ್ವಿತ ಸ್ಪಿನ್ನರ್‌ಗಳ ಬಲವೂ ತಂಡಕ್ಕೆ ವರದಾನವಾಗಬಹುದು.

ವೆಸ್ಟ್‌ಇಂಡೀಸ್‌ ಐಸಿಸಿ ರ್‍ಯಾಂಕಿಂಗ್‌: 04 ಶ್ರೇಷ್ಠ ಪ್ರದರ್ಶನ: 2012, 2016ರಲ್ಲಿ ಚಾಂಪಿಯನ್‌ತಾರಾ ಆಟಗಾರರು: ಪೂರನ್‌, ಹೆಟ್ಮೇಯರ್‌, ರಸೆಲ್‌, ಪೊವೆಲ್‌ಟೂರ್ನಿಯ 2 ಬಾರಿ ಚಾಂಪಿಯನ್‌ ತಂಡ ವೆಸ್ಟ್‌ಇಂಡೀಸ್‌ ಈ ಬಾರಿ ತವರಿನಲ್ಲೇ ಆಡುವುದರಿಂದ ಟ್ರೋಫಿ ಗೆಲ್ಲುವ ಫೇವರಿಟ್‌ ಎನಿಸಿಕೊಂಡಿದೆ. ಟಿ20ಗೆ ಹೇಳಿ ಮಾಡಿಸಿದಂತಿರುವ ದೈತ್ಯ ಆಟಗಾರರು ತಂಡದ ಪ್ಲಸ್ ಪಾಯಿಂಟ್‌. ಏಕಾಂಗಿಯಾಗಿ ಪಂದ್ಯ ಗೆಲ್ಲಿಸಬಲ್ಲ ಸಾಮರ್ಥ್ಯವಿರುವ ಹಲವರು ತಂಡದಲ್ಲಿದ್ದಾರೆ. ಯಾವುದೇ ಬಲಿಷ್ಠ ತಂಡವನ್ನು ಸೋಲಿಸಬಲ್ಲ ತಾಕತ್ತು ವಿಂಡೀಸ್‌ಗಿದೆ. ಸ್ಫೋಟಕ ಬ್ಯಾಟರ್‌ಗಳಾದ ಹೆಟ್ಮೇಯರ್‌, ನಿಕೋಲಸ್‌ ಪೂರನ್‌, ಆಲ್ರೌಂಡರ್‌ಗಳಾದ ರೋವ್ಮನ್‌ ಪೊವೆಲ್‌, ಆ್ಯಂಡ್ರೆ ರಸೆಲ್‌, ಶೆಫರ್ಡ್‌ ತಂಡದ ಆಸ್ತಿ. ಯುವ ವೇಗಿ ಶಾಮರ್‌ ಜೋಸೆಫ್‌, ಅಲ್ಜಾರಿ ಜೋಸೆಫ್‌ ಎಷ್ಟು ಅಪಾಯಕಾರಿ ಎನ್ನುವುದು ಎದುರಾಳಿಗಳಿಗೆ ಗೊತ್ತಿದೆ.

ನ್ಯೂಜಿಲೆಂಡ್‌

ಐಸಿಸಿ ರ್‍ಯಾಂಕಿಂಗ್‌: 05ಶ್ರೇಷ್ಠ ಪ್ರದರ್ಶನ: 2021ರಲ್ಲಿ ರನ್ನರ್‌-ಅಪ್‌ತಾರಾ ಆಟಗಾರರು: ವಿಲಿಯಮ್ಸನ್‌, ಬೌಲ್ಟ್‌, ಸೌಥಿ, ರಚಿನ್‌.ಅನುಭವಿಗಳೇ ಹೆಚ್ಚಿರುವ ನ್ಯೂಜಿಲೆಂಡ್‌ ಚೊಚ್ಚಲ ಬಾರಿ ಟ್ರೋಫಿ ಗೆಲ್ಲುವ ಕನಸಿನೊಂದಿಗೆ ಟೂರ್ನಿಗೆ ಕಾಲಿಡಲಿದೆ. ತಂಡದಲ್ಲಿರುವ 15 ಮಂದಿ ಪೈಕಿ 11 ಆಟಗಾರರು 30 ವರ್ಷಕ್ಕಿಂತ ಮೇಲಿನವರು. 2021ರ ಟಿ20 ವಿಶ್ವಕಪ್‌ನಲ್ಲಿ ಆಡಿದ 12 ಮಂದಿ ಈ ಬಾರಿಯೂ ತಂಡದಲ್ಲಿದ್ದಾರೆ. ಟಿಮ್‌ ಸೌಥಿ, ಸ್ಯಾಂಟ್ನರ್‌ ಹಾಗೂ ಇಶ್‌ ಸೋಧಿಗೆ 100ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಟಿ20 ಪಂದ್ಯ ಆಡಿದ ಅನುಭವವಿದೆ. ಇವೆಲ್ಲವೂ ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಉಪಯೋಗಕ್ಕೆ ಬರಲಿದೆ ಎಂಬುದು ತಂಡದ ವಿಶ್ವಾಸ. ಕಳೆದ ಏಕದಿನ ವಿಶ್ವಕಪ್‌ನಲ್ಲಿ ಅಬ್ಬರಿಸಿದ್ದ ರಚಿನ್‌ ರವೀಂದ್ರ ಜೊತೆ ನಾಯಕ ಕೇನ್ ವಿಲಿಯಮ್ಸನ್‌, ಫಿನ್‌ ಆ್ಯಲೆನ್‌, ಟ್ರೆಂಟ್‌ ಬೌಲ್ಟ್‌, ಗ್ಲೆನ್‌ ಫಿಲಿಪ್ಸ್‌ ಮೇಲೆ ಈ ಬಾರಿ ಹೆಚ್ಚಿನ ನಿರೀಕ್ಷೆಯಿದೆ.

ಪಾಕಿಸ್ತಾನ

ಐಸಿಸಿ ರ್‍ಯಾಂಕಿಂಗ್‌: 06ಶ್ರೇಷ್ಠ ಪ್ರದರ್ಶನ: 2009ರಲ್ಲಿ ಚಾಂಪಿಯನ್‌

ತಾರಾ ಆಟಗಾರರು: ಆಜಂ, ರಿಜ್ವಾನ್‌, ಶಾಹೀನ್‌, ಅಮೀರ್‌.ಕಳೆದ 7 ವರ್ಷಗಳಲ್ಲಿ ಯಾವುದೇ ಐಸಿಸಿ ಟ್ರೋಫಿ ಗೆಲ್ಲದ ಹೊರತಾಗಿಯೂ ವಿಶ್ವಕಪ್‌ನಲ್ಲಿ ಅಪಾಯಕಾರಿ ಎನಿಸಿಕೊಂಡಿರುವ ತಂಡಗಳಲ್ಲಿ ಒಂದು ಪಾಕಿಸ್ತಾನ. 2021ರಲ್ಲಿ ಸೆಮಿಫೈನಲ್‌ನಲ್ಲಿ ಸೋತು, 2022ರಲ್ಲಿ ರನ್ನರ್‌-ಅಪ್‌ ಆಗಿರುವ ತಂಡ ಈ ಬಾರಿ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಪ್ರತಿಭಾನ್ವಿತ, ಅನುಭವಿ ವೇಗಿಗಳು ತಂಡದ ಪ್ಲಸ್‌ ಪಾಯಿಂಟ್‌. ಬಿಗ್‌ ಹಿಟ್ಟರ್‌ಗಳೂ ತಂಡದಲ್ಲಿದ್ದಾರೆ. ಬಾಬರ್‌ ಆಜಂರ ನಾಯಕತ್ವ, ಗ್ಯಾರಿ ಕರ್ಸ್ಟನ್‌ನ ಕೋಚಿಂಗ್‌ ವಿಶ್ವಕಪ್‌ನಲ್ಲಿ ಕೈಹಿಡಿಯುವ ನಿರೀಕ್ಷೆಯಿದೆ. ಅನುಭವಿ ವೇಗಿ ಮೊಹಮದ್‌ ಅಮೀರ್‌, ಆಲ್ರೌಂಡರ್‌ ಇಮಾದ್‌ ವಾಸಿಂ ಮರಳಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.

