ಮಹಾರಾಜ ಟ್ರೋಫಿ ಟಿ20: ಆ.15ರಂದು ಬೆಂಗಳೂರು vs ಗುಲ್ಬರ್ಗಾ

| Published : Jul 31 2024, 01:07 AM IST

ಸಾರಾಂಶ

3ನೇ ಆವೃತ್ತಿ ಟೂರ್ನಿ ವೇಳಾಪಟ್ಟಿ ಪ್ರಕಟಿಸಿದ ಕೆಎಸ್‌ಸಿಎ. ಆಗಸ್ಟ್‌ 30 ಹಾಗೂ 31ರಂದು ಸೆಮಿಫೈನಲ್‌, ಸೆಪ್ಟೆಂಬರ್‌ 1ರಂದು ಫೈನಲ್‌ ಪಂದ್ಯ ನಡೆಯಲಿದೆ.

ಬೆಂಗಳೂರು: 3ನೇ ಆವೃತ್ತಿಯ ಮಹಾರಾಜ ಟ್ರೋಫಿ ಟಿ20 ಟೂರ್ನಿಯ ವೇಳಾಪಟ್ಟಿಯನ್ನು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಮಂಗಳವಾರ ಪ್ರಕಟಿಸಿದೆ. ಆ.15ರಂದು ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ ಹಾಗೂ ಗುಲ್ಬರ್ಗಾ ಮಿಸ್ಟಿಕ್ಸ್‌ ತಂಡಗಳು ಸೆಣಸಾಡಲಿವೆ.ಟೂರ್ನಿ ಸೆ.1ರ ವರೆಗೆ ನಡೆಯಲಿದ್ದು, ಎಲ್ಲಾ ಪಂದ್ಯಗಳಿಗೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಪ್ರತಿ ದಿನ 2 ಪಂದ್ಯಗಳು ನಡೆಯಲಿವೆ. ಆ.15ರಂದು 2ನೇ ಪಂದ್ಯದಲ್ಲಿ ಕಳೆದ ಬಾರಿ ರನ್ನರ್‌-ಅಪ್‌ ಮೈಸೂರು ವಾರಿಯರ್ಸ್‌ ಹಾಗೂ ಶಿವಮೊಗ್ಗ ಲಯನ್ಸ್‌ ಮುಖಾಮುಖಿಯಾಗಲಿವೆ. ಹಾಲಿ ಚಾಂಪಿಯನ್‌ ಹುಬ್ಬಳ್ಳಿ ಟೈಗರ್ಸ್‌ ತಂಡ ತನ್ನ ಮೊದಲ ಪಂದ್ಯವನ್ನು ಆ.16ರಂದು ಮಂಗಳೂರು ಡ್ರ್ಯಾಗನ್ಸ್‌ ವಿರುದ್ಧ ಆಡಲಿದೆ. ಟೂರ್ನಿ ಮಾದರಿ: ಟೂರ್ನಿಯನ್ನು 6 ತಂಡಗಳು ಪಾಲ್ಗೊಳ್ಳಲಿವೆ. ಲೀಗ್‌ ಹಂತ ಡಬಲ್‌ ರೌಂಡ್‌ ರಾಬಿನ್‌ ಮಾದರಿಯಲ್ಲಿ ನಡೆಯಲಿದ್ದು, ಪ್ರತಿ ತಂಡ ಉಳಿದ 5 ತಂಡಗಳ ವಿರುದ್ಧ ತಲಾ 2 ಬಾರಿ ಸೆಣಸಲಿದೆ. ಲೀಗ್‌ ಹಂತದ ಮುಕ್ತಾಯಕ್ಕೆ ಅಗ್ರ-4 ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ. ಆ.30 ಹಾಗೂ 31ರಂದು ಸೆಮಿಫೈನಲ್‌, ಸೆ.1ರಂದು ಫೈನಲ್‌ ನಡೆಯಲಿದೆ.ಟೂರ್ನಿಯ ಚಾಂಪಿಯನ್‌ ತಂಡ ₹15 ಲಕ್ಷ, ರನ್ನರ್‌-ಅಪ್‌ ತಂಡ ₹10 ಲಕ್ಷ ಬಹುಮಾನ ಮೊತ್ತ ಪಡೆಯಲಿದೆ ಎಂದು ಕೆಎಸ್‌ಸಿಎ ತಿಳಿಸಿದೆ. ಪಂದ್ಯಗಳು ಸ್ಟಾರ್‌ಸ್ಪೋರ್ಟ್ಸ್‌ 2, ಸ್ಟಾರ್‌ ಸ್ಪೋರ್ಟ್ಸ್‌ ಕನ್ನಡ ಚಾನೆಲ್‌ ಹಾಗೂ ಫ್ಯಾನ್ಸ್‌ಕೋಡ್‌ ಆ್ಯಪ್‌ಗಳಲ್ಲಿ ನೇರ ಪ್ರಸಾರಗೊಳ್ಳಲಿವೆ.