ಟೈಟಾನ್ಸ್‌ಗೆ ಗುದ್ದಿದ ಬುಲ್ಸ್‌

| Published : Jan 20 2024, 02:04 AM IST / Updated: Jan 20 2024, 05:26 PM IST

Bangaluru bulls

ಸಾರಾಂಶ

ಪ್ರೊ ಕಬಡ್ಡಿಯಲ್ಲಿ ಬೆಂಗಳೂರಿ ಬುಲ್ಸ್‌ ತೆಲಗು ಟೈಟಾನ್ಸ್‌ ವಿರುದ್ಧ 42-26 ಅಂಕದ ಜಯ ಸಾಧಿಸಿದೆ. ಸಂಘಟಿತ ಹೋರಾಟ ನೀಡಿದ ಬೆಂಗಳೂರು ಬುಲ್ಸ್‌ಗೆ ಪಂದ್ಯಾವಳಿಯಲ್ಲಿ 6ನೇ ಗೆಲುವು ಸಿಕ್ಕಿತು. ತೆಲುಗು ಟೈಟನ್ಸ್‌ 12ನೇ ಸೋಲಿಗೆ ಗುರಿಯಾಯಿತು.

ಪ್ರೊ ಕಬಡ್ಡಿಯಲ್ಲಿ ಬೆಂಗಳೂರಿ ಬುಲ್ಸ್‌ ತೆಲಗು ಟೈಟಾನ್ಸ್‌ ವಿರುದ್ಧ 42-26 ಅಂಕದ ಜಯ ಸಾಧಿಸಿದೆ. ಸಂಘಟಿತ ಹೋರಾಟ ನೀಡಿದ ಬೆಂಗಳೂರು ಬುಲ್ಸ್‌ಗೆ ಪಂದ್ಯಾವಳಿಯಲ್ಲಿ 6ನೇ ಗೆಲುವು ಸಿಕ್ಕಿತು. ತೆಲುಗು ಟೈಟನ್ಸ್‌ 12ನೇ ಸೋಲಿಗೆ ಗುರಿಯಾಯಿತು.

ಹೈದರಾಬಾದ್‌: ಚೇತೋಹಾರಿ ಹಾಗೂ ಸಾಂಘಿಕ ಹೋರಾಟ ಪ್ರದರ್ಶಿಸಿದ ಬೆಂಗಳೂರು ಬುಲ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ 10ನೇ ಆವೃತ್ತಿಯ 78ನೇ ಹಣಾಹಣಿಯಲ್ಲಿತೆಲುಗು ಟೈಟನ್ಸ್‌ ವಿರುದ್ಧ 16 ಅಂಕಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು.