ದಕ್ಷಿಣ ಆಫ್ರಿಕಾ

ಐಸಿಸಿ ರ್‍ಯಾಂಕಿಂಗ್‌: 07

ಶ್ರೇಷ್ಠ ಪ್ರದರ್ಶನ: 2009, 2014ರಲ್ಲಿ ಸೆಮಿಫೈನಲ್‌ತಾರಾ ಆಟಗಾರರು: ಕ್ಲಾಸೆನ್‌, ಡಿ ಕಾಕ್‌, ಮಿಲ್ಲರ್‌, ರಬಾಡ.ಐಸಿಸಿ ಟೂರ್ನಿಗಳಲ್ಲಿ ಉತ್ತಮ ದಾಖಲೆ ಹೊಂದಿರದ ದಕ್ಷಿಣ ಆಫ್ರಿಕಾ ಈ ಬಾರಿಯಾದರೂ ‘ಚೋಕರ್ಸ್‌’ ಹಣೆಪಟ್ಟಿ ಕಳಚಲು ಕಾಯುತ್ತಿದೆ. ಹಲವು ವಿಶ್ವ ಶ್ರೇಷ್ಠ ಬ್ಯಾಟರ್‌ಗಳು, ಮಾರಕ ವೇಗಿಗಳು ತಂಡದ ಬಲ. ಆದರೆ ಮಹತ್ವದ ಪಂದ್ಯಗಳಲ್ಲಿ ಕೈಗೊಡುವವರೇ ಹೆಚ್ಚು. ಟಿ20ಗೆ ಹೇಳಿ ಮಾಡಿಸಿದಂತಿರುವ, ಸ್ಫೋಟಕ ಬ್ಯಾಟರ್‌ಗಳಾದ ಕ್ಲಾಸೆನ್‌, ಟ್ರಿಸ್ಟನ್‌ ಸ್ಟಬ್ಸ್‌, ನಾಯಕ ಏಡನ್‌ ಮಾರ್ಕ್‌ರಮ್‌, ಡೇವಿಡ್‌ ಮಿಲ್ಲರ್‌ ತಂಡದ ಆತ್ಮವಿಶ್ವಾಸ ಹೆಚ್ಚಿಸಿದ್ದಾರೆ. ಕಗಿಸೊ ರಬಾಡ, ಏನ್ರಿಚ್‌ ನೋಕಿಯಾ, ಗೆರಾಲ್ಡ್‌ ಕೋಟ್ಜೀ ವೇಗ ಎಷ್ಟು ಮಾರಕ ಎಂಬುದು ಎದುರಾಳಿ ಬ್ಯಾಟರ್‌ಗಳಿಗೆ ಅರಿವಿದೆ. ಆದರೆ ವಿಶ್ವಕಪ್‌ನಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದು ತಂಡದ ಮುಂದಿರುವ ದೊಡ್ಡ ಸವಾಲು.

ಶ್ರೀಲಂಕಾ

ಐಸಿಸಿ ರ್‍ಯಾಂಕಿಂಗ್‌: 08

ಶ್ರೇಷ್ಠ ಪ್ರದರ್ಶನ: 2014ರಲ್ಲಿ ಚಾಂಪಿಯನ್‌

ತಾರಾ ಆಟಗಾರರು: ನಿಸ್ಸಾಂಕ, ಪತಿರನ, ಹಸರಂಗ, ಮೆಂಡಿಸ್‌ಒಂದು ಕಾಲದಲ್ಲಿ ಐಸಿಸಿ ಟೂರ್ನಿಗಳಲ್ಲಿ ತನ್ನದೇ ಛಾಪು ಮೂಡಿಸಿದ್ದ ಶ್ರೀಲಂಕಾ ಕಳೆದ ಕೆಲ ವಿಶ್ವಕಪ್‌ಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಆದರೆ ಈ ಬಾರಿ ಅನುಭವಿ ಹಾಗೂ ಯುವ ಆಟಗಾರರ ತಂಡ ಕಟ್ಟಿ ಟೂರ್ನಿಯಲ್ಲಿ ಮ್ಯಾಜಿಕ್‌ ಮಾಡುವ ನಿರೀಕ್ಷೆಯಲ್ಲಿದೆ. 2014ರಲ್ಲಿ ಚಾಂಪಿಯನ್‌ ಆದಾಗ ತಂಡದಲ್ಲಿದ್ದ ಮ್ಯಾಥ್ಯೂಸ್‌ ಈ ಬಾರಿಯೂ ಆಡುತ್ತಿದ್ದಾರೆ. ಐಪಿಎಲ್‌ನಲ್ಲಿ ಮಿಂಚಿರುವ ನುವಾನ್‌ ತುಷಾರ, ಮಥೀಶ ಪತಿರನ ತಂಡದ ಪ್ರಮುಖ ಆಧಾರಸ್ತಂಭ. ಹೆಚ್ಚಿನ ಸ್ಪಿನ್ನರ್‌ಗಳಿರುವ ಕಾರಣ ಕೆರಿಬಿಯನ್‌ ಪಿಚ್‌ಗಳಲ್ಲಿ ಯಶಸ್ಸು ಸಿಗಬಹುದು ಎಂಬುದು ತಂಡದ ನಿರೀಕ್ಷೆ.

ಬಾಂಗ್ಲಾದೇಶ

ಐಸಿಸಿ ರ್‍ಯಾಂಕಿಂಗ್‌: 09

ಶ್ರೇಷ್ಠ ಪ್ರದರ್ಶನ: 2007ರಲ್ಲಿ ಸೂಪರ್‌-8

ತಾರಾ ಆಟಗಾರರು: ಶಕೀಬ್‌, ಮುಸ್ತಾಫಿಜುರ್‌, ಮಹ್ಮೂದುಲ್ಲಾ, ನಜ್ಮುಲ್‌ವಿಶ್ವಕಪ್‌ನ ಅಂಚಿನಲ್ಲಿ ಯುಎಸ್‌ಎ ವಿರುದ್ಧದ ಟಿ20 ಸರಣಿಯಲ್ಲಿ ಆಘಾತಕಾರಿ ಸೋಲುಂಡಿರುವ ಬಾಂಗ್ಲಾದೇಶ ಆತ್ಮವಿಶ್ವಾಸದ ಕೊರತೆಯೊಂದಿಗೆ ಟೂರ್ನಿಗೆ ಕಾಲಿಡಲಿದೆ. ಮಾರ್ಚ್‌ನಲ್ಲಿ ಶ್ರೀಲಂಕಾ ಎದುರು ಟಿ20 ಸರಣಿ, ಬಳಿಕ ಜಿಂಬಾಬ್ವೆ ವಿರುದ್ಧ ಪಂದ್ಯ ಸೋತಿದ್ದು ತಂಡವನ್ನು ಇನ್ನೂ ಕಾಡುತ್ತಿದೆ. ಎಲ್ಲಾ ಟಿ20 ವಿಶ್ವಕಪ್‌ಗಳಲ್ಲಿ ಆಡಿದ ಅನುಭವವಿರುವ ಶಕೀಬ್‌, 8ನೇ ಬಾರಿ ಟೂರ್ನಿಯಲ್ಲಿ ಆಡುತ್ತಿರುವ ಮಹ್ಮೂದುಲ್ಲಾ ಹೆಚ್ಚಿನ ಜವಾಬ್ದಾರಿ ಹೊರಬೇಕಿದೆ. ಮುಸ್ತಾಫಿಜುರ್‌ ಟ್ರಂಪ್‌ಕಾರ್ಡ್‌ ಎನಿಸಿಕೊಳ್ಳಬಹುದು.

ಅಫ್ಘಾನಿಸ್ತಾನ

ಐಸಿಸಿ ರ್‍ಯಾಂಕಿಂಗ್‌: 10

ಶ್ರೇಷ್ಠ ಪ್ರದರ್ಶನ: 2016ರಲ್ಲಿ ಸೂಪರ್‌-10

ತಾರಾ ಆಟಗಾರರು: ರಶೀದ್‌, ಗುರ್ಬಾಜ್‌, ನಬಿ, ನೂರ್‌, ಜದ್ರಾನ್‌.ಅಫ್ಘಾನಿಸ್ತಾನ ಟಿ20ಯಲ್ಲಿ ಅಪಾಯಕಾರಿ ತಂಡಗಳಲ್ಲಿ ಒಂದು. ಯಾವುದೇ ಬಲಿಷ್ಠ ತಂಡವನ್ನೂ ಸೋಲಿಸಬಲ್ಲ ಸಾಮರ್ಥ್ಯವಿದೆ. ಇಬ್ರಾಹಿಂ ಮತ್ತು ನಜೀಬುಲ್ಲಾ ಹೊರತುಪಡಿಸಿ ಇತರೆಲ್ಲರೂ ಬೌಲಿಂಗ್‌ ಅಥವಾ ವಿಕೆಟ್‌ ಕೀಪಿಂಗ್‌ ಮಾಡಬಲ್ಲರು ಎಂಬುದು ಗಮನಾರ್ಹ ಸಂಗತಿ. ಆಲ್ರೌಂಡರ್‌ಗಳೇ ತುಂಬಿರುವ ತಂಡದಲ್ಲಿ ರಶೀದ್‌ ಖಾನ್‌, ನೂರ್‌ ಅಹ್ಮದ್‌, ಮುಜೀಬ್‌ ಸೇರಿ ಐವರು ತಜ್ಞ ಸ್ಪಿನ್ನರ್‌ಗಳಿದ್ದಾರೆ. ರಶೀದ್‌, ನಬಿ, ಗುರ್ಬಾಜ್‌ರ ಪ್ರದರ್ಶನ ಸೋಲು ಗೆಲುವು ನಿರ್ಧರಿಸಬಲ್ಲದು.

ಐರ್ಲೆಂಡ್‌

ಐಸಿಸಿ ರ್‍ಯಾಂಕಿಂಗ್‌: 11

ಶ್ರೇಷ್ಠ ಪ್ರದರ್ಶನ: 2009ರಲ್ಲಿ ಸೂಪರ್‌-8

ತಾರಾ ಆಟಗಾರರು: ಸ್ಟಿರ್ಲಿಂಗ್‌, ಬಾಲ್ಬಿರ್ನಿ, ಲಿಟ್ಲ್‌, ಟೆಕ್ಟರ್‌ವಿಶ್ವದ ಬಲಿಷ್ಠ ತಂಡಗಳನ್ನು ಸೋಲಿಸಲು ಸಾಮರ್ಥ್ಯವಿರುವ ಮತ್ತೊಂದು ತಂಡ ಐರ್ಲೆಂಡ್‌. ಕಳೆದ ಬಾರಿ ವಿಶ್ವಕಪ್‌ನ ಅರ್ಹತಾ ಸುತ್ತಿನಲ್ಲೇ ವೆಸ್ಟ್‌ಇಂಡೀಸನ್ನು ಹೊರದಬ್ಬಿ, ಗುಂಪು ಹಂತದಲ್ಲಿ ಇಂಗ್ಲೆಂಡ್‌ಗೆ ಸೋಲಿನ ರುಚಿ ತೋರಿಸಿದ್ದ ಐರ್ಲೆಂಡ್‌ ಈ ಬಾರಿಯೂ ಅಚ್ಚರಿಯ ಫಲಿತಾಂಶಗಳನ್ನು ನೀಡಲು ಕಾಯುತ್ತಿದೆ. ಅನುಭವಿ ಪಾಲ್‌ ಸ್ಟಿರ್ಲಿಂಗ್‌, ಆ್ಯಂಡ್ರ್ಯೂ ಬಾಲ್ಬಿರ್ನಿ ಜೊತೆ ಯುವ ಪ್ರತಿಭೆಗಳಾದ ಹ್ಯಾರಿ ಟೆಕ್ಟರ್‌, ಲಾರ್ಕನ್‌ ಟಕ್ಕರ್‌, ಜೋಶ್‌ ಲಿಟ್ಲ್‌, ಕರ್ಟಿಸ್ ಕ್ಯಾಂಪರ್‌ ತಂಡದ ಆಧಾರಸ್ತಂಭ.

ನಮೀಬಿಯಾ

ಐಸಿಸಿ ರ್‍ಯಾಂಕಿಂಗ್‌: 13

ಶ್ರೇಷ್ಠ ಪ್ರದರ್ಶನ: 2022ರಲ್ಲಿ ಸೂಪರ್‌-12ತಾರಾ ಆಟಗಾರರು: ವೀಸಾ, ಟ್ರಂಪಲ್‌ಮನ್‌, ಎರಾಸ್ಮಸ್‌

ಕಳೆದ ವರ್ಷ ಆಫ್ರಿಕಾ ಅರ್ಹತಾ ಟೂರ್ನಿಯಲ್ಲಿ ಅಜೇಯವಾಗಿ ಉಳಿದ ನಮೀಬಿಯಾ, ಜಿಂಬಾಬ್ವೆ ಅರ್ಹತಾ ರೇಸ್‌ನಿಂದ ಹೊರಬೀಳುವಂತೆ ಮಾಡಿತ್ತು. 2 ವರ್ಷ ಹಿಂದೆ ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾವನ್ನು ಸೋಲಿಸಿದ್ದ ನಮೀಬಯಾಕ್ಕೆ ಈ ಬಾರಿಯೂ ತಾರಾ ಆಲ್ರೌಂಡರ್‌ ಡೇವಿಡ್‌ ವೀಸಾ ಬಲವಿದೆ. ನಾಯಕ ಜೆರಾರ್ಡ್‌ ಎರಾಸ್ಮಸ್‌, ಎಡಗೈ ವೇಗಿ ರುಬೆನ್‌ ಟ್ರಂಪಲ್‌ಮನ್‌ ಮೇಲೂ ಎಲ್ಲರ ಕಣ್ಣಿದೆ.

ಸ್ಕಾಟ್ಲೆಂಡ್‌

ಐಸಿಸಿ ರ್‍ಯಾಂಕಿಂಗ್‌: 14

ಶ್ರೇಷ್ಠ ಪ್ರದರ್ಶನ: 2021ರಲ್ಲಿ ಸೂಪರ್‌ 12ತಾರಾ ಆಟಗಾರರು: ಬೆರಿಂಗ್ಟನ್‌, ಕ್ರಾಸ್‌, ಮೆಕ್‌ಮ್ಯೂಲೆನ್‌

