ಕೇಂದ್ರ ಸರ್ಕಾರ ಲಗಾಮು : ಆರ್‌ಟಿಐ ವ್ಯಾಪ್ತಿಗೆ ಬಿಸಿಸಿಐ?

| N/A | Published : Jul 24 2025, 01:05 AM IST / Updated: Jul 24 2025, 05:27 AM IST

ಸಾರಾಂಶ

ವಿಶ್ವದ ಸಿರಿವಂತ ಕ್ರಿಕೆಟ್‌ ಸಂಸ್ಥೆ ಅಂತಲೇ ಗುರುತಿಸಿಕೊಂಡಿರುವ ಬಿಸಿಸಿಐ ಮೇಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದ್ದು, ಖಾಸಗಿಯಾಗಿಯೇ ಉಳಿದಿರುವ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯನ್ನು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ವ್ಯಾಪ್ತಿಗೆ ಸೇರಿಸಲು ಸಂಸತ್‌ನಲ್ಲಿ ಮಸೂದೆ ಮಂಡಿಸಿದೆ.

ನವದೆಹಲಿ: ವಿಶ್ವದ ಸಿರಿವಂತ ಕ್ರಿಕೆಟ್‌ ಸಂಸ್ಥೆ ಅಂತಲೇ ಗುರುತಿಸಿಕೊಂಡಿರುವ ಬಿಸಿಸಿಐ ಮೇಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದ್ದು, ಖಾಸಗಿಯಾಗಿಯೇ ಉಳಿದಿರುವ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯನ್ನು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ವ್ಯಾಪ್ತಿಗೆ ಸೇರಿಸಲು ಸಂಸತ್‌ನಲ್ಲಿ ಮಸೂದೆ ಮಂಡಿಸಿದೆ.

ಲೋಕಸಭೆಯಲ್ಲಿ ಬುಧವಾರ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ - 2025 ಮಂಡನೆ ಆಗಿದ್ದು, ಈ ಕಾಯ್ದೆ ಅನ್ವಯ ಇನ್ಮುಂದೆ ಬಿಸಿಸಿಐ ಕೂಡ ಆರ್‌ಟಿಐ ಅಧಿನಿಯಮದಡಿ ಸೇರ್ಪಡೆಯಾಗಲಿದೆ. ಇದು ಬಿಸಿಸಿಐಯಲ್ಲಿ ಪಾರದರ್ಶಕತೆಗೆ ಅನುವು ಮಾಡಿಕೊಡಲಿದೆ ಎನ್ನುವ ಕಾರಣಕ್ಕೆ ಸರ್ಕಾರ ಶಿಫಾರಸು ಮಾಡಿದೆ. ಉಭಯ ಸದನಗಳಲ್ಲಿ ಚರ್ಚೆಯಾಗಿ, ಅನುಮೋದನೆ ಸಿಕ್ಕ ಬಳಿಕವೇ ಮಸೂದೆ ಕಾರ್ಯರೂಪಕ್ಕೆ ಬರಲಿದೆ.

ಆರ್‌ಟಿಐ ಕಾನೂನು ಏಕೆ?

ಹೊಸ ಕಾನೂನಿನ ಪ್ರಕಾರ ಎಲ್ಲಾ ಕ್ರೀಡಾ ಸಂಸ್ಥೆಗಳು ಆರ್‌ಟಿಐಗೆ ಒಳಪಡಲಿದ್ದು, ಕರ್ತವ್ಯ, ಅಧಿಕಾರದ ಹೊರತಾಗಿಯೂ ಸಾರ್ವಜನಿಕ ವಲಯದ ಭಾಗ ಎನ್ನುವುದನ್ನು ಸೂಚಿಸಲಿದೆ. ಕ್ರೀಡಾ ಸಚಿವ ಮನ್‌ಸುಖ್‌ ಮಾಂಡವೀಯ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ‘ದೇಶದ ಎಲ್ಲಾ ಕ್ರೀಡಾ ಫೆಡರೇಷನ್‌ಗಳು ಆರ್‌ಟಿಐ ವ್ಯಾಪ್ತಿಗೆ ಒಳಪಡಲಿದೆ. ಇದಕ್ಕೆ ಬಿಸಿಸಿಐ ಹೊರತಲ್ಲ’ ಎಂದಿದ್ದಾರೆ.

