ಸಾರಾಂಶ
ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ, ಭಾರತ ತಂಡದ ಮಾಜಿ ಕೋಚ್ ಅನ್ಶುಮನ್ ಗಾಯಕ್ವಾಡ್ ಬುಧವಾರ ಬರೋಡಾದಲ್ಲಿ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು. ಬಹಳ ದಿನಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅನ್ಶುಮನ್, ಚಿಕಿತ್ಸೆಗಾಗಿ ಲಂಡನ್‌ಗೆ ತೆರಳಿದ್ದರು. ಕಳೆದ ತಿಂಗಳಷ್ಟೇ ಅವರು ತಮ್ಮ ತವರೂರು ಬರೋಡಾಕ್ಕೆ ವಾಪಸಾಗಿ, ಚಿಕಿತ್ಸೆ ಮುಂದುವರಿಸಿದ್ದರು.
ಗಾಯಕ್ವಾಡ್‌ರ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವಂತೆ ಮಾಜಿ ಕ್ರಿಕೆಟಿಗರು ಬಿಸಿಸಿಐಗೆ ಮನವಿ ಸಲ್ಲಿಸಿದ್ದರು. ಬಿಸಿಸಿಐ 1 ಕೋಟಿ ರು. ನೆರವು ಬಿಡುಗಡೆ ಮಾಡಿತ್ತು.
ಭಾರತ ಪರ 40 ಟೆಸ್ಟ್, 15 ಏಕದಿನ ಪಂದ್ಯಗಳನ್ನು ಆಡಿದ್ದ ಗಾಯಕ್ವಾಡ್, ಒಟ್ಟಾರೆ 205 ಪ್ರಥಮ ದರ್ಜೆ ಪಂದ್ಯಗಳನ್ನಾಡಿ 12136 ರನ್ ಕಲೆಹಾಕಿದ್ದರು.
1998ರಲ್ಲಿ ಶಾರ್ಜಾದಲ್ಲಿ ಸಚಿನ್ ತೆಂಡುಲ್ಕರ್ ಅವಿಸ್ಮರಣೀಯ ಇನ್ನಿಂಗ್ಸ್‌ಗಳನ್ನು ಆಡಿದಾಗ, 1999ರಲ್ಲಿ ದೆಹಲಿಯ ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ಅನಿಲ್ ಕುಂಬ್ಳೆ ಪಾಕಿಸ್ತಾನ ವಿರುದ್ಧ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಕಬಳಿಸಿದಾಗ, ಗಾಯಕ್ವಾಡ್ ಅವರು ಭಾರತ ತಂಡದ ಕೋಚ್ ಆಗಿದ್ದರು.
ಗಾಯಕ್ವಾಡ್ ಅವರ ನಿಧನಕ್ಕೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಅನೇಕ ಮಾಜಿ ಹಾಗೂ ಹಾಲಿ ಕ್ರಿಕೆಟಿಗರು, ಸಾವಿರಾರು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.