ಸಾರಾಂಶ
ಬೆಂಗಳೂರು: 3ನೇ ಆವೃತ್ತಿಯ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಹುಬ್ಬಳ್ಳಿ ಟೈಗರ್ಸ್ ತಂಡ ಸೆಮಿಫೈನಲ್ ಸ್ಥಾನ ಅಧಿಕೃತಗೊಳಿಸಿದೆ. ಸೋಮವಾರ ಮಂಗಳೂರು ಡ್ರ್ಯಾಗನ್ಸ್ ವಿರುದ್ಧ ಹುಬ್ಬಳ್ಳಿ ತಂಡ 42 ರನ್ ಭರ್ಜರಿ ಗೆಲುವು ಸಾಧಿಸಿತು. ಇದರೊಂದಿಗೆ ತಂಡ 8 ಪಂದ್ಯಗಳಲ್ಲಿ 6ನೇ ಗೆಲುವಿನೊಂದಿಗೆ ಮತ್ತೆ ಅಗ್ರಸ್ಥಾನಕ್ಕೇರಿತು.
8 ಪಂದ್ಯಗಳಲ್ಲಿ 6ನೇ ಸೋಲಿನ ಮುಖಭಂಗಕ್ಕೊಳಗಾದ ಮಂಗಳೂರು ಸೆಮಿಫೈನಲ್ ರೇಸ್‌ನಿಂದ ಹೊರಬಿತ್ತು. ಮೊದಲು ಬ್ಯಾಟ್ ಮಾಡಿದ ಹುಬ್ಬಳ್ಳಿ 3 ವಿಕೆಟ್‌ಗೆ ಬರೋಬ್ಬರಿ 209 ರನ್ ಕಲೆಹಾಕಿತು. 2.1 ಓವರ್‌ಗಳಲ್ಲಿ 13 ರನ್ ಆಗುವಷ್ಟರಲ್ಲಿ ತಂಡದ ಇಬ್ಬರು ಆರಂಭಿಕರೂ ಪೆವಿಲಿಯನ್ ಸೇರಿದ್ದರು. ಕಾರ್ತಿಕೇಯ 9 ರನ್ ಗಳಿಸಿ ಔಟಾದರೆ, ಮೊಹಮದ್ ತಾಹಾ ರನ್ ಖಾತೆ ತೆರೆಯಲಿಲ್ಲ. ಆದರೆ 3ನೇ ವಿಕೆಟ್‌ಗೆ ಜೊತೆಯಾದ ಕೆ.ಎಲ್.ಶ್ರೀಜಿತ್ ಹಾಗೂ ಅನೀಶ್ವರ್ ಗೌತಮ್ 83 ಎಸೆತಗಳಲ್ಲಿ 148 ರನ್ ಸೇರಿಸಿದರು.
ಮಂಗಳೂರು ಬೌಲರ್‌ಗಳನ್ನು ಈ ಜೋಡಿ ಮನಬಂದಂತೆ ದಂಡಿಸಿತು.ಶ್ರೀಜಿತ್ 44 ಎಸೆತಗಳಲ್ಲಿ 7 ಬೌಂಡರಿ, 6 ಸಿಕ್ಸರ್‌ನೊಂದಿಗೆ 77 ರನ್ ಸಿಡಿಸಿ ಅದ್ವಿತ್ ಶೆಟ್ಟಿಗೆ ವಿಕೆಟ್ ಒಪ್ಪಿಸಿದರು. 58 ಎಸೆತಗಳಲ್ಲಿ 8 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್‌ನೊಂದಿಗೆ 95 ರನ್ ಚಚ್ಚಿದ ಅನೀಶ್ವರ್ ಔಟಾಗದೆ ಕ್ರೀಸ್‌ನಲ್ಲಿ ಉಳಿದರು.
ಆದರೆ ಅವರಿಗೆ ಶತಕ ಗಳಿಸಲು ಸಾಧ್ಯವಾಗಲಿಲ್ಲ. ನಾಯಕ ಮನೀಶ್ ಪಾಂಡೆ 11 ಎಸೆತಗಳಲ್ಲಿ ಔಟಾಗದೆ 24 ರನ್ ಗಳಿಸಿದರು. ದೊಡ್ಡ ಗುರಿ ಬೆನ್ನತ್ತಿದ ಮಂಗಳೂರು ಬ್ಯಾಟಿಂಗ್ ವೈಫಲ್ಯಕ್ಕೊಳಗಾಯಿತು. ತಂಡ 19.2 ಓವರ್‌ಗಳಲ್ಲಿ 167 ರನ್‌ಗೆ ಸರ್ವಪತನ ಕಂಡಿತು. ನಾಯಕ ಶ್ರೇಯಸ್ ಗೋಪಾಲ್ 23 ಎಸೆತಗಳಲ್ಲಿ ಬಾರಿಸಿದ 38 ರನ್ ತಂಡದ ಪರ ದಾಖಲಾದ ಗರಿಷ್ಠ ವೈಯಕ್ತಿಕ ಮೊತ್ತ.
ಉಳಿದಂತೆ ಲೋಚನ್ ಗೌಡ 18 ಎಸೆತಗಳಲ್ಲಿ 35, ಸಿದ್ಧಾರ್ಥ್ 30 ಹಾಗೂ ರೋಹನ್ ಪಾಟೀಲ್ 25 ರನ್ ಕೊಡುಗೆ ನೀಡಿದರು. ನಿಶ್ವಿತ್ ಪೈ ಹಾಗೂ ರಿಷಿ ಬೋಪಣ್ಣ ತಲಾ 3 ವಿಕೆಟ್ ಪಡೆದರು.ಸ್ಕೋರ್: ಹುಬ್ಬಳ್ಳಿ 20 ಓವರಲ್ಲಿ 209/3 (ಅನೀಶ್ವರ್ 95*, ಶ್ರೀಜಿತ್ 77, ಅಭಿಲಾಶ್ 1-18), ಮಂಗಳೂರು 19.2 ಓವರ್‌ಗಳಲ್ಲಿ 167/10 (ಶ್ರೇಯಸ್ 38, ಲೋಚನ್ 35, ನಿಶ್ವಿತ್ 3-21, ರಿಷಿ 3-28) ಪಂದ್ಯಶ್ರೇಷ್ಠ: ಅನೀಶ್ವರ್ ಗೌತಮ್
ಇಂದಿನ ಪಂದ್ಯಗಳು
ಗುಲ್ಬರ್ಗಾ ಮಿಸ್ಟಿಕ್ಸ್-ಶಿವಮೊಗ್ಗ ಲಯನ್ಸ್, ಮಧ್ಯಾಹ್ನ 3ಕ್ಕೆಹುಬ್ಬಳ್ಳಿ ಟೈಗರ್ಸ್-ಮೈಸೂರು ವಾರಿಯರ್ಸ್, ಸಂಜೆ 7ಕ್ಕೆ