ಆರ್‌ಟಿಐ ಅಡಿ ಸೇರ್ಪಡೆಗೆ ಕಾರಣಗಳೇನು?

ಬಿಸಿಸಿಐ ಖಾಸಗಿ ಸಂಸ್ಥೆಯಾಗಿಯೇ ಉಳಿದುಕೊಂಡು ತನ್ನ ಕ್ರೀಡಾ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಆದರೆ ಇದೀಗ ಕೇಂದ್ರವು ಅದನ್ನು ಆರ್‌ಟಿಐನಡಿ ಸೇರಿಸಲು ನಾನಾ ಕಾರಣಗಳೂ ಇವೆ. ಅವುಗಳಲ್ಲಿ ಪ್ರಮುಖ ಕೆಲವು ಇಲ್ಲಿವೆ.

* ಒಲಿಂಪಿಕ್ಸ್‌ಗೆ ಕ್ರಿಕೆಟ್‌ ಸೇರ್ಪಡೆ: 2028ರ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ಗೆ ಕ್ರಿಕೆಟ್‌ ಸೇರ್ಪಡೆಯಾಗಿದೆ. ಇದರೊಂದಿಗೆ ಬಿಸಿಸಿಐ ಭಾರತವನ್ನು ಅಧಿಕೃತವಾಗಿ ಪ್ರತಿನಿಧಿಸಲು ಅವಕಾಶ ಪಡೆದಿದ್ದು, ರಾಷ್ಟ್ರೀಯ ಕ್ರೀಡಾ ಫೆಡರೇಶನ್‌ನ ಮಾನ್ಯತೆ ಸಿಗಲಿದೆ. ಹೀಗಾಗಿ, ಇತರೆ ಫೆಡರೇಶನ್‌ಗಳಿಗೆ ಅನ್ವಯಿಸುವ ನಿಯಮಗಳು ಬಿಸಿಸಿಐಗೂ ಅನ್ವಯಿಸಲಿದೆ.

* 2036ರ ಒಲಿಂಪಿಕ್ಸ್‌ಗೆ ಭಾರತದ ಬಿಡ್‌ : 2036ರ ಒಲಿಂಪಿಕ್ಸ್‌ ಆಯೋಜನೆಗೆ ಬಿಡ್‌ ಸಲ್ಲಿಸಲು ಭಾರತ ಒಲವು ಹೊಂದಿದ್ದು, ಪೂರ್ವಸಿದ್ಧತಾ ಚಟುವಟಿಕೆಗಳ ಭಾಗವಾಗಿ ಕ್ರೀಡಾ ಆಡಳಿತದಲ್ಲಿ ಬದಲಾವಣೆ ತರುವ ಉದ್ದೇಶಕ್ಕಾಗಿ ಮಸೂದೆ ಮಂಡಿಸಿದೆ. ವಿಶ್ವದ ಶ್ರೀಮಂತ ಕ್ರೀಡಾ ಮಂಡಳಿಗಳಲ್ಲಿ ಒಂದಾದ ಬಿಸಿಸಿಐ ಕೂಡ ತನ್ನೊಂದಿಗಿದೆ ಎಂದು ಕೇಂದ್ರ ಸರ್ಕಾರ, ಒಲಿಂಪಿಕ್ಸ್‌ ಆಯೋಜನಾ ಸಮಿತಿಗೆ ತೋರಿಸಲು ಅನುಕೂಲವಾಗಲಿದೆ.

