ಸಾಯಿರಾಜ್‌ ಬಹುತುಲೆ ಹಂಗಾಮಿ ಬೌಲಿಂಗ್‌ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಲಂಕಾ ಸರಣಿ ಬಳಿಕ ಖಾಯಂ ಕೋಚ್‌ ನೇಮಕವಾಗಲಿದೆ.

ನವದೆಹಲಿ: ಶ್ರೀಲಂಕಾ ವಿರುದ್ಧ ಜುಲೈ 27ರಿಂದ ಆರಂಭಗೊಳ್ಳಲಿರುವ ಸರಣಿಗೆ ಭಾರತ ತಂಡಕ್ಕೆ ಸಾಯಿರಾಜ್‌ ಬಹುತುಲೆ ಬೌಲಿಂಗ್‌ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿದುಬಂದಿದೆ. ಭಾರತ ತಂಡದ ಮಾಜಿ ಬೌಲರ್‌ ಆಗಿರುವ 51 ವರ್ಷದ ಬಹುತುಲೆ ಕಳೆದ 3 ವರ್ಷಗಳಿಂದ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ)ಯಲ್ಲಿ ಬೌಲಿಂಗ್‌ ಕೋಚ್‌ ಆಗಿದ್ದಾರೆ. 

ಅವರು ಸೋಮವಾರ ಭಾರತ ತಂಡದ ಜೊತೆ ಶ್ರೀಲಂಕಾ ಪ್ರಯಾಣಿಸಲಿದ್ದಾರೆ ಎಂದು ವರದಿಯಾಗಿದೆ.ಬಹುತುಲೆ 1997-2003ರ ಅವಧಿಯಲ್ಲಿ 2 ಟೆಸ್ಟ್‌, 8 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಅವರು 188 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದಾರೆ. ಈ ಮೊದಲು ಅವರು ದೇಸಿ ಕ್ರಿಕೆಟ್‌ನಲ್ಲಿ ವಿದರ್ಭ, ಕೇರಳ, ಗುಜರಾತ್‌ ಹಾಗೂ ಬಂಗಾಳ ತಂಡಗಳಲ್ಲಿ ಕೋಚ್‌ ಆಗಿ ಸೇವೆ ಸಲ್ಲಿಸಿದ್ದಾರೆ. ಅವರು ಐಪಿಎಲ್‌ನ ರಾಜಸ್ಥಾನ ತಂಡದ ಬೌಲಿಂಗ್‌ ಕೋಚ್‌ ಆಗಿದ್ದರು. ಶ್ರೀಲಂಕಾ ಸರಣಿ ಬಳಿಕ ಬಿಸಿಸಿಐ ಭಾರತ ತಂಡಕ್ಕೆ ಖಾಯಂ ಬೌಲಿಂಗ್ ನೇಮಕ ಮಾಡುವ ನಿರೀಕ್ಷೆಯಿದೆ. ದ.ಆಫ್ರಿಕಾ ಮೊರ್ನೆ ಮಾರ್ಕೆಲ್‌ ಕೋಚ್‌ ಹುದ್ದೆಯ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.