ಕಳೆದ ವರ್ಷ ಯೂರೋಪಿಯನ್‌ ಅರ್ಹತಾ ಟೂರ್ನಿಯಲ್ಲಿ ಅಜೇಯವಾಗಿ ಉಳಿದು ವಿಶ್ವಕಪ್‌ಗೆ ಪ್ರವೇಶಿಸಿದ್ದ ಸ್ಲಾಟ್ಲೆಂಡ್‌, 2 ವರ್ಷಗಳ ಹಿಂದೆ ಟಿ20 ವಿಶ್ವಕಪ್‌ನಿಂದ ವೆಸ್ಟ್‌ಇಂಡೀಸ್‌ ತಂಡವನ್ನು ಆಚೆ ಹಾಕಿತ್ತು. ಬೆರಿಂಗ್ಟನ್‌, ಮ್ಯಾಥ್ಯೂ ಕ್ರಾಸ್‌, ಬ್ರಾಂಡನ್‌ ಮೆಕ್‌ಮ್ಯೂಲೆನ್‌, ಜಾರ್ಜ್‌ ಮುನ್ಶಿ, ಬ್ರಾಡ್‌ ವೀಲ್ಹ್‌ರಂತಹ ಘಟಾನುಘಟಿಗಳ ಬಲ ತಂಡಕ್ಕಿದೆ.

ನೆದರ್‌ಲೆಂಡ್ಸ್‌

ಐಸಿಸಿ ರ್‍ಯಾಂಕಿಂಗ್‌: 15

ಶ್ರೇಷ್ಠ ಪ್ರದರ್ಶನ: 2022ರಲ್ಲಿ ಸೂಪರ್‌ 12ತಾರಾ ಆಟಗಾರರು: ಎಡ್ವರ್ಡ್ಸ್‌, ಬಸ್‌ ಡಿ ಲೀಡೆ, ಸೈಬ್ರಾಂಡ್‌

ವಾನ್‌ ಡೆರ್‌ ಮರ್ವೆ, ಆ್ಯಕರ್‌ಮನ್‌ ಇಂಗ್ಲೆಂಡ್‌ನ ಟಿ20 ಬ್ಲಾಸ್ಟ್‌ನಲ್ಲಿ ಆಡಲು ನಿರ್ಧರಿಸಿ ವಿಶ್ವಕಪ್‌ಗೆ ಗೈರಾಗಿರುವುದು ತಂಡಕ್ಕೆ ಹಿನ್ನಡೆ ಉಂಟು ಮಾಡಿದೆ. ಆದರೂ ಡಚ್‌ ಪಡೆ ತಾನೆಷ್ಟು ಅಪಾಯಕಾರಿ ಎನ್ನುವುದನ್ನು 2023ರ ಏಕದಿನ ವಿಶ್ವಕಪ್‌ನಲ್ಲಿ ತೋರಿಸಿತ್ತು. ಕೆಲ ಪ್ರತಿಭಾನ್ವಿತ ಆಟಗಾರರನ್ನು ಹೊಂದಿರುವ ನೆದರ್‌ಲೆಂಡ್ಸ್‌, ‘ಡಿ’ ಗುಂಪಿನ ಲೆಕ್ಕಾಚಾರ ತಲೆಕೆಳಗಾಗಿಸಿದರೆ ಅಚ್ಚರಿಯಿಲ್ಲ.

ನೇಪಾಳ

ಐಸಿಸಿ ರ್‍ಯಾಂಕಿಂಗ್‌: 17

ಶ್ರೇಷ್ಠ ಪ್ರದರ್ಶನ: 2014ರಲ್ಲಿ ಮೊದಲ ಸುತ್ತುತಾರಾ ಆಟಗಾರರು: ರೋಹಿತ್‌, ದೀಪೇಂದ್ರ, ಕುಶಾಲ್‌

‘ಡಿ’ ಗುಂಪಿನಲ್ಲಿರುವ ನೇಪಾಳ ಕೆಲ ಅಚ್ಚರಿ ಫಲಿತಾಂಶಕ್ಕೆ ಸಾಕ್ಷಿಯಾಗಿ ಸೂಪರ್‌-8ಗೇರಲು ಎದುರು ನೋಡುತ್ತಿದೆ. ತಾರಾ ಸ್ಪಿನ್ನರ್‌ ಸಂದೀಪ್‌ ಲಾಮಿಚ್ಚಾನೆ ಅನುಪಸ್ಥಿತಿ ತಂಡವನ್ನು ಬಲವಾಗಿ ಕಾಡಬಹುದು. 21ರ ರೋಹಿತ್‌ ತಂಡ ಮುನ್ನಡೆಸಲಿದ್ದಾರೆ. ಕೆಲ ಟಿ20 ದಾಖಲೆಗಳನ್ನು ಬರೆದಿರುವ ದೀಪೇಂದ್ರ ಐರಿ, ಕುಶಾಲ್‌ ಮಲ್ಲಾ ಬಲ ತಂಡಕ್ಕಿದೆ.

ಅಮೆರಿಕ

ಐಸಿಸಿ ರ್‍ಯಾಂಕಿಂಗ್‌: 18

ಶ್ರೇಷ್ಠ ಪ್ರದರ್ಶನ: ಮೊದಲ ಸಲ ಕಣಕ್ಕೆತಾರಾ ಆಟಗಾರರು: ಆ್ಯಂಡರ್‌ಸನ್‌, ಹರ್ಮೀತ್‌, ಸೌರಭ್‌

ಇತ್ತೀಚೆಗೆ ಬಾಂಗ್ಲಾ ವಿರುದ್ಧ 2-1ರಲ್ಲಿ ಟಿ20 ಸರಣಿ ಗೆದ್ದು ಎಲ್ಲರ ಹುಬ್ಬೇರಿಸಿದ್ದ ಅಮೆರಿಕ, ಇದಕ್ಕೂ ಮುನ್ನ ಕೆನಡಾವನ್ನು 4-0ಯಲ್ಲಿ ಬಗ್ಗುಬಡಿದಿತ್ತು. ನ್ಯೂಜಿಲೆಂಡ್ನ ಕೋರಿ ಆ್ಯಂಡರ್‌ಸನ್‌, ಭಾರತದ ಮಾಜಿ ಅಂಡರ್-19 ಆಟಗಾರರಾದ ಹರ್ಮೀತ್‌ ಸಿಂಗ್‌, ಸೌರಭ್‌ ನೇತ್ರವಾಲ್ಕರ್‌, ದ.ಆಫ್ರಿಕಾದ ಮಾಜಿ ಪ್ರ.ದರ್ಜೆ ಆಟಗಾರ ಶ್ಯಾಡ್ಲೆ ವಾನ್‌ ತಂಡದಲ್ಲಿರುವ ತಾರೆಯರು. ತವರಿನಲ್ಲಿ ಮಿಂಚಲು ಅಮೆರಿಕ ಕಾತರಿಸುತ್ತಿದೆ.

ಒಮಾನ್‌

ಐಸಿಸಿ ರ್‍ಯಾಂಕಿಂಗ್‌: 19

ಶ್ರೇಷ್ಠ ಪ್ರರ್ದಶನ: 2016, 2021ರಲ್ಲಿ ಮೊದಲ ಸುತ್ತು

ತಾರಾ ಆಟಗಾರರು: ಮಕ್ಸೂದ್‌, ಇಲ್ಯಾಸ್‌, ಪ್ರಜಾಪತಿ

ಒಮಾನ್‌ ಈಗ ಐಸಿಸಿ ಸದಸ್ಯ ರಾಷ್ಟ್ರಗಳ ಪೈಕಿ ಪ್ರಬಲ ತಂಡಗಳಲ್ಲಿ ಒಂದೆನಿಸಿದೆ. ಅಕಿಬ್ ಇಲ್ಯಾಸ್‌ ಹೊಸದಾಗಿ ನಾಯಕತ್ವ ವಹಿಸಿಕೊಂಡಿದ್ದು, 4 ವರ್ಷ ಕಾಲ ನಾಯಕನಾಗಿದ್ದ ಝೀಶಾನ್‌ ಮಕ್ಸೂದ್‌ ಸಹ ತಂಡದಲ್ಲಿದ್ದಾರೆ. ಕಶ್ಯಪ್‌ ಪ್ರಜಾಪತಿ, ಪ್ರತೀಕ್‌ ಅಠಾವಾಳೆಯಂತಹ ಭಾರತೀಯ ಮೂಲದ ಆಟಗಾರರು ಪರಿಣಾಮಕಾರಿಯಾಗಬಹುದು.

ಪಪುವಾ ನ್ಯೂ ಗಿನಿ

ಐಸಿಸಿ ರ್‍ಯಾಂಕಿಂಗ್‌: 20

ಶ್ರೇಷ್ಠ ಪ್ರದರ್ಶನ: 2021ರಲ್ಲಿ ಮೊದಲ ಸುತ್ತುತಾರಾ ಆಟಗಾರರು: ಅಸಾದ್, ಗಾರ್ಡ್ನರ್‌, ಚಾರ್ಲ್ಸ್‌

ಪಪವು ನ್ಯೂ ಗಿನಿ ಈ ಬಾರಿ ಅನುಭವಿ ತಂಡದೊಂದಿಗೆ ವಿಶ್ವಕಪ್‌ಗೆ ಬಂದಿದೆ. ತಂಡದಲ್ಲಿರುವ 15 ಆಟಗಾರರು ಪೈಕಿ 10 ಮಂದಿ 2021ರ ವಿಶ್ವಕಪ್‌ನಲ್ಲಿ ಆಡಿದ್ದರು. ಈ ಬಾರಿ ತಂಡ ವಿಶ್ವಕಪ್‌ನಲ್ಲಿ ಮೊದಲ ಜಯಕ್ಕಾಗಿ ಕಾತರಿಸುತ್ತಿದೆ. ತಂಡಕ್ಕೆ ಗುಂಪು ಹಂತದ 2ನೇ ಪಂದ್ಯ ಉಗಾಂಡ ವಿರುದ್ಧ ಇದ್ದು, ಇತ್ತೀಚೆಗೆ ಆ ತಂಡವನ್ನು ನ್ಯೂ ಗಿನಿ ಸೋಲಿಸಿತ್ತು.

ಉಗಾಂಡ

ಐಸಿಸಿ ರ್‍ಯಾಂಕಿಂಗ್‌: 22

ಶ್ರೇಷ್ಠ ಪ್ರದರ್ಶನ: ಮೊದಲ ಸಲ ಕಣಕ್ಕೆತಾರಾ ಆಟಗಾರರು: ಎನ್‌ಸುಬುಗಾ, ಸೈಮನ್‌, ಹೆನ್ರಿ

‘ಕೆಲ ಪಂದ್ಯಗಳನ್ನು ನಾವು ಗೆಲ್ಲಲಿದ್ದೇವೆ ಎನ್ನುವ ವಿಶ್ವಾಸದೊಂದಿಗೆ ವಿಶ್ವಕಪ್‌ಗೆ ಕಾಲಿಡಲಿದ್ದೇವೆ’ ಎಂದು ನಾಯಕ ಬ್ರಿಯಾನ್‌ ಮಸಾಬ ಭರವಸೆ ವ್ಯಕ್ತಪಡಿಸಿದ್ದಾರೆ. ಆದರೆ, ವಿಶ್ವಕಪ್‌ಗೆ ಅರ್ಹತೆ ಪಡೆದಿರುವ ರಾಷ್ಟ್ರಗಳ ವಿರುದ್ಧ ಉಗಾಂಡ 11 ಪಂದ್ಯಗಳನ್ನು (ನಮೀಬಿಯಾ ವಿರುದ್ಧ 9, ಪಪುವಾ ನ್ಯೂ ಗಿನಿ ಹಾಗೂ ನೆದರ್‌ಲೆಂಡ್ಸ್‌ ವಿರುದ್ಧ ತಲಾ 1) ಆಡಿದ್ದು, ಕೇವಲ 1ರಲ್ಲಿ ಜಯಿಸಿದೆ. ಅದು ನಮೀಬಿಯಾ ವಿರುದ್ಧ 2022ರಲ್ಲಿ ಕೇವಲ 1 ಎಸೆತ ಬಾಕಿ ಇದ್ದಾಗ.

ಕೆನಡಾಐಸಿಸಿ ರ್‍ಯಾಂಕಿಂಗ್‌: 23

ಶ್ರೇಷ್ಠ ಪ್ರದರ್ಶನ: ಮೊದಲ ಸಲ ಕಣಕ್ಕೆ

ತಾರಾ ಆಟಗಾರರು: ಝಫರ್‌, ಕಲೀಂ ಸನಾ, ಗೊರ್ಡನ್‌, ಜಾನ್ಸನ್‌.2011ರ ವರೆಗೂ ಕೆನಡಾ ಏಕದಿನ ವಿಶ್ವಕಪ್‌ಗಳಲ್ಲಿ ಆಗಾಗೆ ಕಾಣಿಸಿಕೊಳ್ಳುತ್ತಿದ್ದ ತಂಡ. ಆದರೆ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಆಡಲಿದೆ. ಅಮೆರಿಕ ಅರ್ಹತಾ ಟೂರ್ನಿಯಲ್ಲಿ ನೆಟ್‌ ರನ್‌ರೇಟ್‌ ಆಧಾರದಲ್ಲಿ ಮೊದಲ ಸ್ಥಾನ ಪಡೆದು ವಿಶ್ವಕಪ್‌ಗೆ ಪ್ರವೇಶಿಸಿತು. ಆ್ಯರೋನ್‌ ಜಾನ್ಸನ್‌ ಮೇಲೆ ಕಣ್ಣಿಡಬೇಕಿದ್ದು, 16 ಟಿ20 ಪಂದ್ಯಗಳಲ್ಲಿ ಈ ಆಟಗಾರ 2 ಶತಕ ಸಿಡಿಸಿದ್ದಾರೆ. ನಾಯಕ ಸಾದ್‌ ಬಿನ್‌ ಜಫರ್‌ ಟಿ20 ಪಂದ್ಯವೊಂದರಲ್ಲಿ 4 ಮೇಡನ್‌ ಎಸೆದ ಏಕೈಕ ಆಟಗಾರ. ಕೆನಡಾ ಕೆಲ ಅಚ್ಚರಿ ಫಲಿತಾಂಶಕ್ಕೆ ಎದುರು ನೋಡುತ್ತಿದೆ.