* ಪಾರದರ್ಶಕತೆಗೆ ದೀರ್ಘಕಾಲಿನ ಬೇಡಿಕೆ: ಆರ್‌ಟಿಐ ಅಡಿ ಬಿಸಿಸಿಐನ್ನು ಸೇರಿಸಬೇಕು ಎನ್ನುವ ಒತ್ತಾಯ ಹಿಂದಿನಿಂದಲೂ ಇತ್ತು. 2010ರಲ್ಲಿ ಕ್ರೀಡಾ ಸಚಿವಾಲಯವು ಎಲ್ಲಾ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳನ್ನು ಆರ್‌ಟಿಐ ಕಾಯ್ದೆಯಡಿ ‘ ಸಾರ್ವಜ ನಿಕ ಪ್ರಾಧಿಕಾರ’ ಎಂದು ಘೋಷಿಸಿದಾಗಿನಿಂದ ಆಗ್ರಹ ಕೇಳಿಬರುತ್ತಿತ್ತು.

ಆರ್‌ಟಿಐನಡಿ ಸೇರಲು ಬಿಸಿಸಿಐ ವಿರೋಧ

ಸರ್ಕಾರದಿಂದ ಯಾವುದೇ ಹಣಕಾಸು ನೆರವನ್ನು ಪಡೆಯದ ಬಿಸಿಸಿಐ, ಆರ್ಥಿಕ ಸ್ವಾವಲಂಬನೆ ಹೊಂದಿದೆ. ಹೀಗಾಗಿ, ಮಾಹಿತಿ ಹಕ್ಕು ಕಾಯ್ದೆಯಡಿ ಬರಲು ಬಿಸಿಸಿಐ ಹಿಂದಿನಿಂದಲೂ ವಿರೋಧಿಸಿಕೊಂಡು ಬಂದಿದೆ. ಆದರ ಸದ್ಯ ಹೊಸ ಮಸೂದೆ ಪಾಸ್‌ ಆದರೆ ಬಿಸಿಸಿಐ ಆರ್‌ಟಿಐ ಅಡಿ ಬರಬೇಕಾಗುತ್ತದೆ. ಈ ಸಂಬಂಧ ಬಿಸಿಸಿಐ ಉಪಾಧ್ಯಕ್ಷ ರಾಜೀವ್‌ ಶುಕ್ಲಾ ಮಾತನಾಡಿದ್ದು, ‘ಮಸೂದೆಯಲ್ಲಿ ಯಾವೆಲ್ಲಾ ಅಂಶಗಳು ಇವೆ ಎನ್ನುವುದನ್ನು ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ’ ಎಂದಿದ್ದಾರೆ. ಆರ್‌ಟಿಐನ ಅಡಿ ಬಂದರೆ ಬಿಸಿಸಿಐ

ಈ ವಿಚಾರಗಳ ಬಗ್ಗೆ ಎಚ್ಚರ ವಹಿಸಬೇಕು

1) ತಾನು ನಿರ್ಧಾರಗಳನ್ನು ಕೈಗೊಳ್ಳುವ ವಿಧಾನ.

2) ಹಣಕಾಸು ದಾಖಲೆಗಳ ನಿರ್ವಹಣೆ ಹಾಗೂ ಅವುಗಳಿಗೆ ಸಂಬಂಧಿಸಿದ ಸಾರ್ವಜನಿಕ ಪ್ರಕಟಣೆ

3) ತಂಡಗಳ ಆಯ್ಕೆಗೆ ಅನುಸರಿಸುವ ಮಾದರಿ ಹಾಗೂ ಮಾನದಂಡ.

