ಸಾರಾಂಶ
ದುಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಕಾರ್ಯದರ್ಶಿಯಾಗಿರುವ ಜಯ್ ಶಾ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಗೆ ಮುಖ್ಯಸ್ಥರಾಗಿ ನೇಮಕಗೊಳ್ಳುವ ಬಗ್ಗೆ ಮೂಡಿರುವ ಕುತೂಹಲಕ್ಕೆ ಮಂಗಳವಾರವೇ ತೆರೆ ಬೀಳುವ ಸಾಧ್ಯತೆಯಿದೆ.
ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೆಸರು ಸೂಚಿಸಲು ಸದಸ್ಯ ರಾಷ್ಟ್ರಗಳ ಕ್ರಿಕೆಟ್ ಮಂಡಳಿಗಳಿಗೆ ಅವಕಾಶವಿದೆ. ಹೆಸರು ಸಲ್ಲಿಕೆಗೆ ಮಂಗಳವಾರ ಕೊನೆ ದಿನ. ಒಂದು ವೇಳೆ ಜಯ್ ಶಾ ಐಸಿಸಿ ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಿದರೆ, ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚು. ಐಸಿಸಿ ಸದಸ್ಯ ದೇಶಗಳ ಪೈಕಿ ಬಹುತೇಕರು ಶಾ ಪರವಾಗಿದ್ದಾರೆ.ವರದಿಗಳ ಪ್ರಕಾರ ಶಾ ಹೊರತುಪಡಿಸಿ ಬೇರೆ ಯಾರಿಂದಲೂ ನಾಮಪತ್ರ ಸಲ್ಲಿಕೆಯಾಗುವ ಸಾಧ್ಯತೆ ಕಡಿಮೆ.
ಬೇರೆ ಯಾರಾದರೂ ನಾಮಪತ್ರ ಸಲ್ಲಿಸಿದರೆ ನವೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ. ಸದ್ಯ ಐಸಿಸಿ ಅಧ್ಯಕ್ಷರಾಗಿರುವ ನ್ಯೂಜಿಲೆಂಡ್‌ನ ಗ್ರೆಗ್ ಬಾರ್ಕ್‌ಲೆ ಅವಧಿ ನ.30ಕ್ಕೆ ಕೊನೆಗೊಳ್ಳಲಿದೆ. ಹೊಸ ಅಧ್ಯಕ್ಷರು ಡಿ.1ರಂದು ಅಧಿಕಾರ ಸ್ವೀಕರಿಸಲಿದ್ದಾರೆ.
ರೋಹನ್ ಜೇಟ್ಲಿ ಬಿಸಿಸಿಐ ನೂತನ ಕಾರ್ಯದರ್ಶಿ?
ಜಯ್ ಶಾ ಐಸಿಸಿ ಮುಖ್ಯಸ್ಥರಾಗಿ ಆಯ್ಕೆಯಾದರೆ ಅವರಿಂದ ತೆರವಾಗುವ ಬಿಸಿಸಿಐ ಕಾರ್ಯದರ್ಶಿ ಹುದ್ದೆಗೆ ಡೆಲ್ಲಿ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ರೋಹನ್ ಜೇಟ್ಲಿ ನೇಮಕಗೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಕಾರ್ಯದರ್ಶಿ ಹುದ್ದೆಗೆ ಐಪಿಎಲ್ ಮುಖ್ಯಸ್ಥ ಅರುಣ್ ಧುಮಾಲ್, ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಕೂಡಾ ಕೇಳಿಬಂದಿದ್ದವು. ಆದರೆ ರೇಸ್‌ನಲ್ಲಿ ರೋಹನ್ ಮುಂಚೂಣಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ.