ಸಾರಾಂಶ
ಬೆಂಗಳೂರು: ಇತ್ತೀಚೆಗಷ್ಟೇ ಬೆಂಗಳೂರು ದಕ್ಷಿಣದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಗೋವಾದಲ್ಲಿ ಐರನ್‌ಮ್ಯಾನ್ 70.3 ಸ್ಪರ್ಧೆಯನ್ನು ಪೂರ್ತಿಗೊಳಿಸಿ, ಈ ಸಾಧನೆಗೈದ ದೇಶದ ಮೊದಲ ಸಂಸದ ಎನ್ನುವ ಹಿರಿಮೆಗೆ ಪಾತ್ರರಾಗಿದ್ದರು.
ಅದೇ ರೀತಿ, ಬೆಂಗಳೂರಿನ ದಂತವೈದ್ಯ ಫ್ಲೆಮಿಂಗ್ಸನ್ ಲಜಾರಸ್ ಅವರು, ಜಗತ್ತಿನ 6 ಖಂಡಗಳಲ್ಲೂ ಐರನ್‌ಮ್ಯಾನ್ ಸ್ಪರ್ಧೆಯನ್ನು ಪೂರೈಸಿ, ಈ ಸಾಧನೆ ಮಾಡಿದ ದೇಶದ ಮೊದಲ ಹಾಗೂ ಏಕೈಕ ದಂತವೈದ್ಯ ಎನ್ನುವ ದಾಖಲೆ ಬರೆದಿದ್ದಾರೆ.
ಫ್ಲೆಮಿಂಗ್ಸನ್ ಅವರು ಐರನ್‌ಮ್ಯಾನ್ 140.6 ಹಾಗೂ ಐರನ್‌ಮ್ಯಾನ್ 70.3 ಎರಡೂ ಸ್ಪರ್ಧೆಗಳನ್ನು ಪೂರೈಸಿದ್ದಾರೆ ಎನ್ನುವುದು ವಿಶೇಷ. ಹಲವು ವರ್ಷಗಳಿಂದ ಟ್ರಯಥ್ಲಾನ್ ಅಂದರೆ ಈಜು, ಸೈಕ್ಲಿಂಗ್ ಹಾಗೂ ಓಟದಲ್ಲಿ ಸಕ್ರಿಯರಾಗಿರುವ ಫ್ಲೆಮಿಂಗ್ಸನ್ ಅವರು ಏಷ್ಯಾ, ಯುರೋಪ್, ಆಫ್ರಿಕಾ, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ ಹಾಗೂ ಆಸ್ಟ್ರೇಲಿಯಾ ಖಂಡಗಳಲ್ಲಿ ಐರನ್‌ಮ್ಯಾನ್ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದಲ್ಲೇ, ಪೂರ್ಣಗೊಳಿಸಿದ್ದಾರೆ.
ಯಾರು ಈ ಫ್ಲೆಮಿಂಗ್ಸನ್?54 ವರ್ಷದ ಫ್ಲೆಮಿಂಗ್ಸನ್ ಲಜಾರಸ್ ಅವರು ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ದಂತವೈದ್ಯರಾಗಿದ್ದಾರೆ. ಫ್ರೇಜರ್ ಟೌನ್‌ನಲ್ಲಿ ತಮ್ಮದೇ ಸ್ವಂತ ಕ್ಲಿನಿಕ್ ಸಹ ನಡೆಸುತ್ತಾರೆ. 30 ವರ್ಷಗಳಿಂದ ದಂತ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಫಿಟ್ನೆಸ್ ಪ್ರೇಮಿಯಾಗಿರುವ ಫ್ಲೆಮಿಂಗ್ಸನ್, ಹಲವು ವರ್ಷಗಳಿಂದ ದೇಶ-ವಿದೇಶಗಳಲ್ಲಿ ನಡೆಯುವ ಟ್ರಯಥ್ಲಾನ್ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
6 ಖಂಡಗಳಲ್ಲೂ ಐರನ್‌ಮ್ಯಾನ್ ಸಾಧನೆ!
ವಿಭಾಗವರ್ಷದೇಶಖಂಡ
140.62019ಮಲೇಷ್ಯಾಏಷ್ಯಾ
70.32022ಫಿನ್‌ಲ್ಯಾಂಡ್‌ಯುರೋಪ್
70.32022ಈಜಿಪ್ಟ್‌ಆಫ್ರಿಕಾ
70.32023ಯುಎಸ್‌ಎಉ.ಅಮೆರಿಕ
70.32023ಆಸ್ಟ್ರೇಲಿಯಾಆಸ್ಟ್ರೇಲಿಯಾ
70.32024ಬ್ರೆಜಿಲ್‌ದ.ಅಮೆರಿಕ
ಏನಿದು ಐರನ್‌ಮ್ಯಾನ್ ಸ್ಪರ್ಧೆ?
ವಿಶ್ವ ಟ್ರಯಥ್ಲಾನ್ ಕಾರ್ಪೋರೇಷನ್ (ಡಬ್ಲ್ಯುಟಿಸಿ) 1978ರಿಂದ ಐರನ್‌ಮ್ಯಾನ್ ಹೆಸರಿನಲ್ಲಿ ಈ ಸ್ಪರ್ಧೆಯನ್ನು ವಿವಿಧ ದೇಶಗಳಲ್ಲಿ ಆಯೋಜಿಸುತ್ತಿದೆ. ಐರನ್‌ಮ್ಯಾನ್ 140.6 ಹಾಗೂ ಐರನ್‌ಮ್ಯಾನ್ 70.3 ಎಂಬ 2 ವಿಭಾಗಗಳಿವೆ. ಅಂದರೆ ಈಜು, ಸ್ಲೈಕ್ಲಿಂಗ್ ಹಾಗೂ ಓಟ ಮೂರು ಸೇರಿ ಒಟ್ಟು 140.6 ಮೈಲಿ ಹಾಗೂ 70.3 ಮೈಲಿ ಸ್ಪರ್ಧೆ ನಡೆಯಲಿದೆ. 140.6 ವಿಭಾಗದಲ್ಲಿ 3.8 ಕಿ.ಮೀ ಈಜು, 180 ಕಿ.ಮೀ. ಸೈಕ್ಲಿಂಗ್ ಹಾಗೂ 42.2 ಕಿ.ಮೀ. ಓಟ ಇರಲಿದೆ. ಮೂರೂ ಸೇರಿ ಒಟ್ಟು 226 ಕಿ.ಮೀ. (140.6 ಮೈಲಿ) ಸ್ಪರ್ಧೆ ನಡೆಯಲಿದೆ. 70.3 ವಿಭಾಗದಲ್ಲಿ 1.9 ಕಿ.ಮೀ. ಈಜು, 90 ಕಿ.ಮೀ. ಸೈಕ್ಲಿಂಗ್, 21.1 ಕಿ.ಮೀ. ಓಟ ಇರಲಿದೆ.
ಈ ಮೂರೂ ಸ್ಪರ್ಧೆಗಳನ್ನು ನಿಗದಿತ ಸಮಯದಲ್ಲಿ ಪೂರ್ತಿಗೊಳಿಸಬೇಕು. ಮೂರೂ ಸ್ಪರ್ಧೆಗಳಿಗೆ ತೆಗೆದುಕೊಂಡ ಒಟ್ಟು ಸಮಯದ ಆಧಾರದಲ್ಲಿ ಸ್ಪರ್ಧಿಗಳ ಸ್ಥಾನಗಳು ನಿರ್ಧಾರವಾಗಲಿವೆ.