ಸಾರಾಂಶ
ದುಬೈ: ಭಾರತದ ತಾರಾ ವೇಗಿ ಜಸ್‌ಪ್ರೀತ್ ಬೂಮ್ರಾ ಟೆಸ್ಟ್ ಬೌಲರ್‌ಗಳ ಪಟ್ಟಿಯಲ್ಲಿ ಮತ್ತೆ ನಂಬರ್ 1 ಸ್ಥಾನಕ್ಕೇರಿದ್ದಾರೆ. ಬಾಂಗ್ಲಾದೇಶ ವಿರುದ್ಧ 2ನೇ ಪಂದ್ಯದಲ್ಲಿ ಆರು ವಿಕೆಟ್ ಕಬಳಿಸಿದ 30 ವರ್ಷದ ಬೂಮ್ರಾ, ಬುಧವಾರ ಪ್ರಕಟಗೊಂಡ ನೂತನ ಪಟ್ಟಿಯಲ್ಲಿ ಆರ್.ಅಶ್ವಿನ್‌ರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದರು.
ಸದ್ಯ ಬೂಮ್ರಾ 870 ರೇಟಿಂಗ್ ಅಂಕಗಳನ್ನು ಹೊಂದಿದ್ದರೆ, ಅಶ್ವಿನ್ 869 ಅಂಕಗಳೊಂದಿಗೆ 2ನೇ ಸ್ಥಾನಕ್ಕೆ ಜಾರಿದ್ದಾರೆ. ರವೀಂದ್ರ ಜಡೇಜಾ 6ನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ.ಬ್ಯಾಟರ್‌ಗಳ ರ್‍ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಯುವ ತಾರೆ ಯಶಸ್ವಿ ಜೈಸ್ವಾಲ್ ಜೀವನಶ್ರೇಷ್ಠ 3ನೇ ಸ್ಥಾನಕ್ಕೇರಿದ್ದಾರೆ. ಅವರು 2 ಸ್ಥಾನ ಪ್ರಗತಿ ಸಾಧಿಸಿದ್ದು, ಸದ್ಯ 792 ರೇಟಿಂಗ್ ಅಂಕ ಹೊಂದಿದ್ದಾರೆ.
ರನ್ ಮೆಷಿನ್ ಕೊಹ್ಲಿ ಮತ್ತೆ ಅಗ್ರ-10ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು, 6 ಸ್ಥಾನ ಮೇಲೇರಿ 6ನೇ ಸ್ಥಾನ ತಲುಪಿದ್ದಾರೆ. ರಿಷಭ್ ಪಂತ್ 3 ಸ್ಥಾನ ಕುಸಿತ ಕಂಡು 9ನೇ, ರೋಹಿತ್ ಶರ್ಮಾ 5 ಸ್ಥಾನ ಕೆಳಕ್ಕೆ ಜಾರಿ 15ನೇ ಸ್ಥಾನದಲ್ಲಿದ್ದಾರೆ. ಪಟ್ಟಿಯಲ್ಲಿ ಇಂಗ್ಲೆಂಡ್ ಜೋ ರೂಟ್ ಅಗ್ರಸ್ಥಾನದಲ್ಲಿದ್ದಾರೆ. ಆಲ್ರೌಂಡರ್‌ಗಳ ಪಟ್ಟಿಯಲ್ಲಿ ಜಡೇಜಾ ನಂ.1, ಅಶ್ವಿನ್ 2ನೇ ಸ್ಥಾನದಲ್ಲಿದ್ದಾರೆ.
ನಂ.1 ಸ್ಥಾನದಲ್ಲಿ ಭಾರತ
ಟೆಸ್ಟ್ ತಂಡ ರ್‍ಯಾಂಕಿಂಗ್‌ನಲ್ಲಿ ಭಾರತ 120 ಅಂಕಗಳೊಂದಿಗೆ ಅಗ್ರಸ್ಥಾನ ಭದ್ರಪಡಿಸಿಕೊಂಡಿದ್ದು, ಆಸ್ಟ್ರೇಲಿಯಾ(120 ಅಂಕ) 2ನೇ ಸ್ಥಾನದಲ್ಲಿದೆ. ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಶ್ರೀಲಂಕಾ, ವೆಸ್ಟ್‌ಇಂಡೀಸ್, ಪಾಕಿಸ್ತಾನ ತಂಡಗಳು ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ.