ಬ್ಯಾಡ್ಮಿಂಟನ್‌: ಚೀನಾ ವಿರುದ್ಧ ಭಾರತಕ್ಕೆ 2-3ರಿಂದ ಸೋಲು

| Published : Feb 16 2024, 01:46 AM IST

ಸಾರಾಂಶ

ಇಲ್ಲಿ ನಡೆಯುತ್ತಿರುವ ಏಷ್ಯಾ ಬ್ಯಾಡ್ಮಿಂಟನ್‌ ತಂಡ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಪುರುಷರ ತಂಡ ಗುರುವಾರ ಚೀನಾ ವಿರುದ್ಧ 2-3 ಅಂತರದಲ್ಲಿ ಸೋಲನುಭವಿಸಿದೆ.

ಶಾಹ್‌ ಆಲಮ್‌( ಮಲೇಷ್ಯಾ): ಇಲ್ಲಿ ನಡೆಯುತ್ತಿರುವ ಏಷ್ಯಾ ಬ್ಯಾಡ್ಮಿಂಟನ್‌ ತಂಡ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಪುರುಷರ ತಂಡ ಗುರುವಾರ ಚೀನಾ ವಿರುದ್ಧ 2-3 ಅಂತರದಲ್ಲಿ ಸೋಲನುಭವಿಸಿದೆ. ಬುಧವಾರ ಹಾಂಕಾಂಗ್ ವಿರುದ್ಧ 1-4 ಅಂತರದ ಜಯ ಸಾಧಿಸಿರುವ ಭಾರತ, ಈಗಾಗಲೇ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದೆ. ಹಾಗಾಗಿ ಸಾತ್ವಿಕ್ ಮತ್ತು ಚಿರಾಗ್‌ಗೆ ವಿಶ್ರಾಂತಿ ನೀಡಲಾಗಿತ್ತು. ಲೀಗ್‌ ಹಂತದಲ್ಲಿ ಚೀನಾವನ್ನು 3-2ರಿಂದ ಮಣಿಸಿ ಕ್ವಾರ್ಟರ್‌ಗೇರಿರುವ ಮಹಿಳಾ ತಂಡಕ್ಕೆ ಅಂತಿಮ 8ರ ಘಟ್ಟದಲ್ಲಿ ಶುಕ್ರವಾರ ಬಲಿಷ್ಠ ಮಲೇಷ್ಯಾ ಎದುರಾಗಲಿದೆ.ಸಿಂಗಲ್ಸ್‌ನಲ್ಲಿ ತಾರಾ ಆಟಗಾರ, ವಿಶ್ವ ನಂ.7 ಎಚ್‌.ಎಸ್‌.ಪ್ರಣಯ್‌, ವಿಶ್ವ ನಂ.16 ವೆಂಗ್‌ ಹಾಂಗ್‌ ಯಾಂಗ್‌ ವಿರುದ್ಧ 6-21, 21-18, 21-19ರಿಂದ ಗೆಲುವು ಸಾಧಿಸುವ ಮೂಲಕ ಭಾರತಕ್ಕೆ 1-0 ಮುನ್ನಡೆ ಒದಗಿಸಿದರು. ಡಬಲ್ಸ್‌ನಲ್ಲಿ ಭಾರತದ ಎಂ.ಆರ್‌.ಅರ್ಜುನ್‌-ಧ್ರುವ್‌ ಕಪಿಲ ವಿರುದ್ಧ ಜಯಸಾಧಿಸಿದ ಚೆನ್‌ ಯಾಂಗ್‌- ಲಿಯು ಯಿನ್‌ 1-1ರಿಂದ ಸಮಬಲ ಸಾಧಿಸುವಲ್ಲಿ ನೆರವಾದರು.ಕಾಮನ್‌ವೆಲ್ತ್‌ ಚಾಂಪಿಯನ್‌ ಲಕ್ಷ್ಯ ಸೇನ್‌ ಲೆಯಿ ಕ್ಸಿ ವಿರುದ್ಧ 21-11, 21-16ರಿಂದ ಜಯ ಸಾಧಿಸುವ ಮೂಲಕ ಭಾರತಕ್ಕೆ 2-1ರಿಂದ ಮುನ್ನಡೆ ತಂದುಕೊಟ್ಟರು. ನಂತರ ನಡೆದ ಮತ್ತೊಂದು ಡಬಲ್ಸ್‌ನಲ್ಲಿ ಸೂರಜ್‌ ಗೋಲಾ-ಪೃಥ್ವಿ ರಾಯ್‌ ವಿರುದ್ಧ ಗೆದ್ದ ರೆನ್‌ ಕ್ಸಿಂಗ್ ಯೂ ಮತ್ತು ಕ್ಸಿಯಿ ಹೊ ಜೋಡಿಯೂ ಚೀನಾಕ್ಕೆ 2-2 ಸಮಬಲ ಸಾಧಿಸಲು ನೆರವಾಯಿತು.ರಾಷ್ಟ್ರೀಯ ಚಾಂಪಿಯನ್‌ ಚಿರಾಗ್‌ ಸೇನ್‌, ವಾಂಗ್‌ ಝೆಂಗ್‌ ಕ್ಸಿಂಗ್‌ ವಿರುದ್ಧ 15-21, 16-21ರಿಂದ ಸೋಲು ಕಂಡರು. ಈ ಜಯದ ಮೂಲಕ ಚೀನಾ 3-2ರಿಂದ ಗೆದ್ದು ಬೀಗಿತು.