ಇದರೊಂದಿಗೆ ಟೂರ್ನಿಯಲ್ಲಿ 6ನೇ ಜಯ ದಾಖಲಿಸಿದ ಬುಲ್ಸ್‌, ಒಟ್ಟಾರೆ 37 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿತನ್ನ ಸ್ಥಾನವನ್ನು ಸುಧಾರಿಸಿಕೊಂಡಿತು. ಗಚ್ಚಿ ಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಬುಲ್ಸ್‌ ತಂಡ 42- 26 ಅಂಕಗಳಿಂದ ಟೈಟನ್ಸ್‌ಗೆ ಸೋಲುಣಿಸಿತು. ತನ್ನ ಕಳೆದ ಪಂದ್ಯದಲ್ಲಿ ಬೆಂಗಾಲ್‌ ವಾರಿಯರ್ಸ್‌ ವಿರುದ್ಧ ಸೋತಿದ್ದ ಬೆಂಗಳೂರು, ಲಯ ಕಂಡುಕೊಳ್ಳುವಲ್ಲಿ ಯಶಸ್ವಿಯಾಯಿತು. ಬುಲ್ಸ್‌ ಪರ ಅಕ್ಷಿತ್‌, ಸುರ್ಜೀತ್‌ ಸಿಂಗ್‌ ಮತ್ತು ವಿಕಾಶ್‌ ಕ್ರಮವಾಗಿ 9, 7 ಮತ್ತು 6 ಅಂಕ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮತ್ತೊಮ್ಮೆ ನೀರಸ ಪ್ರದರ್ಶನ ನೀಡಿದ ಟೈಟನ್ಸ್‌, 12ನೇ ಸೋಲಿಗೆ ಗುರಿಯಾಯಿತು. ಇದಕ್ಕೂ ಮುನ್ನ ಮೊದಲಾವಧಿಯ ಹಿನ್ನಡೆ ತಗ್ಗಿಸುವ ಒತ್ತಡದಲ್ಲಿ ದ್ವಿತೀಯಾರ್ಧ ಆರಂಭಿಸಿದ ಬುಲ್ಸ್‌ 23ನೇ ನಿಮಿಷದಲ್ಲಿ 15-12ರಲ್ಲಿ ಮುನ್ನಡೆ ಪಡೆಯುವ ಮೂಲಕ ಪಂದ್ಯದಲ್ಲಿ ಮೊದಲ ಬಾರಿ ಮೇಲುಗೈ ಸಾಧಿಸಿತು. ದ್ವಿತೀಯಾರ್ಧ ಆರಂಭವಾದ ಎರಡನೇ ನಿಮಿಷದಲ್ಲಿ ತೆಲುಗು ಟೈಟನ್ಸ್‌ ತಂಡವನ್ನು ಆಲೌಟ್‌ ಮಾಡಿದ ಬುಲ್ಸ್‌ ಮುನ್ನಡೆ ಕಂಡುಕೊಂಡಿತು. ನಂತರ ಇದೇ ಲಯವನ್ನು ಕಾಯ್ದುಕೊಳ್ಳಲು ಪರ್ತೀಕ್‌ ಮತ್ತು ವಿಕಾಶ್‌ ಖಂಡೋಲ ನೆರವಾದರು.

ಪಂದ್ಯದ 29 ನೇ ನಿಮಿಷಕ್ಕೆ ತಂಡದ ಮುನ್ನಡೆಯನ್ನು 6 (22-16) ಅಂಕಗಳಿಗೆ ಹೆಚ್ಚಿಸಿಕೊಂಡ ಬೆಂಗಳೂರು ಬುಲ್ಸ್‌, ಪೂರ್ಣ ಅಂಕ ಕಲೆಹಾಕುವ ಸುಳಿವು ನೀಡಿತು. ಪಂದ್ಯ ಮುಕ್ತಾಯಕ್ಕೆ ಕೊನೆಯ 9 ನಿಮಿಷಗಳು ಬಾಕಿ ಇರುವಾಗ ಮತ್ತಷ್ಟು ಪರಿಣಾಮಕಾರಿ ಆಟವಾಡಿದ ಬುಲ್ಸ್‌ ಆಟಗಾರರು ಎದುರಾಳಿ ತಂಡವನ್ನು 2ನೇ ಬಾರಿ ಆಲೌಟ್‌ ಮಾಡಿದರು. ಹೀಗಾಗಿ 26-19 ರಲ್ಲಿಅಂತರ ಕಾಯ್ದುಕೊಂಡಿತು.

ಮುನ್ನಡೆಯಿಂದಾಗಿ ಆತ್ಮವಿಶ್ವಾಸ ವೃದ್ಧಿಸಿಕೊಂಡ ಬುಲ್ಸ್‌ ಆಟಗಾರರು ಟ್ಯಾಕಲ್‌ ಮತ್ತು ರೇಡಿಂಗ್‌ ಎರಡೂ ವಿಭಾಗಗಳಲ್ಲಿ ಎದುರಾಳಿ ಮೇಲೆ ಒತ್ತಡ ಹೇರಿದರು. 35ನೇ ನಿಮಿಷ ಮುಕ್ತಾಯಕ್ಕೆ ತಂಡದ ಮುನ್ನಡೆಯನ್ನು 30-20ಕ್ಕೆ ವಿಸ್ತರಿಸಿಕೊಂಡ ಬುಲ್ಸ್‌ ಆಟಗಾರರು ಗೆಲುವಿನ ಮುದ್ರೆಗೆ ಸನಿಹಗೊಂಡರು.

