ಸಾರಾಂಶ
ನವದೆಹಲಿ: ಒಲಿಂಪಿಕ್ ಕ್ರೀಡಾಕೂಟದ ಪ್ರಚಾರ, ಬೆಳವಣಿಗೆಗೆ ನೀಡಿರುವ ಕೊಡುಗೆಗಳನ್ನು ಪರಿಗಣಿಸಿ ಭಾರತದ ದಿಗ್ಗಜ ಶೂಟರ್, ಒಲಿಂಪಿಕ್ ಚಿನ್ನ ವಿಜೇತ ಅಭಿನವ್ ಬಿಂದ್ರಾಗೆ ‘ಒಲಿಂಪಿಕ್ ಆರ್ಡರ್’ ಗೌರವ ನೀಡಲು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ನಿರ್ಧರಿಸಿದೆ. ಈ ಬಗ್ಗೆ ಐಒಸಿ ಅಧ್ಯಕ್ಷ ಥಾಮಸ್ ಬಾಕ್ ಬಿಂದ್ರಾ ಅವರಿಗೆ ಪತ್ರ ಬರೆದಿದ್ದು, ಪ್ಯಾರಿಸ್‌ನಲ್ಲಿ ಆ.10ರಂದು ನಡೆಯಲಿರುವ ಐಒಸಿಯ 142ನೇ ವಾರ್ಷಿಕ ಸಭೆಯಲ್ಲಿ ಈ ಗೌರವವನ್ನು ಪ್ರಧಾನ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಬಿಂದ್ರಾ 2008ರ ಬೀಜಿಂಗ್ ಒಲಿಂಪಿಕ್ಸ್‌ನ ಪುರುಷರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನ ಜಯಿಸಿದ್ದರು. ಆ ಮೂಲಕ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಕ್ರೀಡಾಪಟು ಎನ್ನುವ ಹಿರಿಮೆಗೆ ಪಾತ್ರರಾಗಿದ್ದರು. ಅಂತಾರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೆಡರೇನ್ (ಐಎಸ್‌ಎಸ್‌ಎಫ್)ನ ಅಥ್ಲೀಟ್‌ಗಳ ಸಮಿತಿಯ ಸದಸ್ಯರಾಗಿ 2010ರಿಂದ 2020ರ ವರೆಗೂ ಸೇವೆ ಸಲ್ಲಿಸಿದ್ದರು. 2018ರಿಂದ ಐಒಸಿ ಅಥ್ಲೀಟ್‌ಗಳ ಸಮಿತಿಯ ಸದಸ್ಯರಾಗಿದ್ದಾರೆ.
ಏನಿದು ಒಲಿಂಪಿಕ್ ಆರ್ಡರ್?
ಒಲಿಂಪಿಕ್‌ನಲ್ಲಿ ವೈಯಕ್ತಿಕ ಸಾಧನೆ, ಕ್ರೀಡಾಕೂಟದ ಬಗ್ಗೆ ಸಕಾರಾತ್ಮಕ ಪ್ರಚಾರ, ಕ್ರೀಡೆಯ ಅಭಿವೃದ್ಧಿಗೆ ವಿವಿಧ ರೀತಿಗಳಲ್ಲಿ ನೆರವಾಗುವ ವ್ಯಕ್ತಿಗಳಿಗೆ ಐಒಸಿ ಒಲಿಂಪಿಕ್ ಆರ್ಡರ್ ಗೌರವ ನೀಡಲಿದೆ. ಒಲಿಂಪಿಕ್ ಆರ್ಡರ್ ಸಮಿತಿ ಈ ಗೌರವಕ್ಕೆ ಹೆಸರುಗಳನ್ನು ಶಿಫಾರಸು ಮಾಡಲಿದ್ದು, ಕಾರ್ಯಕಾರಿ ಸಮಿತಿ ನಿರ್ಧರಿಸಲಿದೆ.