ಆಸ್ಟ್ರೇಲಿಯನ್‌ ಓಪನ್‌: ವಿಶ್ವ ನಂ.1 ಸ್ವಿಯಾಟೆಕ್‌ಗೆ ಸೋಲಿನ ಶಾಕ್‌!

| Published : Jan 21 2024, 01:30 AM IST / Updated: Jan 21 2024, 02:48 PM IST

sviatek
ಆಸ್ಟ್ರೇಲಿಯನ್‌ ಓಪನ್‌: ವಿಶ್ವ ನಂ.1 ಸ್ವಿಯಾಟೆಕ್‌ಗೆ ಸೋಲಿನ ಶಾಕ್‌!
Share this Article
  • FB
  • TW
  • Linkdin
  • Email

ಸಾರಾಂಶ

4 ಗ್ರ್ಯಾನ್‌ಸ್ಲಾಂ ವಿಜೇತೆ ಪೋಲೆಂಡ್‌ನ ಇಗಾ ಸ್ವಿಯಾಟೆಕ್‌ಗೆ 3ನೇ ಸುತ್ತಲ್ಲಿ ಸೋಲು ಎದರುರಾಯಿತು. ಲಿಂಡಾ ನೊಸ್ಕೋವಾ ವಿರುದ್ಧ 6-3, 3-6, 4-6 ಸೆಟ್‌ಗಳಲ್ಲಿ ಪರಾಭವಗೊಂಡರು.

ಮೆಲ್ಬರ್ನ್‌: 4 ಗ್ರ್ಯಾನ್‌ಸ್ಲಾಂಗಳ ಒಡತಿ, ಪೋಲೆಂಡ್‌ನ ಇಗಾ ಸ್ವಿಯಾಟೆಕ್‌ರ ಚೊಚ್ಚಲ ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಟೂರ್ನಿ ಚಾಂಪಿಯನ್‌ ಕನಸು ಮತ್ತೊಮ್ಮೆ ಭಗ್ನಗೊಂಡಿದೆ.

ಶನಿವಾರ ಮಹಿಳಾ ಸಿಂಗಲ್ಸ್‌ನಲ್ಲಿ ವಿಶ್ವ ನಂ.1 ಸ್ವಿಯಾಟೆಕ್‌ ಅವರು ಚೆಕ್‌ ಗಣರಾಜ್ಯದ 19 ವರ್ಷದ ಲಿಂಡಾ ನೊಸ್ಕೋವಾ ವಿರುದ್ಧ 6-3, 3-6, 4-6 ಸೆಟ್‌ಗಳಲ್ಲಿ ಪರಾಭವಗೊಂಡರು. 

ಶ್ರೇಯಾಂಕ ರಹಿತೆ ಆಟಗಾರ್ತಿ ವಿರುದ್ಧ ಆರಂಭಿಕ ಸುತ್ತಿನಲ್ಲಿ ಗೆದ್ದ ಹೊರತಾಗಿಯೂ ಬಳಿಕ 2 ಸೆಟ್‌ಗಳಲ್ಲಿ ಎದುರಾದ ಪೈಪೋಟಿಯನ್ನು ಮೆಟ್ಟಿನಿಲ್ಲಲು ಇಗಾಗೆ ಸಾಧ್ಯವಾಗಲಿಲ್ಲ. 

ನೊಸ್ಕೋವಾ ಇದೇ ಮೊದಲ ಬಾರಿ ಗ್ರ್ಯಾನ್‌ಸ್ಲಾಂನಲ್ಲಿ 4ನೇ ಸುತ್ತಿಗೇರಿದರು. ಇದೇ ವೇಳೆ 2 ಬಾರಿ ಚಾಂಪಿಯನ್‌ ವಿಕ್ಟೋರಿಯಾ ಅಜರೆಂಕಾ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.-

ಆಲ್ಕರಜ್‌ ಪ್ರಿ ಕ್ವಾರ್ಟರ್‌ಗೆ
ಟೆನಿಸ್‌ನ ಯುವ ಸೂಪರ್‌ ಸ್ಟಾರ್‌, ಹಾಲಿ ವಿಂಬಲ್ಡನ್‌ ಚಾಂಪಿಯನ್‌ ಕಾರ್ಲೊಸ್‌ ಆಲ್ಕರಜ್‌ ಪುರುಷರ ಸಿಂಗಲ್ಸ್‌ನಲ್ಲಿ ಪ್ರಿ ಕ್ವಾರ್ಟರ್‌ಗೇರಿದ್ದಾರೆ. 3ನೇ ಸುತ್ತಿನಲ್ಲಿ ತಮ್ಮ ಎದುರಾಳಿ, ಚೀನಾದ ಶಾಂಗ್‌ ಗಾಯಗೊಂಡು ಹೊರನಡೆದ ಕಾರಣ ವಿಶ್ವ ನಂ.2, ಸ್ಪೇನ್‌ನ 19ರ ಆಲ್ಕರಜ್‌ 4ನೇ ಸುತ್ತಿಗೇರಿದರು. ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌ ಕೂಡಾ ಪ್ರಿ ಕ್ವಾರ್ಟರ್‌ಗೇರಿದರು.-

ಶ್ರೀರಾಮ್‌ಗೆ 2ನೇ ಸುತ್ತಿನಲ್ಲಿ ಸೋಲು
ಪುರುಷರ ಡಬಲ್ಸ್‌ನಲ್ಲಿ ರೊಮಾನಿಯಾದ ವಿಕ್ಟರ್‌ ಕಾರ್ನಿಯಾ ಜೊತೆಗೂಡಿ ಕಣಕ್ಕಿಳಿದಿದ್ದ ಭಾರತದ ಶ್ರೀರಾಮ್‌ ಬಾಲಾಜಿ 2ನೇ ಸುತ್ತಿನಲ್ಲಿ ಸೋತು ಹೊರಬಿದ್ದಿದ್ದಾರೆ. 

ಅವರು ಎಲ್‌ ಸಾಲ್ವಡಾರ್‌ನ ಮಾರ್ಕೆಲೊ-ಕ್ರೊವೇಷಿಯಾದ ಮೇಟ್‌ ಪಾವಿಚ್‌ ಜೋಡಿ ವಿರುದ್ಧ 3-6, 3-6ರಲ್ಲಿ ಸೋಲನುಭವಿಸಿದರು. ಇದೇ ವೇಳೆ ಹಂಗೇರಿಯ ಟೈಮಿಯಾ ಬಾಬೊಸ್‌ ಜೊತೆ ಮಿಶ್ರ ಡಬಲ್ಸ್‌ನಲ್ಲಿ ಕಣಕ್ಕಿಳಿಯಬೇಕಿದ್ದ ಕರ್ನಾಟಕದ ರೋಹನ್‌ ಬೋಪಣ್ಣ, ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ರೋಹನ್‌-ಆಸ್ಟ್ರೇಲಿಯಾದ ಎಬ್ಡೆನ್‌ ಪುರುಷರ ಡಬಲ್ಸ್‌ನಲ್ಲಿ 3ನೇ ಸುತ್ತಿಗೇರಿದ್ದಾರೆ.