ಸಾರಾಂಶ
ರಾವಲ್ಪಿಂಡಿ: ಬಾಂಗ್ಲಾದೇಶ ವಿರುದ್ಧ ತನ್ನದೇ ತವರಿನಲ್ಲಿ ಪಾಕಿಸ್ತಾನ ಹೀನಾಯ ಸೋಲಿನ ಮುಖಭಂಗಕ್ಕೊಳಗಾಗಿದೆ. ಭಾನುವಾರ ಕೊನೆಗೊಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ 10 ವಿಕೆಟ್ ಹೀನಾಯ ಸೋಲನುಭವಿಸಿತು.
ಈ ಮೂಲಕ ಟೆಸ್ಟ್‌ನಲ್ಲಿ ಬಾಂಗ್ಲಾ ತಂಡ ಪಾಕ್ ವಿರುದ್ಧ ಮೊದಲ ಬಾರಿ ಗೆಲುವು ಸಾಧಿಸಿತು.ಮೊದಲ ಇನ್ನಿಂಗ್ಸ್‌ನಲ್ಲಿ ಪಾಕ್ 6 ವಿಕೆಟ್‌ಗೆ 448 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಇದಕ್ಕುತ್ತರವಾಗಿ ಬಾಂಗ್ಲಾ 565 ರನ್ ಗಳಿಸಿ, 117 ರನ್ ಮುನ್ನಡೆ ಪಡೆದಿತ್ತು.
ಬಳಿಕ 2ನೇ ಇನ್ನಿಂಗ್ಸ್ ಆರಂಭಿಸಿದ್ದ ಪಾಕ್ 4ನೇ ದಿನದಂತ್ಯಕ್ಕೆ 1 ವಿಕೆಟ್‌ಗೆ 23 ರನ್ ಗಳಿಸಿತ್ತು. ಆದರೆ ಭಾನುವಾದ ಬ್ಯಾಟಿಂಗ್ ವೈಫಲ್ಯಕ್ಕೆ ಗುರಿಯಾಗಿ ಕೇವಲ 146 ರನ್‌ಗೆ ಸರ್ವಪತನ ಕಂಡಿತು. ಮೆಹಿದಿ ಹಸನ್ ಮೀರಾಜ್ 4, ಶಕೀಬ್ ಹಸನ್ 3 ವಿಕೆಟ್ ಕಬಳಿಸಿದರು. 30 ರನ್‌ಗಳ ಸುಲಭ ಗುರಿ ಪಡೆದ ಬಾಂಗ್ಲಾ 6.3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ ಜಯಗಳಿಸಿತು. ಪಾಕ್ ಇದೇ ಮೊದಲ ಬಾರಿ ತವರಿನಲ್ಲಿ 10 ವಿಕೆಟ್‌ಗಳ ಸೋಲಿನ ರುಚಿ ಅನುಭವಿಸಿತು.
ಶ್ರೀಲಂಕಾ ವಿರುದ್ಧ ಇಂಗ್ಲೆಂಡ್‌ಗೆ ಜಯ
ಮ್ಯಾಂಚೆಸ್ಟರ್: ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 5 ವಿಕೆಟ್ ಗೆಲುವು ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು. ಗೆಲುವಿನ 205 ರನ್ ಗುರಿ ಪಡೆದಿದ್ದ ಇಂಗ್ಲೆಂಡ್ ಒಂದು ಹಂತದಲ್ಲಿ 70 ರನ್‌ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ ಜೋ ರೂಟ್(62) ಹಾಗೂ ಹ್ಯಾರಿ ಬ್ರೂಕ್(32) ತಂಡಕ್ಕೆ ಗೆಲುವು ತಂದುಕೊಟ್ಟರು.
ಮೊದಲ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ 236ಕ್ಕೆ ಆಲೌಟಾಗಿದ್ದರೆ, ಇಂಗ್ಲೆಂಡ್ 358 ರನ್ ಗಳಿಸಿ ಇನ್ನಿಂಗ್ಸ್ ಮುನ್ನಡೆ ಸಾಧಿಸಿತ್ತು. ಬಳಿಕ 2ನೇ ಇನ್ನಿಂಗ್ಸ್‌ನಲ್ಲಿ ತೀವ್ರ ಪ್ರತಿರೋಧ ತೋರಿದ್ದ ಶ್ರೀಲಂಕಾ 326 ರನ್ ಕಲೆಹಾಕಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಆಕರ್ಷಕ ಶತಕ, 2ನೇ ಇನ್ನಿಂಗ್ಸ್‌ನಲ್ಲಿ 39 ರನ್ ಸಿಡಿಸಿದ ಜೆಮೀ ಸ್ಮಿತ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. 2ನೇ ಪಂದ್ಯ ಆ.29ಕ್ಕೆ ಆರಂಭಗೊಳ್ಳಲಿದೆ.
;Resize=(128,128))
;Resize=(128,128))
;Resize=(128,128))