ಸಾರಾಂಶ
ವಿದೇಶಿ ಆಟಗಾರರ ಕಳ್ಳಾಟಕ್ಕೆ ಕಡಿವಾಣ ಹಾಕಲು ಬಿಸಿಸಿಐ ದಿಟ್ಟ ನಿರ್ಧಾರ. ಹರಾಜಿನಲ್ಲಿ ಕಡಿಮೆ ಮೊತ್ತಕ್ಕೆ ಬಿಕರಿಯಾಗಿದ್ದಕ್ಕೆ ಬೇಸರಗೊಂಡು ಟೂರ್ನಿ ಆಡಲು ಬರದಿದ್ದರೆ 2 ವರ್ಷ ಬ್ಯಾನ್.
ಬೆಂಗಳೂರು: ಐಪಿಎಲ್ ಹರಾಜಿನಲ್ಲಿ ಪಾಲ್ಗೊಂಡು, ತಂಡದಿಂದ ಖರೀದಿಸಲ್ಪಟ್ಟ ಬಳಿಕ ಟೂರ್ನಿಗೆ ಆರಂಭಗೊಳ್ಳುವ ಮುನ್ನ ವೈಯಕ್ತಿಕ ಕಾರಣ ನೀಡಿ ಗೈರಾದರೆ ಅಂತಹ ಆಟಗಾರನನ್ನು 2 ವರ್ಷ ಕಾಲ ನಿಷೇಧಗೊಳಿಸುವುದಾಗಿ ಬಿಸಿಸಿಐ ತಿಳಿಸಿದೆ.
ಶನಿವಾರ ನಡೆದ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಂಡಿರುವುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.ಕೆಲ ವಿದೇಶಿ ಆಟಗಾರರು ಹರಾಜಿನಲ್ಲಿ ಕಡಿಮೆ ಮೊತ್ತಕ್ಕೆ ಬಿಕರಿಯಾದ ಬಳಿಕ ವೈಯಕ್ತಿಕ ಕಾರಣ ನೀಡಿ ಟೂರ್ನಿಗೆ ಗೈರಾದ ಉದಾಹರಣೆಗಳು ಇವೆ. ಈ ಕಳ್ಳಾಟಕ್ಕೆ ತಡೆಯೊಡ್ಡುವ ನಿಟ್ಟಿನಲ್ಲಿ ಬಿಸಿಸಿಐ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
ಇದೇ ವೇಳೆ ವಿದೇಶಿ ಆಟಗಾರರು ಮೆಗಾ ಹರಾಜು ಪ್ರಕ್ರಿಯೆಗೆ ನೋಂದಣಿ ಮಾಡಿಕೊಳ್ಳುವುದನ್ನು ಬಿಸಿಸಿಐ ಕಡ್ಡಾಯಗೊಳಿಸಿದೆ. ಮೆಗಾ ಹರಾಜಿಗೆ ನೋಂದಣಿ ಮಾಡಿಕೊಳ್ಳದ ಆಟಗಾರರು ಮುಂದಿನ ವರ್ಷ ಹರಾಜು ಪ್ರಕ್ರಿಯೆಯಿಂದಲೂ ಹೊರಗುಳಿಯಬೇಕಾಗುತ್ತದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.