ತನ್ನಿಚ್ಛೆಯಂತೆ ಫೀಲ್ಡ್ ಸೆಟ್‌ ಮಾಡದ ನಾಯಕ: ಸಿಟ್ಟಾಗಿ ಮೈದಾನ ತೊರೆದ ವಿಂಡೀಸ್‌ ವೇಗಿ ಅಲ್ಜಾರಿ!

| Published : Nov 08 2024, 12:34 AM IST / Updated: Nov 08 2024, 04:15 AM IST

ಸಾರಾಂಶ

ಮೇಡನ್‌ ಓವರ್‌ ಸಹ ಎಸೆದ ಅಲ್ಜಾರಿ, ಕೋಪ ಮಾಡಿಕೊಂಡು ಡಗೌಟ್‌ಗೆ ಹೋಗಿ ಕೂತರು. ಹೀಗಾಗಿ ವಿಂಡೀಸ್‌ ಕೇವಲ 10 ಆಟಗಾರರೊಂದಿಗೆ 1 ಓವರ್‌ ಫೀಲ್ಡ್‌ ಮಾಡಿತು.

ಬ್ರಿಡ್ಜ್‌ಟೌನ್‌: ಇಂಗ್ಲೆಂಡ್‌ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಅಪರೂಪದ ಪ್ರಸಂಗವೊಂದು ನಡೆಯಿತು. ಇಂಗ್ಲೆಂಡ್‌ ಇನ್ನಿಂಗ್ಸ್‌ನ 4ನೇ ಓವರಲ್ಲಿ ವೇಗಿ ಅಲ್ಜಾರಿ ಜೋಸೆಫ್‌ ತನ್ನಿಚ್ಛೆಯಂತೆ ಕ್ಷೇತ್ರರಕ್ಷಕರನ್ನು ನಿಲ್ಲಿಸಲಿಲ್ಲ ಎಂದು ಸಿಟ್ಟಾಗಿ, ನಾಯಕ ಶಾಯ್‌ ಹೋಪ್‌ ಮೇಲೆ ಕೂಗಾಡಿದರು. 

ಅದೇ ಓವರಲ್ಲಿ ಜೊರ್ಡನ್‌ ಕಾಕ್ಸ್‌ರನ್ನು ಔಟ್‌ ಮಾಡಿದ್ದಲ್ಲದೇ ಮೇಡನ್‌ ಓವರ್‌ ಸಹ ಎಸೆದ ಅಲ್ಜಾರಿ, ಕೋಪ ಮಾಡಿಕೊಂಡು ಡಗೌಟ್‌ಗೆ ಹೋಗಿ ಕೂತರು. ಹೀಗಾಗಿ ವಿಂಡೀಸ್‌ ಕೇವಲ 10 ಆಟಗಾರರೊಂದಿಗೆ 1 ಓವರ್‌ ಫೀಲ್ಡ್‌ ಮಾಡಿತು. ಈ ನಡುವೆ ಜೋಸೆಫ್‌ರನ್ನು ಸಮಾಧಾನಪಡಿಸುವ ಕೋಚ್‌ ಡ್ಯಾರೆನ್‌ ಸ್ಯಾಮಿಯ ಪ್ರಯತ್ನವೂ ಫಲ ನೀಡಲಿಲ್ಲ. ಡಗೌಟ್‌ನಲ್ಲಿ ತಮ್ಮ ಸಹ ಆಟಗಾರ ಹೇಡನ್‌ ವಾಲ್ಶ್‌ರೊಂದಿಗೆ ಬೇಸರ ತೋಡಿಕೊಂಡ ಅಲ್ಜಾರಿ, 1 ಓವರ್‌ ಬಳಿಕ ಮೈದಾನಕ್ಕೆ ವಾಪಸಾದರು. ಈ ಘಟನೆಯ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

ಇಂಗ್ಲೆಂಡ್‌ ವಿರುದ್ಧ ಏಕದಿನ ಸರಣಿ ಗೆದ್ದ ವಿಂಡೀಸ್‌

ಬ್ರಿಡ್ಜ್‌ಟೌನ್‌: ಇಂಗ್ಲೆಂಡ್‌ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯನ್ನು ವೆಸ್ಟ್‌ಇಂಡೀಸ್‌ 2-1ರಲ್ಲಿ ತನ್ನದಾಗಿಸಿಕೊಂಡಿದೆ. ಬುಧವಾರ ನಡೆದ 3ನೇ ಹಾಗೂ ಕೊನೆಯ ಪಂದ್ಯದಲ್ಲಿ ಆತಿಥೇಯ ತಂಡ 8 ವಿಕೆಟ್‌ ಗೆಲುವು ಸಾಧಿಸಿತು. ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡನ್ನು 50 ಓವರಲ್ಲಿ 8 ವಿಕೆಟ್‌ಗೆ 263 ರನ್‌ಗೆ ಕಟ್ಟಿಹಾಕಿದ ವಿಂಡೀಸ್‌, ಬ್ರ್ಯಾಂಡನ್‌ ಕಿಂಗ್‌ (102) ಹಾಗೂ ಕೇಸಿ ಕಾರ್ಟಿ (128*)ರ ಶತಕಗಳ ನೆರವಿನಿಂದ ಕೇವಲ 2 ವಿಕೆಟ್‌ ಕಳೆದುಕೊಂಡು, ಇನ್ನೂ 7 ಓವರ್‌ ಬಾಕಿ ಇರುವಂತೆ 267 ರನ್‌ ಕಲೆಹಾಕಿ, ಜಯದ ಸಂಭ್ರಮ ಆಚರಿಸಿತು.