ಸಾರಾಂಶ
ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್(ಡಬ್ಲ್ಯುಎಫ್‌ಐ) ಮೇಲೆ ಮತ್ತೆ ನಿಷೇಧ ಹೇರಬೇಕೆಂದು ಒಲಿಂಪಿಕ್ಸ್ ಪದಕ ವಿಜೇತ ತಾರಾ ಕುಸ್ತಿಪಟು ಬಜರಂಗ್ ಪೂನಿಯಾ, ಜಾಗತಿಕ ಕುಸ್ತಿ ಸಂಸ್ಥೆಗೆ ಮನವಿ ಮಾಡಿದ್ದಾರೆ.
‘ನಿಷೇಧ ತೆರವಿನಿಂದ ಕುಸ್ತಿಪಟುಗಳು ಅಪಾಯದಲ್ಲಿದ್ದಾರೆ. ಡಬ್ಲ್ಯುಎಫ್‌ಐ ಸದಸ್ಯರು ದೌರ್ಜನ್ಯ ನಡೆಸುತ್ತಾರೆ’ ಎಂದು ಬಜರಂಗ್ ಆರೋಪ ಮಾಡಿದ್ದಾರೆ.
ಗುರುವಾರ ತಾವು ಜಾಗತಿಕ ಸಂಸ್ಥೆಗೆ ಬರೆದಿರುವ ಪತ್ರವನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿರುವ ಬಜರಂಗ್, ‘ಭಾರತದ ಕುಸ್ತಿಪಟುಗಳು ಅನ್ಯಾಯ, ದೌರ್ಜನ್ಯದ ವಿರುದ್ಧ ಹೋರಾಡುತ್ತಿದ್ದಾರೆ.
ಅವರ ಬೇಡಿಕೆಗಳಯ ನ್ಯಾಯ ಸಮ್ಮತವಾಗಿದೆ. ನಮ್ಮ ಕುಸ್ತಿಪಟುಗಳನ್ನು ಜಾಗತಿಕ ಸಂಸ್ಥೆ ಬೆಂಬಲಿಸಬೇಕು.
ಭಾರತದಲ್ಲಿ ನ್ಯಾಯಯುತ ಕುಸ್ತಿ ಚಟುವಟಿಕೆ ನಡೆಸಬೇಕೆಂಬ ನಮ್ಮ ಕೋರಿಕೆಯನ್ನು ಪರಿಗಣಿಸಬೇಕು ಮತ್ತು ಡಬ್ಲ್ಯುಎಫ್‌ಐ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.
ಚುನಾವಣೆ ವಿಳಂಬ ಕಾರಣಕ್ಕೆ ಕಳೆದ ಆಗಸ್ಟ್‌ನಲ್ಲಿ ಹೇರಲಾಗಿದ್ದ ನಿಷೇಧವನ್ನು ಇತ್ತೀಚೆಗಷ್ಟೇ ಜಾಗತಿಕ ಸಂಸ್ಥೆಯು ತೆರವುಗೊಳಿಸಿತ್ತು.
ಇದಕ್ಕಾಗಿ ಡಬ್ಲ್ಯುಎಫ್‌ಐ ನೂತನ ಅಧ್ಯಕ್ಷ ಸಂಜಯ್ ಸಿಂಗ್ ಸೆಟ್ಟಿಂಗ್ ಮಾಡಿದ್ದಾರೆ ಎಂದು ಬುಧವಾರ ಕುಸ್ತಿಪಟುಗಳು ಆರೋಪಿಸಿದ್ದರು.