45ನೇ ಚೆಸ್‌ ಒಲಿಂಪಿಯಾಡ್‌ : ಭಾರತ ಮುನ್ನಡೆ - ಪುರುಷ ಹಾಗೂ ಮಹಿಳಾ ತಂಡಗಳೆರಡೂ ಅಗ್ರಸ್ಥಾನ

| Published : Sep 17 2024, 12:47 AM IST / Updated: Sep 17 2024, 04:17 AM IST

ಸಾರಾಂಶ

45ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತೀಯ ತಂಡಗಳು ಗೆಲುವಿನ ಓಟ ಮುಂದುವರಿಸಿವೆ. ಪುರುಷರ ತಂಡ ಅಜರ್‌ಬೈಜಾನ್‌ ವಿರುದ್ಧ 3-1ರಲ್ಲಿ ಗೆಲುವು ಸಾಧಿಸಿದರೆ, ಮಹಿಳಾ ತಂಡ ಕಜಕಸ್ತಾನವನ್ನು 2.5-1.5 ಅಂತರದಲ್ಲಿ ಮಣಿಸಿತು. 5ನೇ ಸುತ್ತಿನ ಬಳಿಕ ಭಾರತ ಪುರುಷ ಹಾಗೂ ಮಹಿಳಾ ತಂಡಗಳೆರಡೂ ಅಗ್ರಸ್ಥಾನದಲ್ಲಿವೆ.

ಬುಡಾಪೆಸ್ಟ್‌ (ಹಂಗೇರಿ): ಇಲ್ಲಿ ನಡೆಯುತ್ತಿರುವ 45ನೇ ಚೆಸ್‌ ಒಲಿಂಪಿಯಾಡ್‌ನಲ್ಲಿ ಭಾರತೀಯ ತಂಡಗಳು ಗೆಲುವಿನ ಓಟ ಮುಂದುವರಿಸಿವೆ. 5ನೇ ಸುತ್ತಿನಲ್ಲಿ ಭಾರತ ಪುರುಷರ ತಂಡ ಅಜರ್‌ಬೈಜಾನ್‌ ವಿರುದ್ಧ 3-1ರ ಗೆಲುವು ಸಾಧಿಸಿತು. ಡಿ.ಗುಕೇಶ್‌ ಹಾಗೂ ಅರ್ಜುನ್‌ ಎರಿಗೈಸಿ ತಮ್ಮ ಎದುರಾಳಿಗಳನ್ನು ಸೋಲಿಸಿದರೆ, ಆರ್‌.ಪ್ರಜ್ಞಾನಂದ ಹಾಗೂ ವಿದಿತ್‌ ಗುಜರಾತಿ ಡ್ರಾ ಸಾಧಿಸಿದರು.

ಇನ್ನು, ಮಹಿಳಾ ತಂಡ ಕಜಕಸ್ತಾನ ವಿರುದ್ಧ 2.5-1.5ರಲ್ಲಿ ಜಯ ಪಡೆಯಿತು. ಡಿ. ಹರಿಕಾ ಆಘಾತಕಾರಿ ಸೋಲುಂಡರೆ, ವಂತಿಕಾ ಅಗರ್ವಾಲ್‌ ಹಾಗೂ ಆರ್‌. ವೈಶಾಲಿ ಗೆಲುವು ಪಡೆದರು. ದಿವ್ಯಾ ದೇಶ್‌ಮುಖ್‌ ಡ್ರಾ ಸಾಧಿಸಿದರು.

5ನೇ ಸುತ್ತಿನ ಬಳಿಕ ಭಾರತ ಪುರುಷ ಹಾಗೂ ಮಹಿಳಾ ತಂಡಗಳೆರಡೂ, ತಲಾ 10 ಅಂಕಗಳನ್ನು ಹೊಂದಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ.