ಡೇವಿಸ್‌ ಕಪ್‌ ವಿಶ್ವ ಗುಂಪು-1ರ ಪಂದ್ಯದಲ್ಲಿ ಭಾರತ ಬಲಿಷ್ಠ ಸ್ವೀಡನ್‌ ವಿರುದ್ಧ ಮೊದಲ ದಿನ ಹಿನ್ನಡೆ

| Published : Sep 15 2024, 01:49 AM IST / Updated: Sep 15 2024, 04:07 AM IST

ಸಾರಾಂಶ

ವಿಶ್ವ ಗುಂಪು-1ರ ಪಂದ್ಯದಲ್ಲಿ ಭಾರತಕ್ಕೆ ಬಲಿಷ್ಠ ಸ್ವೀಡನ್‌ ಎದುರಾಳಿ. ಮೊದಲೆರಡು ಸಿಂಗಲ್ಸ್‌ ಪಂದ್ಯಗಳಲ್ಲಿ. ಸ್ವೀಡನ್‌ ವಿರುದ್ಧದ ಈ ಹಿಂದಿನ 5 ಮುಖಾಮುಖಿಗಳಲ್ಲೂ ಸೋತಿರುವ ಭಾರತ.

ಸ್ಟಾಕ್‌ಹೋಮ್‌: ಡೇವಿಸ್‌ ಕಪ್‌ ವಿಶ್ವ ಗುಂಪು-1ರ ಪಂದ್ಯದಲ್ಲಿ ಭಾರತ ಬಲಿಷ್ಠ ಸ್ವೀಡನ್‌ ವಿರುದ್ಧ ಮೊದಲ ದಿನ ಎರಡೂ ಸಿಂಗಲ್ಸ್‌ ಪಂದ್ಯಗಳನ್ನು ಸೋತು, 0-2ರ ಹಿನ್ನಡೆ ಅನುಭವಿಸಿದೆ.

ಮೊದಲ ಸಿಂಗಲ್ಸ್‌ನಲ್ಲಿ ಎನ್‌.ಶ್ರೀರಾಮ್‌ ಬಾಲಾಜಿ, ಎಲಿಯಸ್‌ ಎಮೆರ್‌ ವಿರುದ್ಧ 4-6, 2-6 ನೇರ ಸೆಟ್‌ಗಳಲ್ಲಿ ಸೋಲುಂಡರು. 2ನೇ ಸಿಂಗಲ್ಸ್‌ನಲ್ಲಿ ವಿಶ್ವ ರ್‍ಯಾಂಕಿಂಗ್‌ನಲ್ಲಿ ತಮಗಿಂತ ಕೆಳಗಿರುವ, ದಿಗ್ಗಜ ಬೊರ್ನ್‌ ಬೊರ್ಗ್‌ರ ಪುತ್ರ ಲಿಯೋ ಬೊರ್ಗ್‌ ವಿರುದ್ಧ ರಾಮ್‌ಕುಮಾರ್‌ ರಾಮನಾಥನ್‌ ಪರಾಭವಗೊಂಡರು. ವಿಶ್ವ ನಂ.603 ಲಿಯೋಗೆ ವಿಶ್ವ ನಂ.189 ರಾಮ್‌ಕುಮಾರ್‌ 3-6, 3-6ರಲ್ಲಿ ಶರಣಾದರು.

ಭಾರತದ ಅಗ್ರ ಸಿಂಗಲ್ಸ್‌ ಆಟಗಾರ ಸುಮಿತ್‌ ನಗಾಲ್‌ ಬೆನ್ನು ನೋವಿನ ಕಾರಣ, ಈ ಮುಖಾಮುಖಿಯಿಂದ ಹಿಂದೆ ಸರಿದ ಕಾರಣ ಡಬಲ್ಸ್‌ ಆಟಗಾರ ಶ್ರೀರಾಮ್‌ ಸಿಂಗಲ್ಸ್‌ ವಿಭಾಗದಲ್ಲಿ ಆಡಬೇಕಾಯಿತು.

ಭಾನುವಾರ ಡಬಲ್ಸ್‌ ಹಾಗೂ ರಿವರ್ಸ್‌ ಸಿಂಗಲ್ಸ್‌ ಪಂದ್ಯಗಳು ನಡೆಯಲಿದ್ದು, ಸ್ವೀಡನ್‌ ವಿರುದ್ಧ ಭಾರತ ಚೊಚ್ಚಲ ಗೆಲುವು ದಾಖಲಿಸಬೇಕಿದ್ದರೆ, ಎಲ್ಲಾ 3 ಪಂದ್ಯಗಳನ್ನೂ ಗೆಲ್ಲಬೇಕು. ಡೇವಿಸ್‌ ಕಪ್‌ನಲ್ಲಿ ಈ ಹಿಂದೆ ಉಭಯ ತಂಡಗಳು 5 ಬಾರಿ ಮುಖಾಮುಖಿಯಾಗಿದ್ದು, ಎಲ್ಲಾ 5 ಪಂದ್ಯಗಳಲ್ಲೂ ಸ್ವೀಡನ್‌ ಗೆದ್ದಿದೆ.