ತವರಲ್ಲೇ ಗೆಲ್ಲದ ಪಾಕಿಸ್ತಾನ : ಬಾಂಗ್ಲಾ ವಿರುದ್ಧ ಐತಿಹಾಸಿಕ ಟೆಸ್ಟ್‌ ಸರಣಿ- ಸೋಲಿನ ಮುಖಭಂಗ

| Published : Sep 04 2024, 01:49 AM IST / Updated: Sep 04 2024, 04:40 AM IST

ಸಾರಾಂಶ

2-0 ಐತಿಹಾಸಿಕ ಟೆಸ್ಟ್‌ ಸರಣಿ ಗೆದ್ದ ಬಾಂಗ್ಲಾ. ಮೊದಲ ಪಂದ್ಯದಲ್ಲಿ 10 ವಿಕೆಟ್‌ಗಳಿಂದ ಗೆದ್ದಿದ್ದ ಬಾಂಗ್ಲಾದೇಶ. ಪಾಕಿಸ್ತಾನ ತವರಿನಲ್ಲಿ ಆಡಿದ ಕೊನೆ 10 ಟೆಸ್ಟ್‌ ಪಂದ್ಯದಲ್ಲಿ ಗೆದ್ದೇ ಇಲ್ಲ.

ರಾವಲ್ಪಿಂಡಿ: ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶ ಐತಿಹಾಸಿಕ ಟೆಸ್ಟ್‌ ಸರಣಿ ಗೆದ್ದಿದೆ. ಆತಿಥೇಯ ತಂಡದದ 2ನೇ ಪಂದ್ಯದಲ್ಲಿ 6 ವಿಕೆಟ್‌ ಗೆಲುವು ಸಾಧಿಸಿದ ಬಾಂಗ್ಲಾದೇಶ, 2 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಕೈವಶಪಡಿಸಿಕೊಂಡಿತು.

 ಈ ಮೂಲಕ ಪಾಕ್‌ ವಿರುದ್ಧ ಚೊಚ್ಚಲ ಟೆಸ್ಟ್‌ ಸರಣಿ ಗೆದ್ದ ಸಾಧನೆ ಮಾಡಿತು. ವಿದೇಶಿ ನೆಲದಲ್ಲಿ ತಂಡಕ್ಕಿದು 2ನೇ ಟೆಸ್ಟ್‌ ಸರಣಿ ಗೆಲುವು. 2009ರಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ ಗೆದ್ದಿತ್ತು.ಗೆಲುವಿಗೆ 185 ರನ್‌ ಗುರಿ ಪಡೆದಿದ್ದ ಬಾಂಗ್ಲಾ, 4ನೇ ದಿನದಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೇ 42 ರನ್‌ ಕಲೆಹಾಕಿತ್ತು. ಕೊನೆ ದಿನವಾದ ಮಂಗಳವಾರ ಇನ್ನೂ 143 ರನ್‌ ಅಗತ್ಯವಿತ್ತು. 

ಜಾಕಿರ್‌ ಹಸನ್‌(40), ನಜ್ಮುಲ್‌ ಹೊಸೈನ್(38), ಮೋಮಿನುಲ್ ಹಕ್‌(34) ತಂಡವನ್ನು ಗೆಲ್ಲಿಸಿದರು. ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನ 274 ರನ್‌ ಗಳಿಸಿದ್ದರೆ, ಬಾಂಗ್ಲಾದೇಶ 262 ರನ್‌ ಗಳಿಸಿ ಇನ್ನಿಂಗ್ಸ್‌ ಹಿನ್ನಡೆ ಅನುಭವಿಸಿತ್ತು. ಆದರೆ 2ನೇ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನವನ್ನು ಬಾಂಗ್ಲಾ ತಂಡ ಕೇವಲ 172 ರನ್‌ಗೆ ನಿಯಂತ್ರಿಸಿತ್ತು.

ತವರಿನ ಕೊನೆ 10 ಟೆಸ್ಟ್‌ ಪಂದ್ಯದಲ್ಲಿ ಗೆದ್ದಿಲ್ಲ ಪಾಕ್‌!

ಯಾವುದೇ ತಂಡ ತನ್ನ ತವರಿನಲ್ಲಿ ಹೆಚ್ಚಿನ ಪ್ರಾಬಲ್ಯ ಸಾಧಿಸುವುದು ಸಹಜ. ಆದರೆ ಪಾಕ್‌ ಪಾಲಿಗೆ ತವರಲ್ಲೂ ಗೆಲುವಿನ ಅದೃಷ್ಟವಿಲ್ಲ. ತಂಡ ತವರಿನಲ್ಲಿ ನಡೆದ ಕೊನೆ 10 ಟೆಸ್ಟ್‌ ಪಂದ್ಯಗಳಲ್ಲಿ ಒಂದರಲ್ಲೂ ಗೆದ್ದಿಲ್ಲ. 2021ರ ಡಿಸೆಂಬರ್‌ನಲ್ಲಿ ಕೊನೆ ಬಾರಿ ದ.ಆಫ್ರಿಕಾ ವಿರುದ್ಧ ಗೆದ್ದಿತ್ತು.