ದಕ್ಷಿಣ ಆಫ್ರಿಕಾ ವಿರುದ್ಧ 4ನೇ ಟಿ20: ಭಾರತೀಯ ಬ್ಯಾಟರ್‌ಗಳಿಂದ ರನ್‌ ಮಳೆ. ತಿಲಕ್‌ 47 ಎಸೆತಕ್ಕೆ 120. ಸ್ಯಾಮ್ಸನ್‌ 56 ಎಸೆತಕ್ಕೆ 109. ಒಟ್ಟು 23 ಸಿಕ್ಸರ್‌, 17 ಬೌಂಡರಿ.

ಜೋಹಾನ್ಸ್‌ಬರ್ಗ್‌: ಡರ್ಬನ್‌, ಸೆಂಚೂರಿಯನ್‌ ಬಳಿಕ ಜೋಹಾನ್ಸ್‌ಬರ್ಗ್‌ನಲ್ಲಿ ಭಾರತೀಯ ಬ್ಯಾಟರ್‌ಗಳು ಸಿಡಿದೆದ್ದಿದ್ದಾರೆ. ತಿಲಕ್‌ ವರ್ಮಾ ಹಾಗೂ ಸಂಜು ಸ್ಯಾಮ್ಸನ್‌ ಮತ್ತೆ ಅಬ್ಬರಿಸಿ ಬೊಬ್ಬಿರಿದಿದ್ದಾರೆ.

 ಭರ್ಜರಿ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗೈದ ಸಂಜು ಹಾಗೂ ತಿಲಕ್‌ ಸೆಂಚುರಿ ಬಾರಿಸಿದ್ದು, ಭಾರತ ತಂಡ ಟಿ20ಯಲ್ಲಿ 2ನೇ ಗರಿಷ್ಠ ಸ್ಕೋರ್‌ ದಾಖಲಿಸಲು ನೆರವಾಗಿದ್ದಾರೆ.ಶುಕ್ರವಾರ ದ.ಆಫ್ರಿಕಾ ವಿರುದ್ಧ 2ನೇ ಟಿ20 ಪಂದ್ಯ ಅಕ್ಷರಶಃ ರನ್‌ ಮಳೆಗೆ ಸಾಕ್ಷಿಯಾಯಿತು. ತಂಡ 20 ಓವರ್‌ಗಳಲ್ಲಿ ಕೇವಲ 1 ವಿಕೆಟ್‌ಗೆ 283 ರನ್‌ ಕಲೆಹಾಕಿತು. 

ಇದು ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಂಡವೊಂದರ 5ನೇ ಗರಿಷ್ಠ. ಇತ್ತೀಚೆಗಷ್ಟೇ ಗಾಂಬಿಯಾ ವಿರುದ್ಧ ಜಿಂಬಾಬ್ವೆ 344 ರನ್‌ ಕಲೆಹಾಕಿತ್ತು. ಕಳೆದ ತಿಂಗಳು ಬಾಂಗ್ಲಾದೇಶ ವಿರುದ್ಧ 6 ವಿಕೆಟ್‌ಗೆ 297 ರನ್‌ ಗಳಿಸಿದ್ದು ಭಾರತದ ಗರಿಷ್ಠ.

ಸ್ಫೋಟಕ ಶತಕ: 2ನೇ ಓವರ್‌ನಿಂದಲೇ ಸ್ಫೋಟಕ ಆಟಕ್ಕಿಳಿದ ಸಂಜು ಅಂ.ರಾ. ಟಿ20ಯಲ್ಲಿ 3ನೇ ಹಾಗೂ ಈ ಸರಣಿಯಲ್ಲಿ 2ನೇ ಶತಕ ಪೂರ್ಣಗೊಳಿಸಿದರು. 56 ಎಸೆತಗಳನ್ನು ಎದುರಿಸಿದ ಅವರು 6 ಬೌಂಡರಿ, 9 ಸಿಕ್ಸರ್‌ಗಳೊಂದಿಗೆ 109 ರನ್‌ ಸಿಡಿಸಿ ಔಟಾಗದೆ ಉಳಿದರು. 

ಅಭಿಷೇಕ್‌ ಶರ್ಮಾ(36) ಔಟಾದ ಬಳಿಕ ಸಂಜು ಜೊತೆಗೂಡಿ ಸ್ಫೋಟಕ ಆಟವಾಡಿದ ತಿಲಕ್‌ ವರ್ಮಾ ಸತತ 2ನೇ ಶತಕ ಸಿಡಿಸಿದರು. ಅವರು ಕೇವಲ 47 ಎಸೆತಗಳಲ್ಲಿ 9 ಬೌಂಡರಿ, 10 ಸಿಕ್ಸರ್‌ಗಳೊಂದಿಗೆ ಅಜೇಯ 120 ರನ್‌ ಚಚ್ಚಿದರು. ಇವರಿಬ್ಬರ ನಡುವೆ ಮುರಿಯದ 2ನೇ ವಿಕೆಟ್‌ಗೆ 210 ರನ್‌ ಹರಿದುಬಂತು.

