ಸಾರಾಂಶ
ನವದೆಹಲಿ: ತವರಿನಲ್ಲೇ ನ್ಯೂಜಿಲೆಂಡ್ ವಿರುದ್ಧ ಭಾರತದ 0-3 ಅಂತರದ ಟೆಸ್ಟ್ ಸರಣಿ ಸೋಲು ಕೋಚ್ ಗೌತಮ್ ಗಂಭೀರ್ ಅವರ ಹುದ್ದೆ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ.
ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆಲ್ಲಲೇಬೇಕೆಂದು ಬಿಸಿಸಿಐ ಖಡಕ್ ಸೂಚನೆ ನೀಡಿದ್ದು, ಒಂದು ವೇಳೆ ಆಸೀಸ್‌ನಲ್ಲೂ ವೈಫಲ್ಯ ಅನುಭವಿಸಿದರೆ ಟೆಸ್ಟ್ ತಂಡಕ್ಕೆ ಹೊಸ ಕೋಚ್ ನೇಮಿಸಲು ಚಿಂತನೆ ಸಿದ್ಧತೆ ನಡೆಸುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಸದ್ಯ ಗಂಭೀರ್ ಭಾರತ ಟಿ20, ಏಕದಿನ, ಟೆಸ್ಟ್ ತಂಡಕ್ಕೆ ಕೋಚ್ ಆಗಿದ್ದಾರೆ.
ಆದರೆ ಅವರ ಅವಧಿಯಲ್ಲಿ ತಂಡ ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ. ಒಂದು ವೇಳೆ ತಂಡ ಆಸೀಸ್ ಸರಣಿಯಲ್ಲೂ ವೈಫಲ್ಯ ಅನುಭವಿಸಿದರೆ, ಗಂಭೀರ್ ಹುದ್ದೆ ಕಳೆದುಕೊಳ್ಳುವ ಸಾಧ್ಯತೆಯಿದೆ. ಕೇವಲ ಏಕದಿನ, ಟಿ20 ತಂಡಗಳಿಗೆ ಗಂಭೀರ್‌ನ್ನು ಕೋಚ್ ಆಗಿ ಮುಂದುವರಿಸಲಿರುವ ಬಿಸಿಸಿಐ, ಟೆಸ್ಟ್ ತಂಡಕ್ಕೆ ವಿವಿಎಸ್ ಲಕ್ಷ್ಮಣ್‌ರನ್ನು ನೇಮಿಸಲು ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.
ಲಕ್ಷ್ಮಣ್ ಸದ್ಯ ದ.ಆಫ್ರಿಕಾ ಟಿ20 ಸರಣಿಗೆ ಭಾರತದ ಹಂಗಾಮಿ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಕೋಚ್ ಹುದ್ದೆಯ ಬದಲಾವಣೆ ಬಗ್ಗೆ ಬಿಸಿಸಿಐನಲ್ಲಿ ಈಗಾಗಲೇ ಚರ್ಚೆ ಆರಂಭಗೊಂಡಿದ್ದು, ಆಸೀಸ್ ಸರಣಿಯ ಫಲಿತಾಂಶ ಆಧರಿಸಿ ಮತ್ತೆ ಸಭೆ ನಡೆಸಲು ಮಂಡಳಿ ನಿರ್ಧರಿಸಿದೆ ಎಂದು ವರದಿಯಾಗಿದೆ.