4) ಆಂತರಿಕ ಆಡಳಿತ ರಚನೆ. ಪದಾಧಿಕಾರಿಗಳ ಆಯ್ಕೆ ಇಲ್ಲವೇ ನೇಮಕದಲ್ಲಿ ತೋರಬೇಕಿದೆ ಪಾರದರ್ಶಕತೆ. ಹಿತಾಸಕ್ತಿ ಸಂಘರ್ಷಕ್ಕೆ ಅವಕಾಶ ನೀಡದೆ ಇರುವುದು ಅಗತ್ಯ. ---ಪದಾಧಿಕಾರಿಗಳ ಗರಿಷ್ಠ

ವಯಸ್ಸು 75ಕ್ಕೆ ಏರಿಕೆ

ಕ್ರೀಡಾ ಆಡಳಿತ ಮಸೂದೆಯು ಬಿಸಿಸಿಐ ಸೇರಿ ರಾಷ್ಟ್ರೀಯ ಕ್ರೀಡಾ ಫೆಡರೇಶನ್‌ಗಳ ಪದಾಧಿಕಾರಿಗಳ ಗರಿಷ್ಠ ವಯೋಮಿತಿಯನ್ನು 70ರಿಂದ 75 ವರ್ಷಕ್ಕೆ ಹೆಚ್ಚಿಸಿದೆ. 2036ರ ಒಲಿಂಪಿಕ್ಸ್‌ಗೆ ಬಿಡ್‌ ಸಲ್ಲಿಸಲು ಭಾರತ ಆಸಕ್ತಿ ತೋರಿರುವ ಕಾರಣ, ಆಡಳಿತದಲ್ಲಿ ಅನುಭವಿಗಳ ಅಗತ್ಯವಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ, ಕ್ರೀಡಾ ಸಂಸ್ಥೆಗಳ ಜಾಗತಿಕ ಫೆಡರೇಶನ್‌ಗಳ ಬೈ ಲಾದಲ್ಲಿ 75 ವರ್ಷದ ವರೆಗೂ ಮುಂದುವರಿಯಲು ಅವಕಾಶವಿದ್ದರಷ್ಟೇ ರಾಷ್ಟ್ರೀಯ ಫೆಡರೇಶನ್‌ಗಳು ಅಧಿಕಾರಿಗಳಿಗೆ ಈ ನಿಯಮ ಅನ್ವಯವಾಗಲಿದೆ. 

ವ್ಯಕ್ತಿಯೊಬ್ಬ ಸತತವಾಗಿ 3 ಅವಧಿ ಅಥವಾ 12 ವರ್ಷ ಕ್ರೀಡಾ ಆಡಳಿತದಲ್ಲಿ ಇರಬಹುದು. ಈ ನಿಯಮದ ಪ್ರಕಾರ, ಹಾಲಿ ಬಿಸಿಸಿಐ ಅಧ್ಯಕ್ಷ ರೋಜರ್‌ ಬಿನ್ನಿ ಸದ್ಯಕ್ಕೆ ಹುದ್ದೆಯಿಂದ ಕೆಳಗಿಳಿಯದೆ ಇನ್ನಷ್ಟು ದಿನ ಮುಂದುವರಿಯಬಹುದಾಗಿದೆ.

ಮಸೂದೆ ತರಲು ಏನು ಕಾರಣ?

- ದೇಶದ ಎಲ್ಲ ಕ್ರೀಡಾ ಸಂಸ್ಥೆಗಳು ಆರ್‌ಟಿಐಗೆ, ಬಿಸಿಸಿಐ ಇದಕ್ಕೆ ಹೊರತಲ್ಲ

- ಕ್ರೀಡಾ ಸಂಸ್ಥೆಗಳಲ್ಲಿ ಪಾರದರ್ಶಕತೆಗೆ ತರಬೇಕೆಂಬ ಕಾರಣಕ್ಕೆ ಈ ಕ್ರಮ

- ಆರ್‌ಟಿಐ ಅಡಿ ತರಲು ಬಿಸಿಸಿಐ ವಿರೋಧ, ಇದಕ್ಕೆ ಮಣಿಯದ ಸರ್ಕಾರ

- ಇದೇ ವೇಳೆ, ಕ್ರೀಡಾ ಸಂಸ್ಥೆ ಪದಾಧಿಕಾರಿಗಳ ಗರಿಷ್ಠ ವಯಸ್ಸು75ಕ್ಕೇರಿಕೆ

Read more Articles on