ಸಾರಾಂಶ
ನವದೆಹಲಿ: ತವರಿನಲ್ಲೇ ನ್ಯೂಜಿಲೆಂಡ್ ವಿರುದ್ಧದ ಸೋಲು ಭಾರತವನ್ನು ಎಷ್ಟರ ಮಟ್ಟಿಗೆ ಕಂಗೆಟ್ಟಿಸಿದೆ ಎಂದರೆ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಪ್ರಮುಖರ ಭವಿಷ್ಯವೇ ಈಗ ತೂಗುಯ್ಯಾಲೆಯಲ್ಲಿದೆ. ಹಿರಿಯ ಆಟಗಾರರ ಜೊತೆ ಬಿಸಿಸಿಐ ಆಸ್ಟ್ರೇಲಿಯಾ ಸರಣಿ ಬಳಿಕ ಸಮಾಲೋಚನೆ ನಡೆಸಲಿದ್ದು, ನಿವೃತ್ತಿ ಪ್ರಕಟಿಸಬೇಕಾದ ಅನಿವಾರ್ಯತೆ ಎದುರಾದರೂ ಅಚ್ಚರಿಯಿಲ್ಲ ಎಂದೇ ವಿಶ್ಲೇಷಿಸಲಾಗುತ್ತಿದೆ.
ಕೊಹ್ಲಿ, ರೋಹಿತ್, ರವೀಂದ್ರ ಜಡೇಜಾ ಹಾಗೂ ಆರ್.ಅಶ್ವಿನ್ ಎಲ್ಲರ ವಯಸ್ಸೂ 35 ದಾಟಿದೆ. ಇವರ ಪ್ರದರ್ಶನವೂ ನಿರೀಕ್ಷಿತ ಮಟ್ಟದಲ್ಲಿಲ್ಲ. ಮತ್ತೊಂದೆಡೆ ಹಲವು ಯುವ ಆಟಗಾರರು ಭಾರತ ತಂಡದ ಕದ ತಟ್ಟುತ್ತಿದ್ದಾರೆ. ಒಂದು ವೇಳೆ ಭಾರತ ಈ ಬಾರಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೇರದಿದ್ದರೆ ಹಿರಿಯ ಆಟಗಾರರ ಟೆಸ್ಟ್ ವೃತ್ತಿ ಬದುಕು ಕೊನೆಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.
ಯುವ ಬ್ಯಾಟರ್‌ಗಳಾದ ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್, ಆಲ್ರೌಂಡರ್‌ಗಳಾದ ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್ ಸೇರಿದಂತೆ ಪ್ರಮುಖರು ಈಗಾಗಲೇ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದು, 2025ರ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಬಿಸಿಸಿಐ ಹಿರಿಯ ಆಟಗಾರರನ್ನು ಕೈಬಿಟ್ಟು, ಕಿರಿಯರಿಗೆ ಮಣೆ ಹಾಕುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಇನ್ನು, ಶುಭ್‌ಮನ್ ಗಿಲ್, ರಿಷಭ್ ಪಂತ್ ನಾಯಕತ್ವದ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.