ಒಂದೇ ಇನ್ನಿಂಗ್ಸ್‌ನಲ್ಲಿ 2 ಶತಕ: ಇದು 3ನೇ ಸಲ

ಅಂತಾರಾಷ್ಟ್ರೀಯ ಟಿ20 ಇನ್ನಿಂಗ್ಸ್‌ನಲ್ಲಿ ತಂಡವೊಂದರ ಪರ ಇಬ್ಬರು ಶತಕ ಬಾರಿಸಿದ್ದು ಇದು 3ನೇ ಬಾರಿ. 2022ರಲ್ಲಿ ಬಲ್ಗೇರಿಯಾ ವಿರುದ್ಧ ಚೆಕ್‌ ಗಣರಾಜ್ಯದ ಸಬಾವುನ್‌ ಡೇವಿಜಿ, ಡೈಲನ್‌ ಸ್ಟೇಯ್ನ್‌, ಕಳೆದ ಫೆಬ್ರವರಿಯಲ್ಲಿ ಚೀನಾ ವಿರುದ್ಧ ಜಪಾನ್‌ನ ಯಮಮೊಟೊ ಲೇಕ್‌-ಕೆಂಡೆಲ್‌ ಫ್ಲೆಮಿಂಗ್‌ ಶತಕ ಬಾರಿಸಿದ್ದರು.

ಸತತ 2 ಟಿ20 ಸೆಂಚುರಿ: ತಿಲಕ್‌ 2ನೇ ಭಾರತೀಯ

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನ ಸತತ 2 ಪಂದ್ಯಗಳಲ್ಲಿ ಶತಕ ಬಾರಿಸಿದ ವಿಶ್ವದ 5ನೇ ಹಾಗೂ ಭಾರತದ 2ನೇ ಬ್ಯಾಟರ್ ತಿಲಕ್‌ ವರ್ಮಾ. ಸಂಜು ಸ್ಯಾಮ್ಸನ್‌, ಫ್ರಾನ್ಸ್‌ನ ಗುಸ್ಟವ್‌ ಮೆಕೋನ್‌, ದ.ಆಫ್ರಿಕಾದ ರಿಲೀ ರೋಸೌ, ಇಂಗ್ಲೆಂಡ್‌ನ ಫಿಲ್‌ ಸಾಲ್ಟ್‌ ಕೂಡಾ ಸತತ 2 ಪಂದ್ಯಗಳಲ್ಲಿ ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ.

ವರ್ಷದಲ್ಲಿ 3 ಶತಕ: ಸ್ಯಾಮ್ಸನ್‌ ದಾಖಲೆ

ಸಂಜು ಸ್ಯಾಮ್ಸನ್‌ ಈ ವರ್ಷ ಅಂ.ರಾ. ಟಿ20 ಕ್ರಿಕೆಟ್‌ನಲ್ಲಿ 3ನೇ ಶತಕ ಬಾರಿಸಿದರು. ಈ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟರ್‌ ಎನಿಸಿಕೊಂಡರು. ಅವರ ಮೂರು ಶತಕಗಳು ಕೇವಲ 5 ಇನ್ನಿಂಗ್ಸ್‌ ಅಂತರದಲ್ಲಿ ದಾಖಲಾಗಿವೆ ಎಂಬುದು ಗಮನಾರ್ಹ.

01ನೇ ತಂಡ: ಟಿ20 ಸರಣಿ/ಟೂರ್ನಿಯಲ್ಲಿ 4 ಶತಕ ಬಾರಿಸಿದ ಮೊದಲ ತಂಡ ಭಾರತ.

01ನೇ ಬಾರಿ: ಟಿ20 ಪಂದ್ಯದಲ್ಲಿ ಭಾರತೀಯರಿಂದ 200+ ರನ್‌ ಜೊತೆಯಾಟ ಕಂಡುಬಂದಿದ್ದು ಇದೇ ಮೊದಲು.

01ನೇ ಗರಿಷ್ಠ: 283 ರನ್‌ ದ.ಆಫ್ರಿಕಾದಲ್ಲಿ ಯಾವುದೇ ಟಿ20 ಪಂದ್ಯದಲ್ಲಿ ದಾಖಲಾದ ಗರಿಷ್ಠ ಮೊತ್ತ.