ಬ್ರಾವೋ ಐಪಿಎಲ್‌ ಸೇರಿ 10ಕ್ಕೂ ಹೆಚ್ಚು ಟಿ20 ಲೀಗ್‌ಗಳಲ್ಲಿ ಆಡಿದ್ದಾರೆ. ಒಟ್ಟಾರೆ 582 ಪಂದ್ಯದಲ್ಲಿ 6970 ರನ್‌ ಗಳಿಸಿದ್ದು, 631 ವಿಕೆಟ್‌ ಕಿತ್ತಿದ್ದಾರೆ.

ಟ್ರಿನಿಡಾಡ್‌: ವೆಸ್ಟ್‌ಇಂಡೀಸ್‌ನ ಸಾರ್ವಕಾಲಿಕ ಶ್ರೇಷ್ಠ ಆಲ್ರೌಂಡರ್‌ಗಳಲ್ಲಿ ಓರ್ವರಾಗಿರುವ ಡ್ವೇನ್‌ ಬ್ರಾವೋ ಎಲ್ಲಾ ಮಾದರಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಇತ್ತೀಚೆಗಷ್ಟೇಬ್ರಾವೋ ಗಾಯದಿಂದಾಗಿ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ನಿಂದ ಹೊರಬಿದ್ದಿದ್ದರು. 

ಗುರುವಾರ ತಮ್ಮ 21 ವರ್ಷಗಳ ಸುದೀರ್ಘ ಕ್ರಿಕೆಟ್‌ ಬದುಕಿಗೆ ವಿದಾಯ ಪ್ರಕಟಿಸಿದ್ದಾರೆ.‘21 ವರ್ಷಗಳ ಪಯಣ ಕೊನೆಗೊಂಡಿದೆ. ಎಲ್ಲಾ ಮಾದರಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ. ಪ್ರತಿ ಹೆಜ್ಜೆಯಲ್ಲೂ ನಾನು ಶೇ.100ರಷ್ಟು ಆಟ ಪ್ರದರ್ಶಿಸಿದ್ದೇನೆ.

 ಈ ಮೂಲಕ ನನ್ನ ಕನಸು ನನಸಾಗಿಸಿದ್ದೇನೆ’ ಎಂದಿದ್ದಾರೆ. 40 ವರ್ಷದ ಬ್ರಾವೋ 2021ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು.2004ರಲ್ಲಿ ವಿಂಡೀಸ್‌ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಬ್ರಾವೊ 295 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಐಪಿಎಲ್‌ ಸೇರಿ 10ಕ್ಕೂ ಹೆಚ್ಚು ಟಿ20 ಲೀಗ್‌ಗಳಲ್ಲಿ ಆಡಿರುವ ಅವರು, 582 ಪಂದ್ಯದಲ್ಲಿ 6970 ರನ್‌ ಗಳಿಸಿದ್ದು, 631 ವಿಕೆಟ್‌ ಕಿತ್ತಿದ್ದಾರೆ. 

ಕೆಕೆಆರ್‌ಗೆ ಮೆಂಟರ್‌: ನಿವೃತ್ತಿ ಬೆನ್ನಲ್ಲೇ ಬ್ರಾವೋ ಕೆಕೆಆರ್‌ ತಂಡಕ್ಕೆ ಮಾರ್ಗದರ್ಶಕರಾಗಿ ನೇಮಕಗೊಂಡಿದ್ದಾರೆ. ಕಳೆದ ಬಾರಿ ಗೌತಮ್‌ ಗಂಭೀರ್‌ ಮಾರ್ಗದರ್ಶಕರಾಗಿದ್ದರು. ಅವರ ಸ್ಥಾನವನ್ನು ಬ್ರಾವೋ ತುಂಬಲಿದ್ದಾರೆ. ಬ್ರಾವೋ 2023ರಲ್ಲಿ ಚೆನ್ನೈ ತಂಡಕ್ಕೆ ಬೌಲಿಂಗ್‌ ಕೋಚ್‌ ಆಗಿದ್ದರು.