ಕೆಎಸ್‌ಸಿಎ ಮಹಾರಾಜ ಟ್ರೋಫಿಯಲ್ಲಿ ಬೆಂಗಳೂರಿಗೆ 5ನೇ ಜಯ : ಅಂಕ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನ

| Published : Aug 26 2024, 01:38 AM IST / Updated: Aug 26 2024, 04:02 AM IST

Maharaja Trophy

ಸಾರಾಂಶ

ಕೆಎಸ್‌ಸಿಎ ಟಿ20 ಲೀಗ್‌ನಲ್ಲಿ ಮೈಸೂರು ವಿರುದ್ಧ 56 ರನ್‌ ಭರ್ಜರಿ ಗೆಲುವು. 5ನೇ ಜಯದೊಂದಿಗೆ ಅಗ್ರಸ್ಥಾನ. 8 ಪಂದ್ಯಗಳಲ್ಲಿ 4ನೇ ಸೋಲು ಕಂಡ ಮೈಸೂರು ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.

ಬೆಂಗಳೂರು: ಕೆಎಸ್‌ಸಿಎ ಮಹಾರಾಜ ಟ್ರೋಫಿ ಟಿ20 ಲೀಗ್‌ನಲ್ಲಿ 5ನೇ ಗೆಲುವು ಸಾಧಿಸಿದ ಬೆಂಗಳೂರು ಬ್ಲಾಸ್ಟರ್ಸ್‌ ತಂಡ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದೆ. ಭಾನುವಾರ ಮೈಸೂರು ವಾರಿಯರ್ಸ್‌ ವಿರುದ್ಧ ಬೆಂಗಳೂರು 56 ರನ್‌ ಜಯಗಳಿಸಿತು.

 8 ಪಂದ್ಯಗಳಲ್ಲಿ 4ನೇ ಸೋಲು ಕಂಡ ಮೈಸೂರು ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.ಮೊದಲು ಬ್ಯಾಟ್‌ ಮಾಡಿದ ಬೆಂಗಳೂರು 7 ವಿಕೆಟ್‌ಗೆ 189 ರನ್‌ ಕಲೆಹಾಕಿತು. ಎಲ್‌.ಆರ್‌.ಚೇತನ್‌ ಮತ್ತೊಮ್ಮೆ ಸ್ಫೋಟಕ ಆಟವಾಡಿದರು. ಅವರು 53 ಎಸೆತಗಳಲ್ಲಿ 9 ಬೌಂಡರಿ, 5 ಸಿಕ್ಸರ್‌ನೊಂದಿಗೆ 88 ರನ್‌ ಸಿಡಿಸಿದರು. ಉಳಿದಂತೆ ಸೂರಜ್‌ ಅಹುಜಾ 16 ಎಸೆತಗಳಲ್ಲಿ 32, ಶಿವಕುಮಾರ್‌ ರಕ್ಷಿತ್‌ 29 ರನ್‌ ಗಳಿಸಿದರು. 

ಕಾರ್ತಿಕ್‌ ಸಿ.ಎ. 3 ವಿಕೆಟ್‌ ಕಬಳಿಸಿದರು.ದೊಡ್ಡ ಗುರಿ ಬೆನ್ನತ್ತಿದ ಮೈಸೂರು ತಂಡ 17.5 ಓವರ್‌ಗಳಲ್ಲಿ 133 ರನ್‌ಗೆ ಸರ್ವಪತನ ಕಂಡಿತು. ಎಸ್‌.ಯು. ಕಾರ್ತಿಕ್‌(26) ತಂಡದ ಪರ ಗರಿಷ್ಠ ವೈಯಕ್ತಿಕ ಮೊತ್ತ ಗಳಿಸಿದರು. ಹರ್ಷಿಲ್‌ ಧರ್ಮಾನಿ 20, ಕಾರ್ತಿಕ್‌ ಸಿ.ಎ. 17 ರನ್‌ ಸಿಡಿಸಿದ್ದು ಬಿಟ್ಟರೆ ಇತರರಿಂದ ತಂಡಕ್ಕೆ ಉಪಯುಕ್ತ ಕೊಡುಗೆ ಲಭಿಸಲಿಲ್ಲ. ಶುಭಾಂಗ್‌ ಹೆಗ್ಡೆ ಹಾಗೂ ಕ್ರಾಂತಿ ಕುಮಾರ್‌ ತಲಾ 3 ವಿಕೆಟ್‌ ಕಿತ್ತರು.

ಪಂದ್ಯಶ್ರೇಷ್ಠ: ಎಲ್‌.ಆರ್. ಚೇತನ್‌

ಇಂದಿನ ಪಂದ್ಯಗಳು: ಮಂಗಳೂರು-ಹುಬ್ಬಳ್ಳಿ, ಮಧ್ಯಾಹ್ನ 3 ಗಂಟೆಗೆ, ಬೆಂಗಳೂರು-ಗುಲ್ಬರ್ಗಾ, ಸಂಜೆ 7 ಗಂಟೆಗೆ