ಸಾರಾಂಶ
ಬೆಂಗಳೂರು : 3ನೇ ಆವೃತ್ತಿ ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಮೊದಲ ಸೆಮಿಫೈನಲ್‌ನಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್ ತಂಡವನ್ನು 00 ವಿಕೆಟ್‌ಗಳಿಂದ ಬಗ್ಗುಬಡಿದ ಬೆಂಗಳೂರು ಬ್ಲಾಸ್ಟರ್ಸ್ ಫೈನಲ್‌ಗೆ ಲಗ್ಗೆ ಇಟ್ಟಿದೆ. 2022ರಲ್ಲಿ ಗುಲ್ಬರ್ಗಾ ವಿರುದ್ಧವೇ ಫೈನಲ್‌ನಲ್ಲಿ ಸೋತು ರನ್ನರ್-ಅಪ್ ಆಗಿದ್ದ ಬೆಂಗಳೂರು, ಟೂರ್ನಿಯಲ್ಲಿ 2ನೇ ಬಾರಿ ಪ್ರಶಸ್ತಿ ಸುತ್ತಿಗೇರಿತು. 2ನೇ ಬಾರಿ ಫೈನಲ್‌ಗೇರುವ ಗುಲ್ಬರ್ಗಾ ಕನಸು ಭಗ್ನಗೊಂಡಿತು.
ಮೊದಲು ಬ್ಯಾಟ್ ಮಾಡಿದ ಗುಲ್ಬರ್ಗಾ 19.5 ಓವರ್‌ಗಳಲ್ಲಿ 155 ರನ್ ಕಲೆಹಾಕಿತು. ಪ್ರಮುಖ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದರು. ಲುವ್‌ನಿತ್ ಸಿಸೋಡಿಯಾ 20 ಎಸೆತಗಳಲ್ಲಿ 41 ರನ್, ಪ್ರವೀಣ್ ದುಬೆ 26 ರನ್ ಗಳಿಸಿದರು. 8ನೇ ವಿಕೆಟ್‌ಗೆ ಪ್ರವೀಣ್-ಫೈಜಾನ್ ಖಾನ್(13) 38 ರನ್ ಜೊತೆಯಾಟವಾಡಿದರು. ಮೊಹ್ಸಿನ್, ಲಾವಿಶ್, ಕ್ರಾಂತಿ ಕುಮಾರ್ ಹಾಗೂ ಶುಭಾಂಗ್ ಹೆಗ್ಡೆ ತಲಾ 2 ವಿಕೆಟ್ ಕಿತ್ತರು.ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಬೆಂಗಳೂರು ಸ್ಫೋಟಕ ಆಟದ ಮೂಲಕ ಆರಂಭದಲ್ಲೇ ಗುಲ್ಬರ್ಗಾ ವಿರುದ್ಧ ಸವಾರಿ ಮಾಡಿತು.
ನಾಯಕ ಮಯಾಂಕ್ ಅಗರ್‌ವಾಲ್ 37 ಎಸೆತಗಳಲ್ಲಿ ಔಟಾಗದೆ 53 ಹಾಗೂ ಎಲ್.ಆರ್.ಚೇತನ್ ಔಟಾಗದೆ 51 ಎಸೆತಗಳಲ್ಲಿ 89 ರನ್ ಸಿಡಿಸಿ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು.ಸ್ಕೋರ್: ಗುಲ್ಬರ್ಗಾ 19.5 ಓವರ್‌ಗಳಲ್ಲಿ 155/10 (ಲುವ್‌ನಿತ್ 41, ಪ್ರವೀಣ್ 26, ಕ್ರಾಂತಿ 2/22, ಶುಭಾಂಗ್2/23), ಬೆಂಗಳೂರು 17.1 ಓವರ್‌ಗಳಲ್ಲಿ 159/1 (ಮಯಾಂಕ್ 52, ಚೇತನ್ 89)
ಈ ಸಲ ಗುಲ್ಬರ್ಗಾ ವಿರುದ್ಧ ಬೆಂಗ್ಳೂರಿಗೆ 3ನೇ ಗೆಲುವು
ಗುಲ್ಬರ್ಗಾ ವಿರುದ್ಧ ಬೆಂಗಳೂರು ಈ ಬಾರಿ ಟೂರ್ನಿಯಲ್ಲಿ ಎಲ್ಲಾ 3 ಮುಖಾಮುಖಿಯಲ್ಲೂ ಗೆದ್ದಿದೆ. ಗುಲ್ಬರ್ಗಾ ವಿರುದ್ಧ 9 ವಿಕೆಟ್‌ಗಳಿಂದ ಗೆಲ್ಲುವ ಮೂಲಕ ಟೂರ್ನಿಯಲ್ಲಿ ಅಭಿಯಾನ ಆರಂಭಿಸಿದ್ದ ಮಯಾಂಕ್ ಪಡೆ, ಲೀಗ್ ಹಂತದ 2ನೇ ಪಂದ್ಯದಲ್ಲಿ 2 ರನ್ ರೋಚಕ ಗೆಲುವು ಸಾಧಿಸಿತ್ತು.
ಇಂದು ಹುಬ್ಬಳ್ಳಿ-ಮೈಸೂರು 2ನೇ ಸೆಮೀಸ್
ಟೂರ್ನಿಯ 2ನೇ ಸೆಮಿಫೈನಲ್‌ನಲ್ಲಿ ಶನಿವಾರ ಹುಬ್ಬಳ್ಳಿ ಟೈಗರ್ಸ್ ಹಾಗೂ ಮೈಸೂರು ವಾರಿಯರ್ಸ್ ತಂಡಗಳು ಸೆಣಸಾಡಲಿವೆ. ಈ ಎರಡು ತಂಡಗಳೇ ಕಳೆದ ಆವೃತ್ತಿ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಈ ಬಾರಿ ಎರಡೂ ತಂಡಗಳು 10 ಪಂದ್ಯಗಳಲ್ಲಿ ತಲಾ 6 ಗೆಲುವಿನೊಂದಿಗೆ 12 ಅಂಕ ಸಂಪಾದಿಸಿದ್ದವು. ನೆಟ್ ರನ್‌ರೇಟ್ ಆಧಾರದಲ್ಲಿ ಮೈಸೂರು 2ನೇ, ಹುಬ್ಬಳ್ಳಿ 3ನೇ ಸ್ಥಾನಿಯಾಗಿತ್ತು. ಇತ್ತಂಡಗಳ ನಡುವಿನ ಲೀಗ್ ಹಂತದ 2 ಮುಖಾಮುಖಿಯಲ್ಲೂ ಮೈಸೂರು ಗೆದ್ದಿತ್ತು.