ಬಾಕ್ಸರ್‌ ಅಮಿತ್‌, ಜಾಸ್ಮೀನ್‌ ಪ್ಯಾರಿಸ್‌ ಒಲಿಂಪಿಕ್ಸ್‌ ಪ್ರವೇಶ

| Published : Jun 03 2024, 12:31 AM IST / Updated: Jun 03 2024, 04:12 AM IST

ಸಾರಾಂಶ

ಒಲಿಂಪಿಕ್ಸ್‌ಗೇರಿದ ಭಾರತೀಯ ಬಾಕ್ಸರ್ಸ್‌ ಸಂಖ್ಯೆ ಈಗ 6. ಟೂರ್ನಿಯ ಇತ್ತೀಚೆಗಷ್ಟೇ ನಿಶಾಂತ್‌ ದೇವ್(71 ಕೆ.ಜಿ.) ಒಲಿಂಪಿಕ್ಸ್‌ ಅರ್ಹತೆ ಗಿಟ್ಟಿಸಿಕೊಂಡಿದ್ದರು.

ಬ್ಯಾಂಕಾಕ್‌: ಭಾರತದ ತಾರಾ ಬಾಕ್ಸರ್‌ ಅಮಿತ್‌ ಪಂಘಲ್‌ ಹಾಗೂ ಜಾಸ್ಮೀನ್‌ ಲಂಬೋರಿಯಾ ವಿಶ್ವ ಒಲಿಂಪಿಕ್ಸ್‌ ಅರ್ಹತಾ ಬಾಕ್ಸಿಂಗ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸುವ ಮೂಲಕ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. 

ಭಾರತದಿಂದ ಈ ಬಾರಿ ಒಲಿಂಪಿಕ್ಸ್‌ ಟಿಕೆಟ್‌ ಗಿಟ್ಟಿಸಿಕೊಂಡ ಬಾಕ್ಸರ್‌ಗಳ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ವಿಶ್ವ ಚಾಂಪಿಯನ್‌ಶಿಪ್‌ ಬೆಳ್ಳಿ ವಿಜೇತ ಅಂತಿಮ್‌ ಭಾನುವಾರ ನಡೆದ ಪುರುಷರ ವಿಭಾಗದ 51 ಕೆ.ಜಿ. ಸ್ಪರ್ಧೆಯಲ್ಲಿ ಚೀನಾದ ಚುವಾಂಗ್‌ ಲಿಯು ವಿರುದ್ಧ 5-0 ಅಂತರದಲ್ಲಿ ಗೆಲುವು ಸಾಧಿಸಿ, ಒಲಿಂಪಿಕ್ಸ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡರು. 

ಇದೇ ಟೂರ್ನಿಯಲ್ಲಿ ಇತ್ತೀಚೆಗಷ್ಟೇ ನಿಶಾಂತ್‌ ದೇವ್(71 ಕೆ.ಜಿ.) ಒಲಿಂಪಿಕ್ಸ್‌ ಅರ್ಹತೆ ಗಿಟ್ಟಿಸಿಕೊಂಡಿದ್ದರು. ಅಂತಿಮ್‌ ಒಲಿಂಪಿಕ್ಸ್‌ಗೇರಿದ ಭಾರತದ 2ನೇ ಪುರುಷ ಬಾಕ್ಸರ್‌.ಇನ್ನು, ಮಹಿಳೆಯರ 57 ಕೆ.ಜಿ. ವಿಭಾಗದಲ್ಲಿ ಜಾಸ್ಮೀನ್‌ ಮಾಲಿ ದೇಶದ ಮರೈನ್‌ ಕ್ಯಾಮರಾ ವಿರುದ್ಧ ಗೆಲುವು ಸಾಧಿಸಿದರು. 

ಭಾರತದ ಪರ್ವೀನ್‌ ಹೂಡಾ ಈ ಮೊದಲೇ 57 ಕೆ.ಜಿ. ವಿಭಾಗದಲ್ಲಿ ಕೋಟಾ ಗೆದ್ದಿದ್ದರು. ಆದರೆ ಡೋಪಿಂಗ್‌ ಪ್ರಕರಣದಲ್ಲಿ ಅಮಾನತುಗೊಂಡ ಕಾರಣ ಕೋಟಾ ಕಳೆದುಕೊಂಡಿದ್ದರು. ಹೀಗಾಗಿ ಜಾಸ್ಮೀನ್‌ ಅದೇ ವಿಭಾಗದಲ್ಲಿ ಸ್ಪರ್ಧಿಸಿ ಒಲಿಂಪಿಕ್ಸ್‌ ಕೋಟಾ ಗೆದ್ದಿದ್ದಾರೆ.ಅಂತಿಮ್‌, ಜಾಸ್ಮೀನ್‌ಗೂ ಮುನ್ನ ಮಹಿಳಾ ವಿಭಾಗದಲ್ಲಿ ನಿಖಾತ್‌ ಜರೀನ್‌(50 ಕೆ.ಜಿ.), ಪ್ರೀತಿ ಪವಾರ್‌(54 ಕೆ.ಜಿ.) ಹಾಗೂ ಲೊವ್ಲಿನಾ ಬೊರ್ಗೋಹೈನ್‌(75 ಕೆ.ಜಿ.) ಈ ಮೊದಲ ಒಲಿಂಪಿಕ್ಸ್‌ ಟಿಕೆಟ್‌ ಖಚಿತಪಡಿಸಿಕೊಂಡಿದ್ದರು.