ಸಾರಾಂಶ
ನವದೆಹಲಿ: ದೇಸಿ ಕ್ರಿಕೆಟ್ ಅದರಲ್ಲೂ ಮಹಿಳೆಯರ ಟೂರ್ನಿಗಳ ಉತ್ತೇಜನಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮಹತ್ವ ಹೆಜ್ಜೆ ಇಟ್ಟಿದೆ. ಇನ್ನು ಮುಂದೆ ಮಹಿಳೆಯರು ಹಾಗೂ ಕಿರಿಯರ ಕ್ರಿಕೆಟ್ ಟೂರ್ನಿಗಳಲ್ಲಿ ಪಂದ್ಯಶ್ರೇಷ್ಠ, ಸರಣಿ ಶ್ರೇಷ್ಠ ಪ್ರಶಸ್ತಿ ವಿಜೇತರಿಗೆ ನಗದು ಬಹುಮಾನ ನೀಡುವುದಾಗಿ ಘೋಷಿಸಿದೆ.
ಈ ಬಗ್ಗೆ ಸೋಮವಾರ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಸಾಮಾಜಿಕ ತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ‘ನಮ್ಮ ದೇಸಿ ಕ್ರಿಕೆಟ್ ಯೋಜನೆ ಅಡಿಯಲ್ಲಿ ಎಲ್ಲಾ ಮಹಿಳಾ ಮತ್ತು ಕಿರಿಯರ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಪಂದ್ಯಶ್ರೇಷ್ಠ ಹಾಗೂ ಟೂರ್ನಿಯ ಶ್ರೇಷ್ಠ ಆಟಗಾರರಿಗೆ ನಗದು ಬಹುಮಾನ ನೀಡಲಿದ್ದೇವೆ. ಅಲ್ಲದೆ ವಿಜಯ್ ಹಜಾರೆ ಮತ್ತು ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಗಳಲ್ಲಿ ಪಂದ್ಯಶ್ರೇಷ್ಠ ವಿಜೇತರಿಗೆ ನಗದು ನೀಡಲಿದ್ದೇವೆ.
ಈ ಯೋಜನೆ ಮೂಲಕ ದೇಸಿ ಕ್ರಿಕೆಟ್‌ನಲ್ಲಿ ಪ್ರತಿಭೆಗಳನ್ನು ಗುರುತಿಸಿ, ಬೆಳೆಸುವ ಗುರಿ ಇಟ್ಟುಕೊಂಡಿದ್ದೇವೆ. ಇದಕ್ಕಾಗಿ ಅಪೆಕ್ಸ್ ಕೌನ್ಸಿಲ್‌ಗೆ ಹೃತ್ಪೂರ್ವಕ ಧನ್ಯವಾದಗಳು. ಜೈ ಹಿಂದ್’ ಎಂದು ಬರೆದುಕೊಂಡಿದ್ದಾರೆ.ಈ ವರ್ಷದ ದೇಸಿ ಕ್ರಿಕೆಟ್ ಋತು ಮುಂದಿನ ತಿಂಗಳು ದುಲೀಪ್ ಟ್ರೋಫಿ ಮೂಲಕ ಆರಂಭಗೊಳ್ಳಲಿದೆ. ಬಳಿಕ ಅಕ್ಟೋಬರ್‌ನಲ್ಲಿ ಇರಾನಿ ಕಪ್, ರಣಜಿ ಟ್ರೋಫಿ ಶುರುವಾಗಲಿದೆ.