750 ವಿಕೆಟ್ ಕ್ಲಬ್‌ಗೆ ಆರ್‌.ಅಶ್ವಿನ್‌: ಒಂದೇ ಪಂದ್ಯದಲ್ಲಿ ದಾಖಲೆಗಳ ಸುರಿಮಳೆಗೈದ ಮಾಂತ್ರಿಕ ಸ್ಪಿನ್ನರ್‌

| Published : Sep 23 2024, 01:26 AM IST / Updated: Sep 23 2024, 04:39 AM IST

ಸಾರಾಂಶ

ಭಾರತದ ಸ್ಪಿನ್ನರ್ ಆರ್. ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 750 ವಿಕೆಟ್‌ಗಳನ್ನು ಪೂರೈಸಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ 6 ವಿಕೆಟ್‌ಗಳೊಂದಿಗೆ ಈ ಸಾಧನೆ ಮಾಡಿದ ಅವರು, ಈ ಸಾಧನೆ ಮಾಡಿದ ಎಲೈಟ್ ಬೌಲರ್‌ಗಳ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.

ಚೆನ್ನೈ: ಭಾರತದ ತಾರಾ ಸ್ಪಿನ್ನರ್‌ ಆರ್.ಅಶ್ವಿನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 750 ವಿಕೆಟ್‌ ಕಿತ್ತ ಸಾಧಕರ ಎಲೈಟ್‌ ಕ್ಲಬ್‌ಗೆ ಸೇರ್ಪಡೆಗೊಂಡರು. ಭಾನುವಾರ ಕೊನೆಗೊಂಡ ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್‌ನಲ್ಲಿ 6 ವಿಕೆಟ್‌ ಪಡೆಯುವ ಮೂಲಕ 750 ವಿಕೆಟ್‌ಗಳ ಮೈಲುಗಲ್ಲು ಸಾಧಿಸಿದರು. ಅವರು 101 ಟೆಸ್ಟ್‌ ಪಂದ್ಯಗಳಲ್ಲಿ 522, 116 ಏಕದಿನದಲ್ಲಿ 156 ಹಾಗೂ 65 ಟಿ20 ಪಂದ್ಯಗಳಲ್ಲಿ 72 ವಿಕೆಟ್‌ ಪಡೆದಿದ್ದಾರೆ.

ಅಶ್ವಿನ್‌ ಅಂ.ರಾ. ಕ್ರಿಕೆಟ್‌ನಲ್ಲಿ 750+ ವಿಕೆಟ್‌ ಕಿತ್ತ 2ನೇ ಭಾರತೀಯ ಹಾಗೂ ಒಟ್ಟಾರೆ 12ನೇ ಬೌಲರ್‌. ಕರ್ನಾಟಕದ ಅನಿಲ್‌ ಕುಂಬ್ಳೆ 956 ವಿಕೆಟ್‌ ಪಡೆದಿದ್ದಾರೆ. ಒಟ್ಟಾರೆ ಅಶ್ವಿನ್ ಗರಿಷ್ಠ ವಿಕೆಟ್‌ ಸಾಧಕರ ಪಟ್ಟಿಯಲ್ಲಿ 12ನೇ ಸ್ಥಾನಕ್ಕೇರಿದ್ದಾರೆ. ಅವರು ಭಾನುವಾರ ವೆಸ್ಟ್‌ಇಂಡೀಸ್‌ನ ಕರ್ಟ್ನಿ ವಾಲ್ಶ್‌(746 ವಿಕೆಟ್‌) ಅವರನ್ನು ಹಿಂದಿಕ್ಕಿದರು. ಪಟ್ಟಿಯಲ್ಲಿ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್‌ 1347 ವಿಕೆಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾದ ಶೇನ್‌ ವಾರ್ನ್‌(1001 ವಿಕೆಟ್‌) 2ನೇ ಸ್ಥಾನದಲ್ಲಿದ್ದಾರೆ.

ಇನ್ನು, ಟೆಸ್ಟ್‌ನಲ್ಲಿ ಗರಿಷ್ಠ ವಿಕೆಟ್‌ ಪಡೆದವರ ಪಟ್ಟಿಯಲ್ಲೂ ಕರ್ಟ್ನಿ ವಾಲ್ಶ್‌(519 ವಿಕೆಟ್‌)ರನ್ನು ಅಶ್ವಿನ್‌(522) ಹಿಂದಿಕ್ಕಿದರು. ಪಟ್ಟಿಯಲ್ಲಿ ಅಶ್ವಿನ್‌ 8ನೇ ಸ್ಥಾನದಲ್ಲಿದ್ದಾರೆ.

ವಾರ್ನ್‌ ದಾಖಲೆ ಸರಿಗಟ್ಟಿದ ಅಶ್ವಿನ್‌

ಅಶ್ವಿನ್‌ ಟೆಸ್ಟ್‌ನಲ್ಲಿ ಅತಿ ಹೆಚ್ಚು ಬಾರಿ 5+ ವಿಕೆಟ್‌ ಪಡೆದ ಸಾಧಕರ ಪಟ್ಟಿಯಲ್ಲಿ ಜಂಟಿ 2ನೇ ಸ್ಥಾನಕ್ಕೇರಿದ್ದಾರೆ. ಅವರು ಭಾನುವಾರ ಆಸ್ಟ್ರೇಲಿಯಾದ ದಿಗ್ಗಜ ಸ್ಪಿನ್ನರ್‌ ಶೇನ್‌ ವಾರ್ನ್‌ ದಾಖಲೆಯನ್ನು ಸರಿಗಟ್ಟಿದರು. ಇವರಿಬ್ಬರೂ ತಲಾ 37 ಬಾರಿ ಇನ್ನಿಂಗ್ಸ್‌ನಲ್ಲಿ 5+ ವಿಕೆಟ್‌ ಕಬಳಿಸಿದ್ದಾರೆ. ವಾರ್ನ್‌ 145 ಪಂದ್ಯಗಳ 273 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರೆ, ಅಶ್ವಿನ್‌ ಕೇವಲ 101 ಪಂದ್ಯಗಳ 191 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಬರೋಬ್ಬರಿ 67 ಬಾರಿ 5+ ವಿಕೆಟ್‌ ಪಡೆದಿರುವ ಶ್ರೀಲಂಕಾದ ಮುರಳೀಧರನ್‌ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ನ್ಯೂಜಿಲೆಂಡ್‌ನ ರಿಚರ್ಡ್‌ ಹಾಡ್ಲೀ 36, ಅನಿಲ್‌ ಕುಂಬ್ಳೆ 35 ಬಾರಿ ಈ ಸಾಧನೆ ಮಾಡಿದ್ದಾರೆ.

ಅಶ್ವಿನ್‌ 4ನೇ ಬಾರಿ ಶತಕ, 5+ ವಿಕೆಟ್‌

ಆರ್‌.ಅಶ್ವಿನ್‌ 4ನೇ ಬಾರಿ ಟೆಸ್ಟ್‌ ಪಂದ್ಯವೊಂದರಲ್ಲಿ ಶತಕ ಹಾಗೂ 5+ ವಿಕೆಟ್‌ ಕಿತ್ತ ಸಾಧನೆ ಮಾಡಿದರು. ಅವರು ಈ ಸಾಧಕರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ನ ಇಯಾನ್‌ ಬೋಥಂ 5 ಬಾರಿ ಈ ಸಾಧನೆ ಮಾಡಿದ್ದಾರೆ.

10ನೇ ಪ್ರಶಸ್ತಿ: ಆರ್‌.ಅಶ್ವಿನ್‌ ಟೆಸ್ಟ್‌ನಲ್ಲಿ 10ನೇ ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಹೆಚ್ಚು ಬಾರಿ ಈ ಸಾಧನೆ ಮಾಡಿದವರ ಪಟ್ಟಿಯಲ್ಲಿ ಜಂಟಿ 3ನೇ ಸ್ಥಾನ. ಸಚಿನ್‌ 14, ದ್ರಾವಿಡ್‌ 11 ಬಾರಿ ಈ ಸಾಧನೆ ಮಾಡಿದ್ದಾರೆ. 

ಸೆಂಚುರಿ, 5+ ವಿಕೆಟ್‌: ಅಶ್ವಿನ್‌ ಅತಿ ಹಿರಿಯ

ಆರ್‌.ಅಶ್ವಿನ್‌ ಟೆಸ್ಟ್‌ ಪಂದ್ಯವೊಂದರಲ್ಲಿ ಶತಕ ಹಾಗೂ 5+ ವಿಕೆಟ್‌ ಕಿತ್ತ ಅತಿ ಹಿರಿಯ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು. ಅವರಿಗೆ ಈಗ 38 ವರ್ಷ, 2 ದಿನ. 1962ರಲ್ಲಿ ಭಾರತದ ಪಾಲಿ ಉಮ್ರಿಗರ್‌ ತಮಗೆ 36 ವರ್ಷವಾಗಿದ್ದಾಗ ವೆಸ್ಟ್‌ಇಂಡೀಸ್‌ ವಿರುದ್ಧ ಪಂದ್ಯದಲ್ಲಿ ಶತಕ ಹಾಗೂ 5 ವಿಕೆಟ್‌ ಗೊಂಚಲು ಪಡೆದಿದ್ದರು.

ಐದು ವಿಕೆಟ್‌ ಗೊಂಚಲು ಪಡೆದ ಭಾರತದ ಹಿರಿಯ

ಅಶ್ವಿನ್‌(38 ವರ್ಷ) ಟೆಸ್ಟ್‌ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ ಗೊಂಚಲು ಪಡೆದ ಭಾರತದ ಅತಿ ಹಿರಿಯ ಆಟಗಾರ ಎನಿಸಿಕೊಂಡರು. 1955ರಲ್ಲಿ ವೀನೂ ಮಂಕಡ್‌ ತಮಗೆ 36 ವರ್ಷ, 306 ದಿನಗಳಾಗಿದ್ದಾಗ ಪಾಕಿಸ್ತಾನ ವಿರುದ್ಧ 5+ ವಿಕೆಟ್ ಕಬಳಿಸಿದ್ದರು.