ಸಾಂಘಿಕ ಹೋರಾಟ ನೀಡಿದ ಹೊರತಾಗಿಯೂ ಬೆಂಗಳೂರು ಬುಲ್ಸ್‌ ತಂಡದ ಪಂದ್ಯದ ಪ್ರಥಮಾರ್ಧಕ್ಕೆ ಮೂರು ಅಂಕಗಳ (9-12) ಹಿನ್ನಡೆ ಅನುಭವಿಸಿತು. ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾದ ಮೊದಲಾರ್ಧದಲ್ಲಿ ಅಂಕ ಗಳಿಸಲು ರೇಡರ್‌ಗಳು ತಿಣುಕಾಡಿದರು. ಉಭಯ ತಂಡಗಳಿಂದಲೂ ರಕ್ಷ ಣಾ ವಿಭಾಗದ ಆಟಗಾರರು ಎಚ್ಚರಿಕೆಯ ಆಟವಾಡಿದರು. ಹೀಗಾಗಿ ಪಂದ್ಯದ ಆರಂಭದಿಂದಲೂ ಇತ್ತಂಡಗಳು ಸಮಬಲದ ಹೋರಾಟ ನೀಡಿದೆವು.

ಸ್ಟಾರ್‌ ರೇಡರ್‌ ಭರತ್‌ ಹೊರತುಪಡಿಸಿ ಉಳಿದ ಬಹುತೇಕ ಆಟಗಾರರು ಸಮಯೋಚಿತ ಆಟವಾಡಿದರು. ಇದರ ನಡುವೆಯೂ ರೈಟ್‌ ಕಾರ್ನರ್‌ ಡಿಫೆಂಡರ್‌ ಮೋಹಿತ್‌ ಮತ್ತು ಸ್ಟಾರ್‌ ರೇಡರ್‌ ಪವನ್‌ ಕುಮಾರ್‌ ಶೆರಾವತ್‌ ಅವರ ಸಾಹಸದಿಂದ ತೆಲುಗು ಟೈಟನ್ಸ್‌ ತಂಡ ಮೊದಲಾವಧಿಯ ಅಂತ್ಯಕ್ಕೆ 12-9 ಅಂಕಗಳಲ್ಲಿಅಂತರ ಕಾಯ್ದುಕೊಂಡಿತು.

ಬೆಂಗಳೂರು ಬುಲ್ಸ್‌ ತನ್ನ ಮುಂದಿನ ಪಂದ್ಯದಲ್ಲಿ ಜನವರಿ 21ರಂದು ತಮಿಳ್‌ ತಲೈವಾಸ್‌ ತಂಡವನ್ನು ಎದುರಿಸಲಿದೆ. ಶುಕ್ರವಾರದ ಮತ್ತೊಂದು ಪಂದ್ಯದಲ್ಲಿ ಯುಪಿ ಯೋಧಾಸ್‌ ವಿರುದ್ಧ ಪಾಟ್ನಾ ಪೈರೇಟ್ಸ್‌ 34-31ರಿಂದ ಗೆಲುವು ಸಾಧಿಸಿತು.

ಇಂದಿನ ಪಂದ್ಯಗಳು

ದಬಾಂಗ್‌ ಡೆಲ್ಲಿ-ಯು ಮುಂಬಾ, ರಾತ್ರಿ 8ಕ್ಕೆ

ತೆಲುಗು ಟೈಟಾನ್ಸ್‌-ಯೋಧಾಸ್‌, ರಾತ್ರಿ 9ಕ್ಕೆ